ಬೆಂಗಳೂರು:ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಘಟಾನುಘಟಿಗಳು ಮೇ 7ರಂದು ನಡೆಯುತ್ತಿರುವ ಎರಡನೇ ಹಂತದ ಲೋಕಸಭಾ ಚುನಾವಣಾ ಕಣದಲ್ಲಿದ್ದಾರೆ.
ನಾಮಪತ್ರ ಹಿಂತೆಗೆದುಕೊಳ್ಳಲು ಕಡೆಯ ದಿನವಾದ ಇಂದು ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ಹಾವೇರಿ, ಧಾರವಾಡ, ಬೆಳಗಾವಿ, ಚಿಕ್ಕೋಡಿ, ವಿಜಾಪುರ, ಬಾಗಲಕೋಟೆ, ಬೀದರ್, ಗುಲ್ಬರ್ಗ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ಇಂದು ನಾಮಪತ್ರ ಹಿಂದಕ್ಕೆ ಪಡೆಯುವ ಕಾರ್ಯ ಪೂರ್ಣಗೊಂಡ ನಂತರ ಘಟಾನುಘಟಿಗಳು ಕಣದಲ್ಲಿ ಉಳಿದಿದ್ದಾರೆ.
ಬಿಜೆಪಿಗೆ ಜೆಡಿಎಸ್ ಬೆಂಬಲ
ಎನ್‌ಡಿಎ ಮೈತ್ರಿಕೂಟದಲ್ಲಿ ಜೆಡಿಎಸ್ ಭಾಗಿಯಾಗಿರುವುದರಿಂದ ಆ ಪಕ್ಷ ಎರಡನೇ ಹಂತದ ಯಾವುದೇ ಕ್ಷೇತ್ರಗಳಲ್ಲಿ ಸ್ಪರ್ಧಿಸದೆ, ಮಿತ್ರ ಪಕ್ಷ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದೆ.
ಏಪ್ರಿಲ್ 26ರಂದು ನಡೆಯುವ ಮೊದಲ ಹಂತದ 14 ಕ್ಷೇತ್ರಗಳಲ್ಲಿ ಎನ್‌ಡಿಎ ಕೂಟದ ಬಿಜೆಪಿ 11 ಹಾಗೂ ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಕಣದಲ್ಲಿ ಉಳಿದಿದ್ದರೆ, ಕಾಂಗ್ರೆಸ್ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಉಮೇದುವಾರರನ್ನು ಅದೃಷ್ಟ ಪರೀಕ್ಷೆಗೆ ಇಳಿಸಿದೆ.
ಎರಡನೇ ಹಂತದಲ್ಲಿ ನಡೆಯುತ್ತಿರುವ ಧಾರವಾಡ, ಶಿವಮೊಗ್ಗ ಹಾಗೂ ದಾವಣಗೆರೆಯಲ್ಲಿ ಕೆಲವು ಪ್ರಭಾವಿಗಳು ವಿವಿಧ ಕಾರಣಕ್ಕೆ ಚುನಾವಣಾ ಕಣದಲ್ಲಿ ಉಳಿದಿದ್ದರೂ ಮೇಲ್ನೋಟಕ್ಕೆ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ನಡುವೆಯೇ ಸೆಣೆಸಾಟ ನಡೆಯಲಿದೆ.
ಕೇಂದ್ರ ರಾಜಕಾರಣದತ್ತ
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಧಾರವಾಡದಿಂದ ನಾಲ್ಕನೇ ಬಾರಿಗೆ ಮರು ಪ್ರವೇಶ ಬಯಸಿ ಕಣಕ್ಕಿಳಿದಿದ್ದರೆ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಬಿಜೆಪಿಯಿಂದ ಇದೇ ಮೊದಲ ಬಾರಿಗೆ ಕೇಂದ್ರ ರಾಜಕಾರಣದತ್ತ ಮುಖ ಮಾಡಿದ್ದಾರೆ.
ಸಿದ್ದರಾಮಯ್ಯ ಸಂಪುಟದ ಐವರು ಪ್ರಭಾವೀ ಸಚಿವರು ತಮ್ಮ ಪತ್ನಿ ಇಲ್ಲವೇ ಪುತ್ರ, ಪುತ್ರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿ ಚುನಾವಣಾ ಹೋರಾಟಕ್ಕೆ ಇಳಿದಿದ್ದಾರೆ.
ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಾವು ಈ ಹಿಂದೆ ಪ್ರತಿನಿಧಿಸುತ್ತಿದ್ದ ಗುಲ್ಬರ್ಗ ಮೀಸಲು ಕ್ಷೇತ್ರವನ್ನು ತಮ್ಮ ಅಳಿಯ ರಾಧಾಕೃಷ್ಣ ಅವರಿಗೆ ಬಿಟ್ಟುಕೊಟ್ಟಿದ್ದಾರೆ.
ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿರುವ ಎಸ್.ಎಸ್.ಮಲ್ಲಿಕಾರ್ಜುನ್ ತಮ್ಮ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ದಾವಣಗೆರೆಯಿಂದಲೂ, ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಬೆಳಗಾವಿಯಿಂದ, ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಚಿಕ್ಕೋಡಿಯಿಂದಲೂ, ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತ ಪಾಟೀಲ್ ಬಾಗಲಕೋಟೆಯಿಂದಲೂ, ಈಶ್ವರಖಂಡ್ರೆ ಪುತ್ರ ಸಾಗರ್ ಖಂಡ್ರೆ ಬೀದರ್‌ನಿಂದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ.
ಇನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಶಿವಮೊಗ್ಗದಿಂದ, ಮಾಜಿ ಉಪಮುಖ್ಯಮಂತ್ರಿ ಬಿ.ಶ್ರೀರಾಮುಲು ಬಳ್ಳಾರಿಯಿಂದ, ಕೇಂದ್ರದ ಮತ್ತೊಬ್ಬ ಸಚಿವ ಭಗವಂತ ಖೂಬಾ ಬೀದರ್‌ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಮೊದಲನೇ ಹಂತಕ್ಕಿಂತ ಎರಡನೇ ಹಂತದಲ್ಲಿ ಪ್ರಭಾವಿಗಳ ಮುಂದೆ ಪ್ರಭಾವಿಗಳೇ ಸೆಣೆಸಾಟಕ್ಕೆ ಇಳಿದಿದ್ದಾರೆ.