ಬೆಂಗಳೂರು:ಕರ್ನಾಟಕಕ್ಕೆ ಇನ್ನೊಂದು ವಾರದಲ್ಲಿ ಬರ ಪರಿಹಾರ ಹಣ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ.
ರಾಜ್ಯಕ್ಕೆ ಬರ ಪರಿಹಾರ ನಿಧಿ ಬಂದಿಲ್ಲ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಕೇಂದ್ರ ಚುನಾವಣಾ ಆಯೋಗ ಸಮ್ಮತಿ
ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ದ್ವಿಸದಸ್ಯ ಪೀಠ ಇಂದು ವಿಚಾರಣೆ ನಡೆಸುವ ವೇಳೆ ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ವೆಂಕಟರಮಣಿ ಮಧ್ಯೆ ಪ್ರವೇಶಿಸಿ, ಕರ್ನಾಟಕದ ರೈತರಿಗೆ ಪರಿಹಾರ ನೀಡಲು ಕೇಂದ್ರ ಚುನಾವಣಾ ಆಯೋಗ ಸಮ್ಮತಿ ನೀಡಿದೆ.
ಆಯೋಗ ಸಮ್ಮತಿ ನೀಡಿರುವ ಹಿನ್ನೆಲೆಯಲ್ಲಿ ಇನ್ನೊಂದು ವಾರದೊಳಗೆ ರಾಜ್ಯದ ರೈತರಿಗೆ ಪರಿಹಾರ ಬಿಡುಗಡೆ ಮಾಡಲಾಗುವುದು ಎಂಬ ಮಾಹಿತಿ ನೀಡುತ್ತಿದ್ದಂತೆ ವಿಚಾರಣೆಯನ್ನು ಏಪ್ರಿಲ್ 29ಕ್ಕೆ ಮುಂದೂಡಲಾಯಿತು.
ಮಾಹಿತಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಹರ್ಷ ವ್ಯಕ್ತಪಡಿಸಿ, ಸುಪ್ರೀಂಕೋರ್ಟ್‌ಗೆ ಕೇಂದ್ರ ಭರವಸೆ ನೀಡಿದ್ದನ್ನು ಸ್ವಾಗತಿಸಿದ್ದಾರೆ.
ಮುಖ್ಯಮಂತ್ರಿ ಧನ್ಯವಾದ
ಬರ ಪರಿಹಾರ ವಿಳಂಬ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯಸ್ಥಿಕೆ ಮಾಡಿರುವುದಕ್ಕೆ ಮುಖ್ಯಮಂತ್ರಿ ಧನ್ಯವಾದ ತಿಳಿಸಿದ್ದಾರೆ.
ಮುಂಗಾರು ಮತ್ತು ಹಿಂಗಾರು ರಾಜ್ಯದಲ್ಲಿ ಕೈಕೊಟ್ಟಿದ್ದರಿಂದ 223 ತಾಲ್ಲೂಕುಗಳು ಬರಕ್ಕೆ ಸಿಲುಕಿ ರೈತರು ಸಂಕಷ್ಟದಲ್ಲಿದ್ದು, ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು.
ಮನವಿ ನಂತರ ಕೇಂದ್ರ ಕೃಷಿ ಇಲಾಖಾ ಅಧಿಕಾರಿಗಳ ತಂಡ ಕಳುಹಿಸಿ, ಬರ ಅಧ್ಯಯನ ವರದಿ ತರಿಸಿಕೊಂಡಿತ್ತು.
ಇಷ್ಟಾದ ನಂತರವೂ ಪರಿಹಾರ ನೀಡದಿದ್ದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಿಯೋಗ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಬರ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು.
ಕೇಂದ್ರದ ವಿರುದ್ಧ ಕಾನೂನು ಸಮರ
ವರದಿ ನೀಡಿ ನಾಲ್ಕು ತಿಂಗಳು ಕಳೆದರೂ ಪರಿಹಾರ ಬಾರದೆ ಲೋಕಸಭಾ ಚುಣಾವಣೆ ಘೋಷಣೆ ಆಗುತ್ತದೆ ಎಂಬ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು, ವಿಷಯವನ್ನು ಸಂಪುಟದಲ್ಲಿ ಪ್ರಸ್ತಾಪಿಸಿ, ಸುಪ್ರೀಂಕೋರ್ಟ್‌ಗೆ ಮೊರೆ ಹೋಗುವ ನಿರ್ಧಾರ ಕೈಗೊಂಡಿದ್ದಲ್ಲದೆ, ಕೇಂದ್ರದ ವಿರುದ್ಧ ಬಹಿರಂಗ ಕಾನೂನು ಸಮರಕ್ಕೆ ಮುಂದಾಗಲು ತೀರ್ಮಾನ ಕೈಗೊಂಡರು.
ಇತಿಹಾಸದಲ್ಲೇ ರಾಜ್ಯ ಸರ್ಕಾರವೊಂದು ಪರಿಹಾರಕ್ಕಾಗಿ ಕೇಂದ್ರದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದು ಕರ್ನಾಟಕ ಸರ್ಕಾರ ಒಂದೆ.