ಬೆಂಗಳೂರು:ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಪಟ್ಟ ಜಿಲ್ಲಾ ಚುನಾವಣಾಧಿಕಾರಿಗಳು ಶುಕ್ರವಾರ (ಏಪ್ರಿಲ್ 12) ಅಧಿಸೂಚನೆ ಹೊರಡಿಸಲಿದ್ದು ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ.
ಕರ್ನಾಟಕದಲ್ಲಿ ಎರಡನೇ ಹಂತದಲ್ಲಿ ನಡೆಯುತ್ತಿರುವ ಚುನಾವಣೆಗೆ ಮಾಜಿ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸಂಪುಟದ ಸಚಿವರ ಸಂಬಂಧಿಕರೇ ಹೆಚ್ಚಿನ ಮಂದಿ ಕಣಕ್ಕಿಳಿಯಲಿದ್ದಾರೆ.
ಮೇ 7ರಂದು ಮತದಾನ
ದಾವಣಗೆರೆ, ಶಿವಮೊಗ್ಗ, ಹಾವೇರಿ, ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ಚಿಕ್ಕೋಡಿ, ವಿಜಾಪುರ, ಬಾಗಲಕೋಟೆ, ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳಿಗೆ ನಾಳೆಯಿಂದ ನಾಮಪತ್ರ ಸಲ್ಲಿಕೆ ಮಾಡಬಹುದಾಗಿದೆ.
ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 19 ಕಡೆಯ ದಿನವಾಗಿದ್ದು, 20 ರಂದು ನಾಮಪತ್ರ ಪರಿಶೀಲನೆ, ಏಪ್ರಿಲ್ 22 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕಡೆಯ ದಿನವಾಗಿರುತ್ತದೆ.
ಮೇ 7ರಂದು ಮತದಾನ ನಡೆಯಲಿದ್ದು, ಫಲಿತಾಂಶ ಜೂನ್ 4ರಂದು ಪ್ರಕಟಗೊಳ್ಳಲಿದೆ.
ಸಚಿವರು, ಪ್ರಭಾವಿಗಳ ಸಂಬಂಧಿಗಳು
ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಚುನಾವಣೆಯಲ್ಲಿ ಪ್ರಭಾವಿಗಳು ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (ಬೆಳಗಾವಿ), ಬಸವರಾಜ ಬೊಮ್ಮಾಯಿ (ಹಾವೇರಿ), ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ (ಶಿವಮೊಗ್ಗ), ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮಾಜಿ ಮುಖ್ಯಮಂತ್ರಿ, ದಿವಂಗತ ಎಸ್. ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್‌ಕುಮಾರ್ ಕಣಕ್ಕಿಳಿಯಲಿದ್ದಾರೆ.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪತ್ನಿ ಪ್ರಭಾವತಿ ಮಲ್ಲಿಕಾರ್ಜುನ್ (ದಾವಣಗೆರೆ), ಇದೇ ಕ್ಷೇತ್ರದಲ್ಲಿ ಸಂಸದ ಸಿದ್ದೇಶ್ವರ್ ಪತ್ನಿ ಗಾಯತ್ರಿ ಸಿದ್ದೇಶ್ವರ್ ಕಣಕ್ಕಿಳಿಯುತ್ತಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕ (ಚಿಕ್ಕೋಡಿ), ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್, ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತ ಪಾಟೀಲ್ (ಬಾಗಲಕೋಟೆ), ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ (ಗುಲ್ಬರ್ಗ) ಕಾಂಗ್ರೆಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ಬಿ.ಶ್ರೀರಾಮುಲು ಬಳ್ಳಾರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಧಾರವಾಡದಿಂದ, ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತರ ಕನ್ನಡ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ.
ಈಗಾಗಲೇ ಹಳೆ ಮೈಸೂರು ಭಾಗದ ಚಾಮರಾಜನಗರ, ಮೈಸೂರು-ಕೊಡಗು, ಹಾಸನ, ಚಿಕ್ಕಮಗಳೂರು-ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದೆ.