ರೋಡ್ ಶೋ-ಬೃಹತ್ ಸಮಾವೇಶ
ಬೆಂಗಳೂರು:ಜೆಡಿಎಸ್ ಭದ್ರಕೋಟೆ ಮಂಡ್ಯ, ಕೋಲಾರದಲ್ಲಿ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಏಪ್ರಿಲ್ 17ರಂದು ಚುನಾವಣಾ ರೋಡ್ ಶೋ ಹಾಗೂ ಬೃಹತ್ ಸಮಾವೇಶ ನಡೆಸಲಿದ್ದಾರೆ.
ಅಂದು ರಾಹುಲ್ ಗಾಂಧಿ ಮಂಡ್ಯದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡುವ ಮೂಲಕ ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡುವ ವೇದಿಕೆ ಮಾಡಿಕೊಳ್ಳಲಿದ್ದಾರೆ.
ರಾಹುಲ್ ಕರ್ನಾಟಕ ಪ್ರವಾಸ
ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಹಂತದ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಎನ್‌ಡಿಎ ಅಭ್ಯರ್ಥಿಗಳ ಪರ ಒಂದು ಸುತ್ತಿನ ಚುನಾವಣಾ ಪ್ರಚಾರ ಮುಗಿಸಿ ಹಿಂತಿರುಗುತ್ತಿದ್ದಂತೆ, ರಾಹುಲ್ ಕರ್ನಾಟಕದಲ್ಲಿ ಮೊದಲ ಪ್ರವಾಸ ಕೈಗೊಂಡಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎನ್‌ಡಿಎ ಅಭ್ಯರ್ಥಿಯಾಗಿ ಮಂಡ್ಯದಲ್ಲಿ ಕಣಕ್ಕಿಳಿದಿರುವ ಜೊತೆಗೆ ಬಿಜೆಪಿಯ ಹೆಗಲಿಗೆ ಹೆಗಲು ಕೊಟ್ಟು ಮೈತ್ರಿಕೂಟದ ಅಭ್ಯರ್ಥಿಗಳ ಪರ ಹೋರಾಟ ನಡೆಸಿದ್ದಾರೆ.
ರಾಹುಲ್ ಪ್ರಚಾರ ಕೈಗೊಳ್ಳುವ ಕೋಲಾರದಲ್ಲೂ ಜೆಡಿಎಸ್‌ನ ಮಲ್ಲೇಶಬಾಬು ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಎರಡೂ ಕ್ಷೇತ್ರ ಗೆಲ್ಲುವ ಗುರಿ
ಪ್ರದೇಶ ಕಾಂಗ್ರೆಸ್ ಈ ಎರಡೂ ಕ್ಷೇತ್ರಗಳನ್ನು ಗುರಿಯಾಗಿಟ್ಟುಕೊಂಡು ರಾಹುಲ್ ವರ್ಚಸ್ಸು ಮುಂದಿಟ್ಟುಕೊಂಡು ಮತ ಪಡೆಯಲು ಹೊರಟಿದೆ.
ತದನಂತರ ಸಂಜೆ ಕೋಲಾರದಲ್ಲಿ ಎಂಟು ಕಿಲೋ ಮೀಟರ್ ರೋಡ್ ಶೋ ಹಾಗೂ ಬೃಹತ್ ಸಮಾವೇಶ ಉದ್ದೇಶಿಸಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಯಾಚಿಸಲಿದ್ದಾರೆ.
ಮಂಡ್ಯದಲ್ಲಿ ಕೇವಲ ಈ ಕ್ಷೇತ್ರಕ್ಕೆ ಸೀಮಿತವಾಗಲ್ಲದೆ, ಬೆಂಗಳೂರು ಗ್ರಾಮಾಂತರ, ಮೈಸೂರು-ಕೊಡಗು, ಚಾಮರಾಜನಗರ ಹಾಗೂ ಹಾಸನದಲ್ಲಿ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ.
ಕೋಲಾರದಲ್ಲಿ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಉತ್ತರ ಕ್ಷೇತ್ರಗಳ ಅಭ್ಯರ್ಥಿಗಳ ಪರವೂ ಮತಯಾಚನೆ ನಡೆಸಲಿದ್ದಾರೆ.
ಈ ಮೊದಲ ಕಾರ್ಯಕ್ರಮದಂತೆ ರಾಹುಲ್ ಗಾಂಧಿ ಏಪ್ರಿಲ್ 17ರಂದು ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ ರೋಡ್ ಶೋ ಹಾಗೂ ಚುನಾವಣಾ ಪ್ರಚಾರ ಕೈಗೊಳ್ಳಬೇಕಿತ್ತು.
ಆದರೆ, ಪ್ರವಾಸ ಕಾರ್ಯಕ್ರಮದಲ್ಲಿ ಕೆಪಿಸಿಸಿ ಬದಲಾವಣೆ ಮಾಡಿ ಜೆಡಿಎಸ್ ಭದ್ರಕೋಟೆಯಲ್ಲಿ ರಾಹುಲ್ ವರ್ಚಸ್ಸಿಗೆ ಮೊರೆ ಹೋಗಿದೆ.
ಎನ್‌ಡಿಎ ಟೀಕೆಗಳಿಗೆ ಉತ್ತರ
ಎಲ್ಲದಕ್ಕೂ ಮಿಗಿಲಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಎನ್‌ಡಿಎ ಅಭ್ಯರ್ಥಿಗಳ ಪರ ಮತಯಾಚನೆ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಹಾಗೂ ಇಂಡಿಯಾ ಒಕ್ಕೂಟದ ಬಗ್ಗೆ ಮಾಡಿರುವ ಟೀಕೆಗಳಿಗೆ ಉತ್ತರಿಸುವ ಉದ್ದೇಶದಿಂದ ಈ ವೇದಿಕೆ ಸೃಷ್ಟಿಸಲಾಗಿದೆ ಎನ್ನಲಾಗಿದೆ.
ರಾಹುಲ್ ಗಾಂಧಿ ಹಿಂತಿರುಗುತ್ತಿದ್ದಂತೆ ಪ್ರಿಯಾಂಕ ಗಾಂಧಿ ಅವರಿಂದ ರಾಜ್ಯದಲ್ಲಿ ಒಂದು ಸುತ್ತಿನ ಪ್ರವಾಸ ಮಾಡಿಸಲು ಕೆಪಿಸಿಸಿ ಭರದ ಸಿದ್ಧತೆ ಮಾಡಿದೆ.
ಬೆಂಗಳೂರು ಗ್ರಾಮಾಂತರ ಹಾಗೂ ಶಿವಮೊಗ್ಗದಲ್ಲಿ ಬೃಹತ್ ಸಮಾವೇಶ ಮತ್ತು ರೋಡ್ ಶೋ ಮಾಡಿಸಲು ಸಿದ್ಧತೆ ಮಾಡಿದ್ದು, ಪ್ರಿಯಾಂಕ ಅವರ ಅನುಮತಿ ಇನ್ನೂ ಸಿಕ್ಕಿಲ್ಲ.
ರಾಹುಲ್ ಪ್ರವಾಸದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಉಪಸ್ಥಿತರಿರುವರು.