ಬೆಂಗಳೂರು:ವಿದ್ಯಾರ್ಥಿನಿ ನೇಹಾ ಹಿರೇಮಠ್ ಕೊಲೆ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸಲಾಗುವುದು, ವಿಶೇಷ ನ್ಯಾಯಾಲಯ ಸ್ಥಾಪಿಸಿ ಕಾಲಮಿತಿಯಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಘೋಷಣೆ ಮಾಡಿದ್ದಾರೆ.
ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಕೈಗೊಳ್ಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ನಾವು ಮುಚ್ಚಿಹಾಕುವ ಪ್ರಯತ್ನ ಮಾಡಿಲ್ಲ, ಇದನ್ನು ಕೆಲವರು ರಾಜಕೀಯವಾಗಿ ಬಳಸಿಕೊಳ್ಳಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಇಂದು ರಾಜ್ಯಾದ್ಯಂತ ಪ್ರತಿಭಟನೆ, ಧರಣಿ ಮಾಡುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಅವರು ಸಿಒಡಿ ತನಿಖೆ ಘೋಷಣೆ ಮಾಡಿದ್ದಾರೆ.
ಪ್ರಕರಣ ನಮ್ಮ ಗಮನಕ್ಕೆ ಬರುತ್ತಿದ್ದಂತೆ ನಮ್ಮ ಸಚಿವ ಹೆಚ್.ಕೆ.ಪಾಟೀಲ್ ಭೇಟಿ ನೀಡಿದ್ದಾರೆ, ಧಾರವಾಡಕ್ಕೆ ತೆರಳಿದ ಸಂದರ್ಭದಲ್ಲಿ ನಾನೂ ಭೇಟಿ ನೀಡುವುದಾಗಿ ಸಿದ್ದರಾಮಯ್ಯ ತಿಳಿಸಿದರು.
ತಪ್ಪಿತಸ್ತ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ
ತಪ್ಪಿತಸ್ತ ಉಗ್ರ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಇದೇ ಕಾರಣಕ್ಕಾಗಿ ನಾವು ಪ್ರಕರಣವನ್ನು ಸಿಒಡಿಯಿಂದ ತನಿಖೆ ಮಾಡಿಸುತ್ತಿರುವುದಲ್ಲದೆ, ವಿಶೇಷ ನ್ಯಾಯಾಲಯ ಸ್ಥಾಪಿಸಿ ತ್ವರಿತವಾಗಿ ಕಾಲಮಿತಿಯಲ್ಲಿ ವಿಚಾರಣೆ ನಡೆಸಲಾಗುವುದು.
ಬಿಜೆಪಿಯವರು ರಾಜಕೀಯ ಬಣ್ಣ ಕಟ್ಟಿ ಇದನ್ನು ಚುನಾವಣೆಗೆ ಬಳಸಿಕೊಳ್ಳಲು ಹೋಗುತ್ತಿದ್ದಾರೆ, ಜನಕ್ಕೂ ಇದು ಅರ್ಥವಾಗುತ್ತದೆ, ತನಿಖೆಯಿಂದ ಸತ್ಯಾಸತ್ಯತೆ ಹೊರಬೀಳಲಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾನ ಆಸ್ತಿ ಹಂಚಿಕೆ ಮಾಡುತ್ತಾರೆ, ಮಹಿಳೆಯರ ಮಾಂಗಲ್ಯವನ್ನು ಮುಸ್ಲಿಂಮರಿಗೆ ಕೊಡುತ್ತಾರೆ ಎಂದು ಪ್ರಧಾನಮಂತ್ರಿ ಆರೋಪ ಮಾಡಿರುವ ಬಗ್ಗೆ ಮಾತನಾಡಿ, ಪ್ರಧಾನಿಯಾಗಿ ಅವರು ಇಷ್ಟು ಕೆಳಮಟ್ಟದಲ್ಲಿ ಮಾತನಾಡ ಬಾರದಿತ್ತು, ಹಿಂದೂಗಳ ಮಂಗಳಸೂತ್ರವನ್ನು ತೆಗೆದು ಮುಸ್ಲಿಮರಿಗೆ ನೀಡುತ್ತಾರೆ ಎನ್ನುವುದು ಅವರ ಸ್ಥಾನಕ್ಕೆ ಅಗೌರವ ತರುವಂಥ ಮಾತುಗಳು, ದೇಶದ ಪ್ರಧಾನಮಂತ್ರಿಯಾಗಿ ಎಲ್ಲಾ ಜನಾಂಗವನ್ನು ಸಮಾನವಾಗಿ ನೋಡಿಕೊಳ್ಳುವ ಕರ್ತವ್ಯ ಅವರದ್ದು, ಇಂಥ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ ಎಂದರು.
ಸಮಾನವಾಗಿ ಆಸ್ತಿ ಹಂಚಿಕೆಯಾಗುವುದು ಸಾಮಾಜಿಕ ನ್ಯಾಯ, ಸಮಸಮಾಜ ನಿರ್ಮಾಣವಾಗಬೇಕಾದರೆ ಎಲ್ಲರೂ ಮುಖ್ಯವಾಹಿನಿಗೆ ಬರಬೇಕು, ಕೆಲವೇ ಜನರ ಕೈಯಲ್ಲಿ ಅಧಿಕಾರ, ಸಂಪತ್ತು ಇದ್ದರೆ ಇದು ಆಗುವುದಿಲ್ಲ.
ದೇಶಕ್ಕೆ ಬಿಜೆಪಿ ಪಕ್ಷವೇ ಡೇಂಜರ್
ಕಾಂಗ್ರೆಸ್ ಜಾಹಿರಾತಿಗೆ ಪ್ರತಿಯಾಗಿ ಬಿಜೆಪಿಯವರು ಕಾಂಗ್ರೆಸ್ ಡೇಂಜರ್ ಎಂಬ ಜಾಹಿರಾತು ಬಿಡುಗಡೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಹೆಣ್ಣುಮಕ್ಕಳಿಗೆ ಉಚಿತ ಬಸ್ ಸೌಲಭ್ಯ, ಉಚಿತ ವಿದ್ಯುತ್, ಅನ್ನಭಾಗ್ಯ ಯೋಜನೆಗಳು ಡೇಂಜರ್ ಆಗುತ್ತವೆಯೇ, ಸಮಾಜವನ್ನು ಒಡೆಯುವಂತಹ ಕಾರ್ಯಗಳು, ಮತಗಳ ಧ್ರುವೀಕರಣ ಮಾಡುವುದು ಅಪಾಯಕಾರಿಯೇ ಹೊರತು, ವಿವಿಧತೆಯಲ್ಲಿ ಏಕತೆಯನ್ನು ತರುವುದು ಡೇಂಜರ್ ಅಲ್ಲ, ದೇಶಕ್ಕೆ ಬಿಜೆಪಿ ಪಕ್ಷವೇ ಡೇಂಜರ್ ಹೊರತು, ಕಾಂಗ್ರೆಸ್ ಪಕ್ಷ ಅಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಇದ್ದರೆ, ಭ್ರಷ್ಟಾಚಾರ ಹೆಚ್ಚಾಗಲಿದೆ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕಾನೂನು ಪ್ರಕಾರ ರೇಡ್ ಮಾಡುವುದನ್ನು ನಾವು ಎಂದೂ ವಿರೋಧಿಸುವುದಿಲ್ಲ, ಬಿಜೆಪಿಯಲ್ಲಿ ಶ್ರೀಮಂತರಿಲ್ಲವೇ, ಯಡಿಯೂರಪ್ಪ, ವಿಜಯೇಂದ್ರ ಭ್ರಷ್ಟಾಚಾರ ಮಾಡಿಲ್ಲವೇ, ಶೋಭಾ ಕರಂದ್ಲಾಜೆ, ಅಶೋಕ್, ಬಸವರಾಜ್ ಬೊಮ್ಮಾಯಿ ಸೇರಿದಂತೆ ಬಿಜೆಪಿಯವರ ಮೇಲೆ ರೇಡ್‌ಗಳು ಏಕೆ ಆಗುತ್ತಿಲ್ಲ, ಆದಾಯ ತೆರಿಗೆಯನ್ನು ಸರಿಯಾಗಿ ಪಾವತಿಸದವರ ಮೇಲೆ ಕ್ರಮವಾಗಲಿ, ಆದಾಯಮೀರಿ ಆಸ್ತಿ ಸಂಪಾದಿಸಿದ ಎಲ್ಲರ ಮೇಲೂ ಕಾನೂನು ಕ್ರಮವಾಗಬೇಕು ಎಂದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪ ಸರಿಯಲ್ಲ, 2022ರಲ್ಲಿ ಹೋಲಿಸಿದರೆ ಕಾಂಗ್ರೆಸ್ ಸರ್ಕಾರವಿದ್ದಾಗಲೇ ಅಪರಾಧಗಳು ಕಡಿಮೆಯಾಗಿದೆ. 2023 ರಲ್ಲಿ 1,295 ಅಪರಾಧ ಪ್ರಕರಣಗಳು ನಡೆದಿದ್ದರೆ, ಬಿಜೆಪಿ ಆಡಳಿತ ಕಾಲದಲ್ಲಿ 2022 ರಲ್ಲಿ 1,370 ಪ್ರಕರಣಗಳು ನಡೆದಿದೆ ಎಂದರು.