ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರುಗಳು ಕಾಂಗ್ರೆಸ್ ವಿರುದ್ಧ ಸಮರ ಸಾರಲು ಒಂದೇ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ.
ಕರ್ನಾಟಕದಲ್ಲಿ ನಡೆಯುತ್ತಿರುವ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲು ಮೋದಿ ಅವರು ಇದೇ 14 ರಂದು ಒಂದು ದಿನದ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.
ಏಳು ಲೋಕಸಭಾ ಕ್ಷೇತ್ರ
ಅಂದು ಮೈಸೂರು ಹಾಗೂ ಮಂಗಳೂರಿನಲ್ಲಿ ಏಳು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
ಜೆಡಿಎಸ್, ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡ ನಂತರ ಇದೇ ಮೊದಲ ಬಾರಿಗೆ ಮೋದಿ ಹಾಗೂ ಗೌಡರು ಮೈಸೂರಿನ ಮಹಾರಾಜ ಕಾಲೇಜಿನ ಆವರಣದಲ್ಲಿ ನಡೆಯುವ ಚುನಾವಣಾ ಪ್ರಚಾರದ ವೇದಿಕೆಯಲ್ಲಿ ಕಾಂಗ್ರೆಸ್ ವಿರುದ್ಧ ಗುಡುಗಲಿದ್ದಾರೆ.
ಅಂದು ಸಂಜೆ 4 ಗಂಟೆಗೆ ನಡೆಯುವ ಬಿಜೆಪಿ-ಜೆಡಿಎಸ್ ಮೈತ್ರಿ ಸಮಾವೇಶದಲ್ಲಿ ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರ ಉಭಯ ನಾಯಕರು ಮತ ಯಾಚಿಸಲಿದ್ದಾರೆ.
ಎನ್‌ಡಿಎ ಅಭ್ಯರ್ಥಿಗಳ ಪರ ಮತ ಯಾಚನೆ
ಕಳೆದ ವಿಧಾನಸಭಾ ಚುನಾವಣೆವರೆಗೂ ಸಿದ್ಧಾಂತದ ಆಧಾರದ ಮೇಲೆ ರಾಜಕೀಯ ಮಾಡಿಕೊಂಡು ಬಂದ ಈ ನಾಯಕರು, ಇಂದು ತಮ್ಮ ಹಳೆಯ ಎಲ್ಲಾ ರಾಜಕೀಯ ವೈಮಸ್ಸನ್ನು ದೂರವಿಟ್ಟು ಎನ್‌ಡಿಎ ಅಭ್ಯರ್ಥಿಗಳ ಪರ ಮತ ಯಾಚಿಸುತ್ತಿದ್ದಾರೆ.
ಚುನಾವಣೆಗೆ ಸಂಬಂಧಿಸಿದಂತೆ ಈ ಇಬ್ಬರು ನಾಯಕರು ಇದೇ ಪ್ರಥಮ ಬಾರಿಗೆ ವೇದಿಕೆ ಹಂಚಿಕೊಂಡು ಕಾಂಗ್ರೆಸ್ ವಿರುದ್ಧ ರಾಜಕೀಯ ಟೀಕಾಸ್ತ್ರಗಳನ್ನು ನಡೆಸಿ ಪಕ್ಷದ ಅಭ್ಯರ್ಥಿಗಳ ಪರ ಮತ ನೀಡುವಂತೆ ಮನವಿ ಮಾಡಿಕೊಳ್ಳಲಿದ್ದಾರೆ.
ಮಹಾರಾಜ ಕಾಲೇಜಿನ ಆವರಣಲ್ಲಿ ನಡೆಯುವ ಸಮಾರಂಭ ಬಿಜೆಪಿ-ಜೆಡಿಎಸ್ ಜಂಟಿ ಸಮಾವೇಶವಾಗಿದ್ದು, ಇದರಲ್ಲಿ ಮೋದಿ ಹಾಗೂ ದೇವೇಗೌಡರಲ್ಲದೆ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿರುವರು.
ಮೈಸೂರು ಪ್ರವಾಸ ಮುಗಿಸಿ ಪ್ರಧಾನಿ ಅವರು, ಮಂಗಳೂರಿನಲ್ಲಿ ಬೃಹತ್ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ.
ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟಕ್ಕೂ ಮುನ್ನವೇ ಮೋದಿ ಅವರು, ಶಿವಮೊಗ್ಗದಲ್ಲಿ ಬೃಹತ್ ರ‍್ಯಾಲಿ ಉದ್ದೇಶಿಸಿ ಮಾತನಾಡಿದ್ದರು.
ಅಂದು ಐದು ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳನ್ನು ವೇದಿಕೆ ಮೇಲೆ ಪಕ್ಕದಲ್ಲಿ ನಿಲ್ಲಿಸಿಕೊಂಡು ಮತದಾರರಿಗೆ ಪರಿಚಯ ಮಾಡಿಸಿದ್ದರು.
ಎರಡನೇ ಬಾರಿಗೆ ರಾಜ್ಯದಲ್ಲಿ
ಇದಾದ ನಂತರ ಮೋದಿ ಎರಡನೇ ಬಾರಿಗೆ ರಾಜ್ಯದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುತ್ತಿದ್ದಾರೆ.
ಮೋದಿ ಅವರು ಹಿಂತಿರುಗುತ್ತಿದ್ದಂತೆ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಏಪ್ರಿಲ್ 16ರಂದು ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ.