ಬೆಂಗಳೂರು:ಏಪ್ರಿಲ್ 26ರಂದು ಚುನಾವಣೆ ನಡೆಯಲಿರುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಮತದಾನಕ್ಕಾಗಿ ಅರೆಸೇನಾ ಪಡೆ ಮತ್ತು ಮತಗಟ್ಟೆಗಳಲ್ಲಿ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ.
ಇದೇ ಮೊದಲ ಬಾರಿಗೆ ಮತಗಟ್ಟೆಗಳಿಗೆ ಮೊಬೈಲ್ ನಿಷೇಧಿಸಿರುವ ಆಯೋಗ, ಮತದಾರರ ಎಡಗೈ ತೋರುಬೆರಳಿಗೆ ಅಳಿಸಲಾಗದ ಶಾಹಿ ಬಳಕೆ ಮಾಡುತ್ತಿದೆ.
ಮೈಕ್ರೋ ಅಬ್ಸರರ್ವಸ್ಸ್
ಹದಿನಾಲ್ಕು ಕ್ಷೇತ್ರಗಳ ವ್ಯಾಪ್ತಿಯಲ್ಲಿ 5,000 ಮೈಕ್ರೋ ಅಬ್ಸರರ್ವಸ್ಸ್‌ಗಳನ್ನು ನೇಮಿಸಲಾಗಿದೆ.
ಮತದಾನ ಸಿದ್ಧತೆ ಸಂಬಂಧ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ರಾಜ್ಯ ಮುಖ್ಯಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, 65 ಕಂಪನಿ ಅರೆಸೇನಾ ಪಡೆ ಹಾಗೂ ಅನ್ಯ ರಾಜ್ಯಗಳ ವಿಶೇಷ ಪೊಲೀಸ್ ಪಡೆಗಳನ್ನು ಭದ್ರತೆಗಾಗಿ ನಿಯೋಜಿಸಲಾಗುತ್ತಿದೆ.
ಮತದಾನದ ಅನುಕೂಲಕ್ಕಾಗಿ 1,40,000 ಸಿಬ್ಬಂದಿ ನೇಮಿಸಲಾಗಿದೆ, ಬಿಗಿ ಬಂದೋಬಸ್ತ್‌ಗಾಗಿ 65 ಅರೆಸೇನಾ ಕಂಪನಿ ಜೊತೆಗೆ ನೆರೆ ರಾಜ್ಯ ಹಾಗೂ ರಾಜ್ಯದ 50,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ ಎಂದರು.
ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ, ಇಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ರಾಜ್ಯ ಮುಖ್ಯಚುನಾವಣಾಧಿಕಾರಿ ಕಚೇರಿ ಅಧಿಕಾರಿಗಳು ವೀಕ್ಷಣೆ ಮಾಡಬಹುದಾಗಿದೆ.
ವೆಬ್‌ಕಾಸ್ಟಿಂಗ್ ವ್ಯವಸ್ಥೆ
ಎಲ್ಲಾ ಮತಗಟ್ಟೆಗಳಲ್ಲಿ ಕಣ್ಗಾವಲಿನ ವ್ಯವಸ್ಥೆ ಇದ್ದರೂ 14 ಕ್ಷೇತ್ರ ವ್ಯಾಪ್ತಿಯ 19,701 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ, ಅಂದರೆ ಮೂರನೇ ಎರಡು ಭಾಗದಲ್ಲಿ ಈ ವ್ಯವಸ್ಥೆ ಇದೆ.
ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಸಾರ್ವಜನಿಕ ಭಾಷಣ ಮತ್ತು ರ‍್ಯಾಲಿಗಳನ್ನು ನಡೆಸುವಂತಿಲ್ಲ, ಆದರೆ, ಐದು ಜನಕ್ಕೆ ಮೀರದಂತೆ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡುಬಹುದಾಗಿದೆ.
ಮತದಾರರಲ್ಲದ ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರು ಕ್ಷೇತ್ರ ತೆರವುಗೊಳಿಸಬೇಕು, ಈ ನಿಯಮ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮೈಸೂರು-ಕೊಡಗು, ಚಾಮರಾಜನಗರ, ಹಾಸನ, ಮಂಡ್ಯ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2,88,19,342 ಮತದಾರರಿದ್ದು ಇವರ ಅನುಕೂಲಕ್ಕಾಗಿ ಒಟ್ಟು 30,602 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ ಎಂದರು.
ಮತ ಚಲಾಯಿಸುವ ಮೊದಲು ಮತದಾನ ಕೇಂದ್ರಗಳಲ್ಲಿ ಅವರ ಗುರುತಿಗಾಗಿ ನೀಡಿರುವ ಮತದಾರರ ಗುರುತಿನ ಚೀಟಿ ಇಲ್ಲವೇ ಆಧಾರ್ ಕಾರ್ಡ್, ಮನ್ರೆಗಾ ಜಾಬ್ ಕಾರ್ಡ್, ವಾಹನ ಚಾಲನಾ ಪರವಾನಗಿ ಸೇರಿದಂತೆ ಅಧಿಕೃತ ಗುರುತಿನ ಚೀಟಿ ತೋರಿಸಿ ಮತದಾನ ಮಾಡಬಹುದಾಗಿದೆ.
ಮತದಾನಕ್ಕೆ ರಜೆ ಘೋಷಣೆ
ಮತದಾನ ದಿನದಂದು ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ, ಶಾಲಾ-ಕಾಲೇಜುಗಳಿಗೂ ರಜೆ ಘೋಷಣೆಯಾಗಿದೆ, ಖಾಸಗಿ ಸಂಸ್ಥೆಗಳು ತಮ್ಮ ನೌಕರರಿಗೆ ವೇತನ ಸಹಿತ ರಜೆ ನೀಡಬೇಕು, ತಪ್ಪಿದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ.
ಮತದಾನ ದಿನದಂದು ಮತಗಟ್ಟೆಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಚುನಾವಣಾ ಪ್ರಚಾರ ಕೈಗೊಳ್ಳುವುದನ್ನು ನಿರ್ಬಂಧಿಸಲಾಗಿದೆ.
ಚುನಾವಣಾ ಆಯೋಗದ ನಿರ್ದೇಶನಗಳನ್ನು ಉಲ್ಲಂಘಿಸಿದರೆ, ಕಾನೂನಿನಡಿ ಸಾಧ್ಯವಿರುವ ಅತ್ಯಂತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಖ್ಯಚುನಾವಣಾಧಿಕಾರಿ ಎಚ್ಚರಿಸಿದರು.
