ಬೆಂಗಳೂರು:ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಪ್ರಮುಖ ಶಂಕಿತ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮತೀನ್ ತಾಹನನ್ನು ಪಶ್ಚಿಮ ಬಂಗಾಳದಲ್ಲಿ ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ತೀರ್ಥಹಳ್ಳಿಯ ಮುಸಾವೀರ್ ಹಾಗೂ ಅಬ್ದುಲ್ ತಾಹ ಬಾಂಬ್ ಸ್ಫೋಟ ಘಟನೆ ನಂತರ ತಲೆ ಮರೆಸಿಕೊಂಡಿದ್ದರು. ಕಲಬುರಗಿ ಮಾರ್ಗವಾಗಿ ಪಶ್ಚಿಮ ಬಂಗಾಳ ತಲುಪಿ ಅಲ್ಲೇ ನೆಲೆಸಿದ್ದರು.
ಹಲವು ಪ್ರಕರಣಗಳಲ್ಲಿ ಭಾಗಿ
ಅಬ್ದುಲ್ ಮತೀನ್ ತಾಹ ಹಲವು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ರಾಮೇಶ್ವರಂ ಬಾಂಬ್ ಪ್ರಕರಣದ ರೂವಾರಿಯೂ ಈತನೇ.
ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಈತ ಎನ್‌ಐಎನ ಮೋಸ್ಟ್ ವಾಂಟೆಡ್‌ಗಳ ಪಟ್ಟಿಯಲ್ಲಿದ್ದ, ಅಬ್ದುಲ್ ಮತೀನ್ ವಿದೇಶಗಳಿಂದ ಹಣ ತರಿಸಿಕೊಂಡು ಅದನ್ನು ವಿಧ್ವಂಸಕ ಕೃತ್ಯ ನಡೆಸಲು, ಯುವಕರನ್ನು ಜಿಹಾದಿಗಳನ್ನಾಗಿ ತಯಾರು ಮಾಡಲು ಬಳಸುತ್ತಿದ್ದ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.
ಈತ ಅಲ್ ಹಿಂದ್ ಸಂಘಟನೆಯಲ್ಲಿದ್ದು, ತೀರ್ಥಹಳ್ಳಿ ಬಿಡುವುದಕ್ಕೂ ಮುನ್ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ನಂತರ ಪಾಟ್ನಾದಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ, ಅಲ್ ಹಿಂದ್ ಸಂಘಟನೆ ಸೇರಿದ ನಂತರ ಕುಕ್ಕರ್ ಬಾಂಬ್ ತಯಾರಿಕೆಯಲ್ಲಿ ನಿಪುಣನಾಗಿದ್ದ.
ಅಡಗಲು ಸಹಾಯ
ಅಲ್ ಹಿಂದ್ ಸಂಘಟನೆ ಸದಸ್ಯರಿಗೆ ಅಬ್ದುಲ್ ಮತೀನ್ ತಾಹ ಅಡಗಲು ಸಹಾಯ ಮಾಡುತ್ತಿದ್ದ, ಈತನ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನವನ್ನೂ ಎನ್‌ಐಎ ಘೋಷಿಸಿತ್ತು.
ಮಂಗಳೂರಿನಲ್ಲಿ ಈತ ನಡೆಸಿದ ಮೊದಲ ಪ್ರಯೋಗ ವಿಫಲವಾದ ನಂತರ ಬೆಂಗಳೂರಿನ ಐಟಿ ಕಾರಿಡಾರ್‌ನಲ್ಲಿ ವಿಧ್ವಂಸಕ ಕೃತ್ಯ ನಡೆಸಿ ವಿಶ್ವ ಮಟ್ಟದಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದ.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ ನಂತರ ಈ ಇಬ್ಬರು ಅಸ್ಸಾಂ ಮಾರ್ಗವಾಗಿ ಪಶ್ಚಿಮ ಬಂಗಾಳಕ್ಕೆ ತೆರಳಿ ಕೊಲ್ಕತಾದ ಮನೆಯೊಂದರಲ್ಲಿ ವಾಸವಾಗಿದ್ದರು.
ನಕಲಿ ದಾಖಲೆ
ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮತೀನ್ ತಾಹ ನಕಲಿ ದಾಖಲೆಗಳೊಂದಿಗೆ ತಲೆಮರೆಸಿಕೊಂಡಿದ್ದರು.
ತಮಿಳುನಾಡು, ಒಡಿಶಾ, ಅಸ್ಸಾಂ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬಾಂಬ್ ಸ್ಫೋಟ ಆರೋಪಿಗಳಿಗಾಗಿ ಎನ್‌ಐಎ ಶೋಧನೆ ನಡೆಸಿತ್ತು.
ಅಧಿಕಾರಿಗಳಿಗೆ ದೊರೆತ ಮಾಹಿತಿ ಆಧರಿಸಿ ಸ್ಥಳೀಯ ಪೊಲೀಸರ ನೆರವಿನಿಂದ ಇವರನ್ನು ಬಂಧಿಸಿ ಹೆಚ್ಚಿನ ತನಿಖೆಗೆ ಬೆಂಗಳೂರಿಗೆ ಕರೆತರಲಾಗಿದೆ.