ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವಾಸ
ಬೆಂಗಳೂರು:ಕರ್ನಾಟಕದಲ್ಲಿನ ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಮತದಾರರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಕ್ಕ ಶಿಕ್ಷೆ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಹಂತದ ಲೋಕಸಭಾ ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ಕೇಂದ್ರದ ಎನ್‌ಡಿಎ ಸರ್ಕಾರ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ನೀಡುತ್ತಿರುವ ವಾರ್ಷಿಕ ಆರು ಸಾವಿರ ರೂ.ಗಳ ಜೊತೆಗೆ ಅಂದು ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ನಾಲ್ಕು ಸಾವಿರ ರೂ. ಹೆಚ್ಚಿಗೆ ಸೇರಿಸಿ ಒಟ್ಟು 10 ಸಾವಿರ ರೂ. ನೀಡುತ್ತಿತ್ತು, ಆದರೆ ಕಾಂಗ್ರೆಸ್ ಆಡಳಿತಕ್ಕೆ ಬರುತ್ತಿದ್ದಂತೆ ನಾಲ್ಕು ಸಾವಿರ ರೂ.ಗಳನ್ನು ನಿಲ್ಲಿಸಿತು, ಜನರಿಗೆ ಕಾಂಗ್ರೆಸ್ ಹೇಗೆ ಮೋಸ ಮಾಡುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದರು.
ಇನ್ನೂ ಐದು ವರ್ಷ ಉಚಿತ ಆಹಾರಧಾನ್ಯ
ಕೇಂದ್ರ ಸರ್ಕಾರ ಕಳೆದ ಕೆಲವು ವರ್ಷಗಳಿಂದ ದೇಶದ ಬಡವರಿಗೆ ಉಚಿತ ಆಹಾರಧಾನ್ಯ ನೀಡುತ್ತಿದ್ದು, ಈ ಯೋಜನೆ ಇನ್ನೂ ಐದು ವರ್ಷ ಮುಂದುವರೆಯಲಿದೆ.
ಚಿಕ್ಕಬಳ್ಳಾಪುರ ಹಾಗೂ ಕೋಲಾರದ ಎಂಟು ಲಕ್ಷ ಜನರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ, ವಸತಿರಹಿತರಿಗೆ ಮನೆ ನಿರ್ಮಿಸಿಕೊಡುವಲ್ಲಿ ಕೇಂದ್ರ ಸರ್ಕಾರ ಯೋಜನೆ ಜಾರಿಗೆ ತಂದಿದ್ದು, ಚಿಕ್ಕಬಳ್ಳಾಪುರದ 14 ಸಾವಿರ, ಕೋಲಾರದ 20 ಸಾವಿರ ಮಂದಿ ಇದರ ಪ್ರಯೋಜನ ಪಡೆದಿದ್ದಾರೆ. ಮುಂದಿನ ವರ್ಷಗಳಲ್ಲಿ ಇನ್ನೂ ಮೂರು ಕೋಟಿ ಮನೆಗಳನ್ನು ಬಡ ಜನರಿಗಾಗಿ ನಿರ್ಮಿಸಲಾಗುವುದು.
ಕೋಲಾರ ಮತ್ತು ಚಿಕ್ಕಬಳ್ಳಾಪುರದ 2.70 ಲಕ್ಷ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ನೀಡಲಾಗಿದೆ, ಮುಂದಿನ ದಿನಗಳಲ್ಲಿ ನಮೋ ಡ್ರೋನ್ ಯೋಜನೆಯನ್ನು ಗ್ರಾಮೀಣ ಕೃಷಿಕ ಮಹಿಳೆಯರಿಗಾಗಿ ಜಾರಿಗೆ ತರಲಾಗುವುದು.
ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 49ಕ್ಕೆ ಏರಿಕೆ
ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆಗಳನ್ನು 25ರಿಂದ 49ಕ್ಕೆ ಹೆಚ್ಚಿಸಲಾಗಿದೆ, ಒಂದು ಜಿಲ್ಲೆ ಒಂದು ಉದ್ಯಮ ಯೋಜನೆ ಪಟ್ಟಿಗೆ ಶಿಡ್ಲಘಟ್ಟದ ಸೀರೆಯನ್ನು ಸೇರ್ಪಡೆಗೊಳಿಸಲಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆ ಸೌಲಭ್ಯ ಒದಗಿಸಲಾಗುತ್ತಿದೆ.
ನಾಡಪ್ರಭು ಕೆಂಪೇಗೌಡ ಅವರ ಪ್ರೇರಣೆಯಿಂದ ರಾಜ್ಯಕ್ಕೆ ಅನೇಕ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ, ನಂದಿಬೆಟ್ಟ, ಭುವನೇಶ್ವರಿ ಹಾಗೂ ಕೋಲಾರಮ್ಮ ಕ್ಷೇತ್ರಗಳನ್ನು ತೀರ್ಥಕ್ಷೇತ್ರಗಳನ್ನಾಗಿ ಅಭಿವೃದ್ಧಿ ಪಡಿಸುವ ಜೊತೆಗೆ ರಜೆಕಾಲದ ಪ್ರವಾಸೀ ತಾಣಗಳಾಗಿ ಮಾರ್ಪಡಿಸಲಾಗುವುದು, ಈ ಭಾಗದ ರೇಷ್ಮೆ ಕೃಷಿ, ಹೈನುಗಾರಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ 90 ವರ್ಷ ವಯಸ್ಸಾಗಿದ್ದು, ಈ ದೇಶದ ಅತ್ಯಂತ ಹಿರಿಯ ರಾಜಕಾರಣಿಯಾಗಿದ್ದಾರೆ, ಅವರ ಉತ್ಸಾಹ, ಹೊಣೆಗಾರಿಕೆ ನಮ್ಮಂಥವರಿಗೆ ಪ್ರೇರಣೆಯಾಗಿದೆ.
ರಾಜ್ಯದ ಅಭಿವೃದ್ಧಿ ಬಗ್ಗೆ ಅವರಲ್ಲಿರುವ ಕಾಳಜಿ ಏನೆಂಬುದಕ್ಕೆ ಅವರ ಮಾತುಗಳೇ ಸಾಕ್ಷಿಯಾಗಿದೆ. ಅವರ ಮಾರ್ಗದರ್ಶನ ಪಡೆದು ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಯೋಜನೆಗಳ ಸಾಕಾರದ ಗ್ಯಾರಂಟಿ ನೀಡುತ್ತೇನೆ
ದೇಶದ ಜನತೆಯೇ ನನ್ನ ಪರಿವಾರ, ಅವರ ಕನಸು, ನನಸು ಮಾಡಲು ಹಗಲು-ರಾತ್ರಿ ಶ್ರಮಿಸುತ್ತಿದ್ದೇನೆ, ಬರೀ ಯೋಜನೆಗಳನ್ನು ಜಾರಿಗೆ ತರುವುದು ಮಾತ್ರವಲ್ಲ ಅವುಗಳ ಸಾಕಾರದ ಗ್ಯಾರಂಟಿಯನ್ನೂ ನೀಡುತ್ತೇನೆ.
ಮೋದಿ ಸರ್ಕಾರದ ಮನೆ ನಿರ್ಮಾಣ ಯೋಜನೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಸಮುದಾಯ, ಇತರೆ ಹಿಂದುಳಿದ ವರ್ಗದ ಹೆಚ್ಚು ಫಲಾನುಭವಿಗಳಿದ್ದಾರೆ. ಈ ಮೊದಲು ನೀರು, ವಿದ್ಯುತ್ ಸೌಕರ್ಯಗಳಿಲ್ಲದೆ ಕೊಳಗೇರಿಗಳಲ್ಲಿ ವಾಸಿಸುತ್ತಿದ್ದವರಿಗೆ ಮೋದಿ ಸರ್ಕಾರ ಪಕ್ಕಾ ಮನೆಗಳನ್ನು ನಿರ್ಮಿಸಿಕೊಟ್ಟಿರುವುದಲ್ಲದೆ, ಎಲ್ಲ ನಾಗರಿಕ ಸೌಕರ್ಯಗಳನ್ನೂ ಕಲ್ಪಿಸಿದೆ.
ಯಾವುದೇ ಅಡಮಾನವಿಲ್ಲದೆ, ಮುದ್ರಾ ಯೋಜನೆಯಡಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ನೀಡುತ್ತಿದ್ದ ಸಾಲ ಮೊತ್ತವನ್ನು 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಏರಿಸಲಾಗಿದೆ.
ಕಡೆಯ ಸಾಲಿನ ವ್ಯಕ್ತಿಯನ್ನು ಮುನ್ನೆಲೆಗೆ ತಂದಿದ್ದೇವೆ, ಬುಡಕಟ್ಟು ಸಮುದಾಯದ ವ್ಯಕ್ತಿಯನ್ನು ರಾಷ್ಟ್ರಪತಿ ಹುದ್ದೆಯವರೆಗೆ ಕರೆ ತಂದಿದ್ದೇವೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ಸಮುದಾಯದವರು ಉನ್ನತ ಮಟ್ಟದ ಶಿಕ್ಷಣ ಪಡೆಯಲು ಒತ್ತು ನೀಡಲಾಗಿದೆ.
ಮಾತೃಶಕ್ತಿಯ ಆಶೀರ್ವಾದ
ಮಾತೃಶಕ್ತಿ ಹಾಗೂ ತಾಯಂದಿರ ಆಶೀರ್ವಾದದೊಂದಿಗೆ ಎಲ್ಲಾ ಸವಾಲುಗಳನ್ನು ಎದುರಿಸಿ ದೇಶದ ಸೇವೆಯಲ್ಲಿ ಮುನ್ನುಗ್ಗುತ್ತಿದ್ದೇನೆ.
ದೇಶದ ಸರ್ವತೋಮುಖ ಅಭಿವೃದ್ಧಿಗೆ ಎನ್‌ಡಿಎ ಅಭ್ಯರ್ಥಿಗಳನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಪ್ರಧಾನಿ ಮನವಿ ಮಾಡಿದರು.
ಪ್ರತಿಪಕ್ಷ ’ಇಂಡಿ’ ಸಂಘಟನೆಯಲ್ಲಿ ನಾಯಕರಿಲ್ಲ, ದೂರದೃಷ್ಟಿ ಇಲ್ಲ, ಆದ್ದರಿಂದ ಜನತೆ ಮತ್ತೊಮ್ಮೆ ಮೋದಿ ಸರ್ಕಾರದಲ್ಲಿ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಎಂದರು.