ಗಂಟಲಿನ ಸಮಸ್ಯೆ, ತೊದಲುವಿಕೆ ನಿವಾರಣೆಗೆ ಸಹಕಾರಿ
ದೇವಸ್ಥಾನದ ಬಾಗಿಲುಗಳನ್ನು ತೆರೆಯಲು, ಪೂಜೆಯ ವೇಳೆಗೆ ದೇವರನ್ನು ಜಾಗೃತಿಗೊಳಿಸಲು ಶಂಖವನ್ನು ಊದಲಾಗುತ್ತದೆ. ಶಂಖನಾದ ಶುಭ ಸಂಕೇತ, ಆಧ್ಯಾತ್ಮಿಕತೆಯ ಸಂಕೇತ, ದೇವರು ಮತ್ತು ಭಕ್ತರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ಸಂಕೇತವಾಗಿದೆ. ದ್ವಾಪರದಲ್ಲಿ ಕೃಷ್ಣನನ್ನು ತಲುಪಿವಿಕೆಗೆ ಶಂಖವನ್ನು ಗುರುತಾಗಿ ಬಳಸಲಾಗುತ್ತಿತ್ತು. ಇವತ್ತಿಗೂ ದೇವರ ಕೋಣೆಯಲ್ಲಿ ಶಂಖವನ್ನಿಟ್ಟು ಪೂಜಿಸುವುದ ವಾಡಿಕೆ. ಶಂಖದಿಂದ ಬಂದರೆ ಮಾತ್ರ ತೀರ್ಥ ಎಂಬ ಗಾದೆ ಮಾತು ಇದೆ. ಶಂಖಕ್ಕೆ ಇರುವ ಮಹತ್ವವಿದು.
ಹೊರ ಜಗತ್ತಿನಲ್ಲಿ ಕಾಣಸಿಗುವ ಈ ಶಂಖುವಿನ ಪ್ರಯೋಜನಗಳೇ ಇಷ್ಟಿರಬೇಕಾದರೆ, ಆ ಶಂಖದ ಅಂಶವನ್ನು ನಮ್ಮೊಳಗೆ ಆವಾಹಿಸಿಕೊಂಡಾಗ ಇನ್ನೂ ಉತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದನ್ನೇ ಅದ್ವೈತ ಎಂದು ಕರೆದರೆ ತಪ್ಪಾಗಲಾರದು. ಹೊರಗೆ ಕಾಣುವ ಶಂಖವನ್ನು ಯೋಗ ಮುದ್ರೆಯ ಮೂಲಕ ಹಸ್ತಮುದ್ರೆಯಲ್ಲಿ ಶಂಖ ಮುದ್ರೆಯನ್ನು ರೂಪಿಸಿಕೊಳ್ಳಬಹುದು. ಇದು ಸಂಪೂರ್ಣ ನರಮಂಡಲವನ್ನು ಶುದ್ದೀಕರಿಸುವುದು. ಹೇಗೆ ದೇವಾಲಯದ ಬಾಗಿಲು ತೆರೆಯುವ ಮುನ್ನ ಶಂಖನಾದ ಮಾಡಲಾಗುತ್ತದೆಯೋ ಹಾಗೆಯೇ ಆಧ್ಯಾತ್ಮಿಕ ಜಾಗೃತಿ ಮೂಡಿಸಿಕೊಳ್ಳುವ ಮೊದಲು ಶಂಖ ಮುದ್ರೆಯನ್ನು ಮಾಡಬೇಕಾಗುತ್ತದೆ. ಈ ಮುದ್ರೆಯನ್ನು ದೇವತಾ ಆರಾಧನೆ ಮತ್ತು ಧ್ಯಾನ ಅಭ್ಯಾಸಗಳಲ್ಲಿ ಸಾಮಾನ್ಯವಾಗಿ ಬಳಸಲಾಗುವುದು.
ವೇದಗಳಲ್ಲಿ ಶಂಖವು ಶುದ್ಧತೆಯ ಸಂಕೇತವಾಗಿದೆ. ನೀವು ಶಂಖವನ್ನು ಊದಿದಾಗ ಅದು ಸಂಪೂರ್ಣವಾಗಿ ಖಾಲಿಯಾಗಿರುತ್ತದೆ. ಅದ್ಭುತವಾದ ಧ್ವನಿಯನ್ನು ಗಾಳಿಯೊಂದಿಗೆ ಸೃಷ್ಟಿಸುತ್ತದೆ. ಅದೇ ರೀತಿ ವೇಗವಾದ ಸಂವಹನಕ್ಕಾಗಿ ನರಗಳನ್ನು ಶುದ್ಧೀಕರಿಸುವ ಮೂಲಕ ಆಂತರಿಕ ಕರುಹುಗಳನ್ನು ಸುಧಾರಿಸಲು ಈ ಮುದ್ರೆಯನ್ನು ಮಾಡಬೇಕಾಗುವುದು. ಶಿವ ಸಂಹಿತೆಯಲ್ಲಿ ಮಾನವನ ದೇಹದಲ್ಲಿನ ಒಟ್ಟು ನಾಡಿಗಳ ಸಂಖ್ಯೆ 72 ಸಾವಿರವೆಂದು ಹೇಳಲಾಗಿದೆ. ಈ ಶಂಖಮುದ್ರೆಯನ್ನು ಮಾಡುವ ಮೂಲಕ ಈ ನಾಡಿಗಳು ಶುದ್ಧವಾಗುತ್ತವೆ.
ಶಂಖಮುದ್ರೆ ಮಾಡುವ ವಿಧಾನ:
ಎಡಗೈನ ಹೆಬ್ಬೆರಳನ್ನು ನಿಮ್ಮ ಬಲ ಅಂಗೈನಲ್ಲಿ ಇರಿಸಿ, ನಿಮ್ಮ ಬಲಗೈನಿಂದ ಎಡಗೈ ಹೆಬ್ಬೆರಳಿನ ಸುತ್ತಲೂ ನಾಲ್ಕು ಬೆರಳುಗಳನ್ನುಸುತ್ತಿಕೊಳ್ಳಿ. ನಿಮ್ಮ ಎಡಗೈ ಹೆಬ್ಬೆರಳು ಮತ್ತು ಬೆರಳುಗಳನ್ನು ಆಕಾಶದ ಕಡೆ ತಿರುಗಿಸಿ ಬಲಗೈನ ಹೆಬ್ಬೆರಳು ಎಡಗೈನ ಮಧ್ಯದ ಬೆರಳನ್ನು ಸ್ಪರ್ಶಿಸುತ್ತಿರಲಿ. ನಿಮ್ಮ ಕೈಗಳು ಈಗ ಶಂಖದಂತೆ ಕಾಣುವುದನ್ನು ಗಮನಿಸಿ. ಈ ರೀತಿ ಬೆರಳುಗಳ ಜೋಡಣೆಯನ್ನು ಹಿಡಿದುಕೊಳ್ಳಿ. ಯಾವುದೇ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತುಕೊಂಡು ಈ ಮುದ್ರೆಯನ್ನು ಮಾಡಬಹುದು. ಮುದ್ರೆಯು ಎದೆಯ ಮಧ್ಯ ಭಾಗದಲ್ಲಿ ಕೇಂದ್ರೀಕೃತವಾಗಿರಲಿ. ಅಂಜಲಿ ಮುದ್ರೆಗೆ ಪರ್ಯಾಯವಾಗಿ ಈ ಮುದ್ರೆಯನ್ನು ಮಾಡಬಹುದು. ಈ ಮುದ್ರೆ ಮಾಡುವಾಗ ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಿ ಹಾಗೂ ಓಂ ಕಾರವನ್ನು ಪಠಿಸಿ ಕಣ್ಣುಗಳನ್ನು ಮುಚ್ಚಿ. ಕೈಗಳನ್ನು ಬದಲಿಸಿ, ಶಂಖಮುದ್ರೆಯನ್ನು ಮಾಡಬಹುದು.
ಯಾವುದೇ ಪೂಜಾ ಕಾರ್ಯಗಳನ್ನು ಪ್ರಾರಂಭಿಸುವ ಮೊದಲು ಶಂಖಮುದ್ರೆಯನ್ನು ಮಾಡುವುದು ಒಳ್ಳೆಯದು. ಅಲ್ಲದೆ, ವಿಶುದ್ಧಿ ಚಕ್ರವನ್ನು ಉತ್ತೇಜಿಸಲು ಶಂಖಮುದ್ರೆಯನ್ನು ಅಭ್ಯಾಸ ಮಾಡಬಹುದು. ಗಂಟಲಿನ ಸಮಸ್ಯೆಯನ್ನು ದೂರ ಮಾಡುತ್ತದೆ. ತೊದಲುವಿಕೆ ನಿವಾರಣೆ ಮಾಡುತ್ತದೆ. ಭಾಷಣವನ್ನು ಸುಧಾರಿಸುತ್ತದೆ. ಧ್ವನಿಯನ್ನು ಸ್ಪಷ್ಟಪಡಿಸುವುದು. ಆತ್ಮವಿಶ್ವಾಸವನ್ನು ಹೆಚ್ಚು ಮಾಡುವುದು. ಗಂಟಲಿನ ಸೋಂಕಿಗೆ ಚಿಕಿತ್ಸೆಯಾಗಿ ಈ ಮುದ್ರೆ ಕಾರ್ಯನಿರ್ವಹಿಸಲಿದೆ. ಶಂಖಮುದ್ರೆ ಪ್ರತಿದಿನ ಮಾಡುತ್ತಾ ಓಂಕಾರವನ್ನು ಪಠಣೆ ಮಾಡುವುದರಿಂದ ಪುನರ್ ಯೌವ್ವನ ಮರುಕಳಿಸಲಿದೆಯಂತೆ. ಥೈರಾಡ್ ಗ್ರಂಥಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಹಕಾರಿ.
ಚರ್ಮದ ತುರಿಕೆ ಮತ್ತು ಕೆಂಪು ದದ್ದುಗಳು ನಿವಾರಣೆ
ಶಂಖಮುದ್ರೆ ನಿತ್ಯ ಮಾಡುವುದರಿಂದ ಚರ್ಮದ ತುರಿಕೆ ಮತ್ತು ಕೆಂಪು ದದ್ದುಗಳು ನಿವಾರಣೆಯಾಗಲಿವೆ. ಪಿತ್ತ ದೋಷ ಕಡಿಮೆಯಾಗಲಿದೆ. ಜೀರ್ಣಾಂಗದ ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುವುದಲ್ಲದೆ, ಹಸಿವು ಕಳೆದುಕೊಂಡವರು ಈ ಮುದ್ರೆಯನ್ನು ಅಭ್ಯಾಸ ಮಾಡುವ ಮೂಲಕ ಸಮತೋಲಿತ ಆಹಾರ ಸೇವಿಸುವಂತಾಗುತ್ತಾರೆ. ಈ ಮುದ್ರೆಯನ್ನು ಮಾಡುವಂತಹ ಸಂದರ್ಭದಲ್ಲಿ ಬೆನ್ನು ಮತ್ತು ಕುತ್ತಿಗೆಯನ್ನು ತಗ್ಗಿಸಬಾರದು. ನಿದ್ರಾಹೀನತೆಯಿಂದ ಬಳಲುವವರು. ದೇಹದಲ್ಲಿನ ಇತರೆ ನೋವುಗಳಿಂದ ಬಳಲುತ್ತಿರುವವರು ಈ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ಸಮಸ್ಯೆಗಳು ದೂರವಾಗಲಿವೆ.
ಶಂಖಮುದ್ರೆಯನ್ನು ಬೆಳಗಿನ ವೇಳೆ ಅಭ್ಯಾಸ ಮಾಡುವುದರಿಂದ ಹೆಚ್ಚು ಪ್ರಯೋಜನ ಪಡೆಯಬಹುದು. ದೇಹದೊಳಗಿನ ಗಾಳಿಯನ್ನು ಶುದ್ಧೀಕರಿಸುವುದಲ್ಲದೆ. ಸಕಾರಾತ್ಮಕ ಭಾವನೆ ಹೆಚ್ಚು ಮಾಡುವುದು. ಈ ಮುದ್ರೆಯನ್ನು 15 ನಿಮಿಷದಿಂದ ಒಂದು ಗಂಟೆಯವರೆಗೆ ಮಾಡಬಹುದು. ಹೆಚ್ಚು ನಿರ್ಧಿಷ್ಟವಾಗಿ ಭ್ರಮರಿ ಪ್ರಾಣಾಯಾಮದಿಂದ ಪ್ರಾರಂಭಿಸಿದರೆ ಒಳಿತು. ಆ ನಂತರದಲ್ಲಿ ವಿವಿಧ ಪ್ರಾಣಾಯಾಮಗಳೊಂದಿಗೆ ಅಭ್ಯಾಸ ಮಾಡಬಹುದು. ನಿಮ್ಮನ್ನು ಶಾಂತಗೊಳಿಸಿಕೊಂಡು ಸುತ್ತುವರೆದ ಹೆಬ್ಬೆರಳು ಮುತ್ತು ಎಂದೂ, ಬೆರಳು ಮತ್ತು ಹಸ್ತವನ್ನು ಶಂಖದ ಗೋಡೆಯೆಂದು ಕಲ್ಪಿಸಿಕೊಳ್ಳಿ. ಅದು ನಿಮ್ಮೊಂದಿಗೆ ಪ್ರೀತಿಯ ಸಂಪರ್ಕವನ್ನು ಹೆಚ್ಚಿಸಲಿದೆ. ನಿಮಗೆ ಅಗತ್ಯವಿರುವ ಎಲ್ಲ ಸಹಾಯ ಮತ್ತು ಭದ್ರತೆಯನ್ನು ನೀಡುತ್ತದೆ.
ಈ ಮುದ್ರೆಯು ಮನಸ್ಸು ಮತ್ತು ದೇಹವನ್ನು ವಿಶ್ರಾಂತಿ ಮಾಡಲು, ರಕ್ತಪರಿಚಲನೆ ಸುಧಾರಿಸಲು, ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ. ವಯಸ್ಸಿನ ಅಂತರವಿಲ್ಲದೆ, ಸಮಯದ ಕಡಿವಾಣವಿಲ್ಲದೆ, ಮಾಡಬಹುದಾದ ಮುದ್ರೆಯಾಗಿದ್ದು, ಇದರಿಂದ ಹೆಚ್ಚಿನ ರೀತಿಯ ಅಡ್ಡ ಪರಿಣಾಮಗಳು ಸಂಭವಿಸುವುದಿಲ್ಲ.
ಯಾರು, ಯಾವಾಗ ಮಾಡಬಾರದು
ಅದಾಗಿಯೂ ಮಣಿಕಟ್ಟು, ಅಂಗೈ ಅಥವಾ ಬೆರಳುಗಳಲ್ಲಿ ಗಾಯಗೊಂಡವರು ಈ ಮುದ್ರೆ ಮಾಡುವುದನ್ನು ತಪ್ಪಿಸಬೇಕು. ಶೀತ ಪ್ರದೇಶಗಳಲ್ಲಿ ವಾಸಿಸುವವರು ಅಥವಾ ಕಡಿಮೆ ರಕ್ತದೊತ್ತಡ, ಶೀತ ಮತ್ತು ಕೆಮ್ಮಿನಿಂದ ಬಳಲುವವರು ಕೂಡ ಈ ಮುದ್ರೆ ಅಭ್ಯಾಸ ಮಾಡಬಾರದು. ಅಲ್ಲದೆ, ಚಳಿಗಾಲದ ತಿಂಗಳುಗಳಲ್ಲಿ ಅಭ್ಯಾಸ ಮಾಡಬಾರದು, ಏಕೆಂದರೆ ಈ ಮುದ್ರೆಯು ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದು.
ಮಹಾಭಾರತದಲ್ಲಿ ಶ್ರೀಕೃಷ್ಣ ಶಂಖಧಾರಿಯಾದುದರಿಂದಲೋ ಅಥವಾ ಶಂಖಮುದ್ರೆಯನ್ನು ತನ್ನೋಳಗೆ ಅವಾಹಿಸಿದ್ದರಿಂದಲೋ ಎಂತಹುದೇ ಕೆಟ್ಟ ಪರಿಸ್ಥಿತಿಯಲ್ಲೂ ಕೋಪಗೊಳ್ಳಲಿಲ್ಲ. ಎಲ್ಲವನ್ನೂ ಸಮಾಧಾನಚಿತ್ತದಿಂದ ಅಳೆದು ತೂಗಿ ಸತ್ಯ ಪರಿಪಾಲನೆ ಮಾಡಲು ಸಾಧ್ಯವಾಗಿತ್ತು. ಹಾಗಾಗಿ ನೀವು ಪ್ರತಿನಿತ್ಯ ಶಂಖಮುದ್ರೆಯನ್ನು ಅಭ್ಯಾಸ ಮಾಡುವ ಮೂಲಕ ನಿಮ್ಮೊಳಗಿನ ಕೋಪವನ್ನು ನಿಗ್ರಹಿಸಿ, ಕೃಷ್ಣತ್ವನ್ನು ಜಾಗೃತಿಗೊಳಿಸುವಂತಾಗಲಿ.