ಬೆಂಗಳೂರು:ಮಿತಿಮೀರುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ, ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಹಾಗೂ ಹದಗೆಟ್ಟ ಕಾನೂನು ಸುವ್ಯವಸ್ಥೆ ಖಂಡಿಸಿ ಬಿಜೆಪಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು.
ವಿಧಾನಸಭೆಯಲ್ಲಿನ ಪ್ರತಿಪಕ್ಷದ ನಾಯಕ ಆರ್.ಅಶೋಕ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಪಕ್ಷದ ಹಲವು ಮುಖಂಡರು ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಮಹಿಳೆಯರಿಗೆ ಮತ್ತು ಹಿಂದೂಗಳಿಗೆ ರಕ್ಷಣೆ ನೀಡಿ ಎಂದು ಸರ್ಕಾರವನ್ನು ಆಗ್ರಹಿಸಿದರು.
ಸಮಾಜಘಾತುಕ ಶಕ್ತಿಗಳ ತುಷ್ಟೀಕರಣ
ಓಲೈಕೆ ರಾಜಕಾರಣಕ್ಕಾಗಿ ಸಮಾಜಘಾತುಕ ಶಕ್ತಿಗಳ ತುಷ್ಟೀಕರಣ ಮಾಡುತ್ತಾ, ಹಿಂದೂಗಳ ರಕ್ಷಣೆಗೆ ಕಿಂಚಿತ್ತೂ ಕಾಳಜಿ ವಹಿಸದ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ಜನರಲ್ಲಿ ಗೊಂದಲ ಉಂಟು ಮಾಡುವ, ಭಯೋತ್ಪಾದಕರನ್ನು ಬೆಂಬಲಿಸುವ, ದೃಢ ನಿಲುವಿಲ್ಲದ ಕಾಂಗ್ರೆಸ್‌ಗೆ ಮತ ಕೊಟ್ಟರೆ ವ್ಯರ್ಥ ಎಂದರು.
ನೇಹಾ ಹಿರೇಮಠ್ ಹತ್ಯೆ ಮಾಡಿದವನ ರಕ್ಷಣೆ ಪ್ರಯತ್ನ ನಡೆದಿದೆ, ಮಗಳ ಚಾರಿತ್ರ್ಯಕ್ಕೆ ಮಸಿ ಬಳಿಯುವ ಯತ್ನ ನಡೆದಿದೆ ಎಂದು ಸ್ವತಃ ನೇಹಾ ಅವರ ತಂದೆ ಹೇಳಿದ್ದಾರೆ, ಸಿಬಿಐ ತನಿಖೆಗೆ ಒಪ್ಪಿಸಲು ಕೋರಿದ್ದಾರೆ.
ಬೆಂಗಳೂರಿನ ಕೆಜಿಹಳ್ಳಿ-ಡಿಜೆಹಳ್ಳಿ ಗಲಭೆಯಲ್ಲಿ ಸ್ವತಃ ಅವರ ಶಾಸಕರ ಮನೆಗೇ ಬೆಂಕಿ ಹಾಕಿದ್ದರೂ ಕಾಂಗ್ರೆಸ್ ಪಕ್ಷ ಆ ಶಾಸಕರ ಪರ ನಿಲ್ಲಲಿಲ್ಲ.
ಆಸ್ತಿ ಮರುಹಂಚಿಕೆ
ಯುಪಿಎ ಪ್ರಧಾನಿ ಡಾ.ಮನಮೋಹನ್ ಸಿಂಗ್, ಅಲ್ಪಸಂಖ್ಯಾತರ ಹಕ್ಕು ರಕ್ಷಣೆ ಮೊದಲ ಆದ್ಯತೆ, ಎಲ್ಲರ ಆಸ್ತಿ ವಶಪಡಿಸಿಕೊಂಡು ಮರುಹಂಚಿಕೆ ಮಾಡುವುದಾಗಿ ಹೇಳಿದ್ದರು, ಇದರಿಂದ ಇವರ ಮನಸ್ಥಿತಿ ಏನಿದೆ ಎಂದು ಅರ್ಥವಾಗುತ್ತದೆ, ಮೊದಲು ಇವರ ಆಸ್ತಿ ಮರುಹಂಚಿಕೆ ಮಾಡಲಿ ಎಂದು ಒತ್ತಾಯಿಸಿದರು.
ಬಿಜೆಪಿ ಎಲ್ಲರನ್ನು ಸಮಾನವಾಗಿ ಕಾಣುತ್ತದೆ, ಬಡವರಿಗೆ ಮೊದಲನೇ ಹಕ್ಕು ಇರಬೇಕು ಎನ್ನುತ್ತದೆ, ಕಾಂಗ್ರೆಸ್ಸಿನವರು ಅಲ್ಪಸಂಖ್ಯಾತರಿಗೆ ಮೊದಲ ಹಕ್ಕು ಎನ್ನುವ ಮೂಲಕ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದ್ದಾರೆ, ಅವರು ಬಡವರ ವಿರೋಧಿ ಎಂದರು.
ಕಾಂಗ್ರೆಸ್ ಮುಕ್ತ ದೇಶ ಮಾಡಬೇಕಿದೆ, ಸಮಾಜಕ್ಕೆ ಕಾಂಗ್ರೆಸ್ ಕೊಡುಗೆ ಏನೆಂದು ಬಿಜೆಪಿ ಪಕ್ಷದ ಜಾಹೀರಾತು ತಿಳಿಸಿದೆ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿಗೆ ಬೆಂಬಲ ಕೊಡಬೇಕು ಎಂದು ಮನವಿ ಮಾಡಿದರು.