ಬೆಂಗಳೂರು:ಕೇಂದ್ರದ ಮಲತಾಯಿ ಧೋರಣೆಯನ್ನು ಪ್ರತಿಭಟಿಸಿ ಪ್ರದೇಶ ಕಾಂಗ್ರೆಸ್ ನಗರದಲ್ಲಿಂದು ಚೊಂಬು ಪ್ರದರ್ಶನ ನಡೆಸಿತು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ರಾಜ್ಯಕ್ಕೆ ಕೇಂದ್ರ ಅನ್ಯಾಯ ಮಾಡಿರುವ ಪಟ್ಟಿಯನ್ನು ಮಾಧ್ಯಮಗಳಲ್ಲಿ ಜಾಹೀರಾತು ಮೂಲಕ ಚೊಂಬಿನ ಮಹಿಮೆ ತಿಳಿಸಿದ್ದ ಕಾಂಗ್ರೆಸ್, ಇದೀಗ ಅದೇ ಚೊಂಬನ್ನು ಇಟ್ಟುಕೊಂಡು ಬೀದಿಗೆ ಇಳಿದಿದೆ.
ರಾಜ್ಯ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಕಾರ್ಯದರ್ಶಿ ಅಭಿಷೇಕ್ ದತ್ ಮತ್ತಿತರರು ಸಾವಿರಾರು ಕಾರ್ಯಕರ್ತರ ಜೊತೆಗೂಡಿ ಚೊಂಬು ಪ್ರದರ್ಶನ ಮಾಡಿದರು.
ಕರ್ನಾಟಕದ ಜನತೆಗೆ ಖಾಲಿ ಚೊಂಬು
ಇದೇ ಸಂದರ್ಭದಲ್ಲಿ ಮಾತನಾಡಿದ ಸುರ್ಜೇವಾಲ, ಮೋದಿ ಮತ್ತು ಬಿಜೆಪಿಯವರು ಕರ್ನಾಟಕದ ಜನತೆಗೆ ಖಾಲಿ ಚೊಂಬು ಕೊಟ್ಟಿದ್ದಾರೆ ಎಂದು ದೂರಿದರು.
ಬರ ಪರಿಹಾರ ವಿಚಾರದಲ್ಲಿ 18 ಸಾವಿರ ಕೋಟಿ ರೂ. ಚೊಂಬು ಕೊಟ್ಟ ಕೇಂದ್ರ ಸರ್ಕಾರ, 15ನೇ ಹಣಕಾಸು ಆಯೋಗದಿಂದ ನೀಡಬೇಕಿದ್ದ 62 ಸಾವಿರ ಕೋಟಿ ರೂ.ಗೂ ಇದೇ ಪರಿಸ್ಥಿತಿ.
ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಕಳೆದ ಹಲವು ವರ್ಷಗಳಿಂದ ಜಾಗಟೆ ಬಾರಿಸಿಕೊಂಡು ಬಂದ ಬಿಜೆಪಿ ಸರ್ಕಾರ, ಕೊನೆಗೆ ಕೃಷಿಕನಿಗೂ ನೀಡಿದ್ದು ಚೊಂಬೇ.
ಎಲ್ಲರ ಖಾತೆಗೂ ಚೊಂಬು
ಎಲ್ಲರ ಖಾತೆಗೂ 15 ಲಕ್ಷ ರೂ. ಹಾಕುತ್ತೇವೆ ಎಂದು ಹೇಳಿ ಅವರಿಗೂ ಚೊಂಬೇ ಕೊಟ್ಟರು. ಕರ್ನಾಟಕದಿಂದ ಪಾವತಿಯಾದ ಪ್ರತಿ 100 ರೂ. ತೆರಿಗೆಗೆ ರಾಜ್ಯಕ್ಕೆ ಬಂದಿದ್ದು ಕೇವಲ 13 ರೂ. ಮಾತ್ರ.
ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ 27 ಲೋಕಸಭಾ ಸದಸ್ಯರು ರಾಜ್ಯಕ್ಕೆ ಮೋದಿ ಚೊಂಬನ್ನೇ ನೀಡಿದ್ದಾರೆ.
ಇಷ್ಟೆಲ್ಲಾ ಚೊಂಬುಗಳನ್ನು ನೀಡಿರುವ ಬಿಜೆಪಿ ಪಕ್ಷಕ್ಕೆ ಲೋಕಸಭಾ ಚುಣಾವಣೆಯಲ್ಲೂ ಕನ್ನಡಿಗರು ಅದೇ ಚೊಂಬನ್ನು ನೀಡಬೇಕು.
ಎಲ್ಲದರ ದರ ಹೆಚ್ಚಳ
ಕಳೆದ 10 ವರ್ಷಗಳಲ್ಲಿ ಪ್ರತಿ ಪ್ರಜೆಯ ಆದಾಯ ಹೆಚ್ಚುವುದಕ್ಕಿಂತ ಭಾರವನ್ನೇ ನೀಡಿದ್ದಾರೆ. ಪೆಟ್ರೋಲ್, ಡೀಸೆಲ್ ಪ್ರತಿ ಲೀಟರ್‌ಗೆ ಕ್ರಮವಾಗಿ 100 ರೂ. ಹಾಗೂ 85 ರೂ. ಇದೆ, ಗ್ಯಾಸ್ ಸಿಲಿಂಡರ್ 1100 ರೂ. ಇದ್ದರೆ, ಅಡುಗೆ ಎಣ್ಣೆ ಲೀಟರ್‌ಗೆ 180 ರೂ. ಇದೆ.
ತೊಗರಿಬೇಳೆ ಕೆಜಿಗೆ 200 ರೂ., ಟೀ ಪುಡಿ ಕೆಜಿಗೆ 300 ರೂ. ಮುಟ್ಟಿದೆ, ಯುಪಿಎ ಸರ್ಕಾರ ಇದ್ದಾಗ ಇದರಲ್ಲಿ ಶೇಕಡ 60 ರಷ್ಟು ಕಡಿಮೆ ಇತ್ತು ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನಜೀವನವೇ ಕಷ್ಟಕರವಾಗಿದೆ.
ಇಂತಹ ಸರ್ಕಾರವನ್ನು ಬೆಂಬಲಿಸಿದರೆ ನಿಮಗೆ ಸಿಗುವುದು ಚೊಂಬು, ಆಲೋಚನೆ ಮಾಡಿ ರಾಷ್ಟ್ರದಲ್ಲಿ ಬದಲಾವಣೆಯ ಹವಾ ತನ್ನಿ ಎಂದರು.