ಫಲಿತಾಂಶಕ್ಕೆ ಅಭ್ಯರ್ಥಿಗಳು 6 ವಾರ ಕಾಯಬೇಕು
ಬೆಂಗಳೂರು: ಕರ್ನಾಟಕದ ಮೊದಲ ಹಂತದ ೧೪ ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಚಾಮರಾಜನಗರ ಘಟನೆ ಹೊರತುಪಡಿಸಿ, ಉಳಿದಂತೆ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ.
ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಆರುವಾರಗಳ ಕಾಲ ಅಂದರೆ ಜೂನ್ 4ರ ವರೆಗೆ ಕಾಯಬೇಕಿದೆ.
ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದಲ್ಲಿ ಮತದಾನ ಬಿರುಸಿನಿಂದ ನಡೆದಿದ್ದು, ಕರಾವಳಿ ತೀರದ ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರಿನಲ್ಲಿ ಮತದಾನ ಪ್ರಮಾಣ ಹೆಚ್ಚಾಗಿದೆ.
ಕರಾವಳಿ ಹೊರತುಪಡಿಸಿದರೆ ಮೈಸೂರು-ಕೊಡಗು, ಮಂಡ್ಯ ಹಾಗೂ ತುಮಕೂರು ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ನಡೆದಿದೆ.
ಬೆಂಗಳೂರು ಗ್ರಾಮಾಂತರ ಹೊರತುಪಡಿಸಿ ಉಳಿದ ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಆರಂಭದಲ್ಲಿ ಭಾರೀ ಕಡಿಮೆ ಇತ್ತು.
ಚುನಾವಣಾ ಆಯೋಗ ಅತ್ಯಂತ ಬಿಗಿಬಂದೋಬಸ್ತ್ ಕೈಗೊಂಡಿದ್ದರಿಂದ ಸಣ್ಣ-ಪುಟ್ಟ ಘಟನೆಗಳು ಹೊರತುಪಡಿಸಿ ಚುನಾವಣೆ ನಡೆದ ಎಲ್ಲ ಕ್ಷೇತ್ರಗಳಲ್ಲೂ ಶಾಂತಿಯುತವಾಗಿತ್ತು.
ಬೆಂಗಳೂರು ಗ್ರಾಮಾಂತರ ಹಾಗೂ ಹಾಸನ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗಿಫ್ಟ್ ಕೂಪನ್ ಹಾಗೂ ಹಣದ ಆಮಿಷ ಒಡ್ಡುತ್ತಿದ್ದಾರೆಂಬ ಆರೋಪ ಕೇಳಿಬಂದಿದ್ದಲ್ಲದೆ, ಕೆಲವೆಡೆ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರನ್ನು ಹಿಡಿದು ತನಿಖಾಧಿಕಾರಿಗಳಿಗೆ ಒಪ್ಪಿಸಿದರೆ, ಮತ್ತೆ ಕೆಲವೆಡೆ ಈ ಪಕ್ಷಗಳ ಕಾರ್ಯಕರ್ತರ ನಡುವೆ ಕೈ-ಕೈ ಮಿಲಾಯಿಸುವ ಹಂತ ತಲುಪಿತ್ತು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪಡುವಲಹಿಪ್ಪೆಯಲ್ಲೂ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರು ಉತ್ತರ ಕ್ಷೇತ್ರದಲ್ಲೂ, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪುತ್ರ ಯತೀಂದ್ರ ಜೊತೆಗೆ ಸಿದ್ದರಾಮನಹುಂಡಿಯಲ್ಲೂ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲೂ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೊಡ್ಡ ಆಲಹಳ್ಳಿಯಲ್ಲೂ ಮತ ಚಲಾಯಿಸಿದರು.
ಚಿತ್ರನಟ ಸುದೀಪ್, ರವಿಚಂದ್ರನ್, ಯಶ್, ದರ್ಶನ್ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಿದರು.
ಆಸ್ಪತ್ರೆಗೆ ದಾಖಲಾಗಿದ್ದ ಇನ್ಫೋಸಿಸ್‌ನ ನಾರಾಯಣ ಮೂರ್ತಿ ಡಿಸ್ಚಾರ್ಜ್ ಆಗಿ ನೇರವಾಗಿ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.
ನವ ವಧು- ವರರು ಮತದಾನ
ಚಿತ್ರದುರ್ಗ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರಿನ ಮೂರು ಕಡೆಗಳಲ್ಲಿ ವಧು-ವರರು ಮದುವೆ ಮುಗಿಸಿಕೊಂಡು ಬಂದು ಮತದಾನದ ಹಕ್ಕು ಚಲಾಯಿಸಿದರು.
ನೇತ್ರಾವತಿ ನದಿಗೆ ಸೇತುವೆ ಸಂಪರ್ಕ ಇಲ್ಲದಿದ್ದರೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾವೂರು ಉಳಿಯ ದ್ವೀಪದ ೧೫೦ಕ್ಕೂ ಹೆಚ್ಚು ಮತದಾರರು ದೋಣಿಗಳಲ್ಲಿ ಬಂದು ಮತ ಚಲಾಯಿಸಿದರು.
ಮಂಗಳೂರಿನ ಉಳಾಯಿಬೆಟ್ಟುವಿನ ಜೀವಿತ ಎಂಬುವವರು ಚುನಾವಣೆಯಲ್ಲಿ ಮತ ಚಲಾಯಿಸುಲು ದುಬೈನಿಂದ ಆಗಮಿಸಿದರೆ, ಫಿಲಿಫೈನ್ಸ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಚಿತ್ರದುರ್ಗದ ಶಿಕ್ಷಕರ ಕಾಲೋನಿ ನಿವಾಸಿ ಲಿಖಿತ ಜೋಗಿ ಮಟ್ಟಿ ರಸ್ತೆಯಲ್ಲಿರುವ ಮತಗಟ್ಟೆ ಸಂಖ್ಯೆ 230ರಲ್ಲಿ ಮತದಾನ ಮಾಡಿದ್ದು ವಿಶೇಷವಾಗಿತ್ತು.
ನ್ಯಾಯಾಧೀಶ ಆರ್.ಎಸ್.ಜೀತು ಅವರು ಉಡುಪಿಯಿಂದ ಆಗಮಿಸಿ ತುಮಕೂರು ಗ್ರಾಮಾಂತರದ ಕೆ.ಪಾಲಸಂದ್ರದಲ್ಲಿನ ಮತಗಟ್ಟೆ ಸಂಖ್ಯೆ 114ರಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹುಣಸೂರು ತಾಲೂಕಿನ ತಿಪ್ಪೂರು ಗ್ರಾಮದ ಮತಗಟ್ಟೆಯಲ್ಲಿ 90 ವರ್ಷದ ಪುಟ್ಟಮ್ಮ ಮತದಾನದ ಹಕ್ಕನ್ನು ಚಲಾಯಿಸಿ ವಾಪಸಾಗುತ್ತಿದ್ದಾಗ ದಿಢೀರ್ ಕುಸಿದುಬಿದ್ದು, ಮೃತಪಟ್ಟ ಘಟನೆ ವರದಿಯಾಗಿದೆ.
ಮತದಾನ ಬಹಿಷ್ಕಾರ
ಚಾಫಲಿತಾಂಶಕ್ಕೆ ಅಭ್ಯರ್ಥಿಗಳು 6 ವಾರ ಕಾಯಬೇಕು
ಕನಿಷ್ಠ ಮೂಲಭೂತ ಸೌಕರ್ಯವನ್ನೂ ನೀಡಲಾಗಿಲ್ಲ. ಕುಡಿಯುವ ನೀರು, ರಸ್ತೆ, ವಿದ್ಯುತ್, ಆರೋಗ್ಯ, ಶಿಕ್ಷಣ ಎಲ್ಲವೂ ಇಲ್ಲಿ ಮರೀಚಿಕೆಯಾಗಿದೆ. ಕೆಲವು ದಿನಗಳ ಹಿಂದೆಯೇ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಆದರೂ, ಯಾವೊಂದು ಭರವಸೆ ಸಿಗದೇ ಇರುವ ಹಿನ್ನೆಲೆಯಲ್ಲಿ ಮತದಾನವನ್ನು ಬಹಿಷ್ಕಾರ ಮಾಡುತ್ತಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ.
ಇಂಡಿಗನತ್ತ ಗ್ರಾಮದಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಮತಗಟ್ಟೆಯನ್ನು ಧ್ವಂಸ ಮಾಡಿದ್ದಾರೆ. ಮತದಾನದಿಂದ ದೂರ ಉಳಿದ ಗ್ರಾಮಸ್ಥರಿಂದ ಈ ಕೃತ್ಯ ನಡೆದಿದೆ. ಈ ವೇಳೆ ಗ್ರಾಮಸ್ಥರ ಮನವೊಲಿಕೆಗೆ ತೆರಳಿದ್ದ ಅಧಿಕಾರಿಗಳ ಮೇಲೆಯೂ ಹಲ್ಲೆ ನಡೆಸಲಾಗಿದೆ. ಆಕ್ರೋಶಗೊಂಡ ಹಲವರು ಇವಿಎಂ, ಮೇಜು ಕುರ್ಚಿ ಮತಗಟ್ಟೆ ಸಾಮಗ್ರಿಗಳನ್ನು ಧ್ವಂಸ ಮಾಡಿದ್ದಾರೆ.
ಸ್ಥಳದಲ್ಲಿ ಜನರನ್ನು ಚದುರಿಸಲು ಪೊಲೀಸರಿಂದ ಲಾಠಿ ಚಾರ್ಜ್ ನಡೆಸಲಾಗಿದೆ. ಇದೇ ವೇಳೆ ತಿರುಗಿಬಿದ್ದ ಜನರು ಸಹ ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದೆ. ಸಾರ್ವಜನಿಕರು ಸೇರಿ ಅಧಿಕಾರಿಗಳಿಗೂ ಗಾಯಗಳಾಗಿವೆ. ಪುರುಷರು, ಮಹಿಳೆಯರು ಎನ್ನದೆ ಪೊಲೀಸರು ಲಾಠಿ ಚಾರ್ಚ್ ಮಾಡಿದ್ದಾರೆ.
ಆಕ್ಸಿಜನ್ ಸಹಿತ ಬಂದು ಮತದಾನ
ಬೆಂಗಳೂರಿನಲ್ಲಿ ವೃದ್ಧೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರೂ, ಆಕ್ಸಿಜನ್ ಸಮೇತ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದಾರೆ.
ಜಂಬೂ ಸವಾರಿ ದಿನ್ನೆಯಲ್ಲಿ ಮತ ಚಲಾಯಿಸಲು ಬಂದ ಮಹಿಳೆಯೊಬ್ಬರಿಗೆ ಹೃದಯ ಸ್ಥಂಭನ ಆಗಿದೆ. ಬಳಿಕ ಅಲ್ಲಿಯೇ ಮತ ಚಲಾಯಿಸಲು ವೈದ್ಯರುಬಂದಿದ್ದರಿಂದ ಅವರ ಜೀವ ಉಳಿದಿದೆ.
ಮಹಿಳೆ ಕುಸಿದ ಸಮಯದಲ್ಲಿ ಅಲ್ಲಿಗೆ ಬಂದಿದ್ದ ಬೊಮ್ಮಸಂದ್ರದ ನಾರಾಯಣ ಆರೋಗ್ಯ ಕೇಂದ್ರದ ಮೂತ್ರಪಿಂಡ ತಜ್ಞ ಡಾ. ಗಣೇಶ್ ಶ್ರೀನಿವಾಸ ಪ್ರಸಾದ್ ಅವರು ರಕ್ಷಣೆಗೆ ದಾವಿಸಿದ್ದಾರೆ.
ಪರೀಕೆ ಮಾಡಿದ ವೈದ್ಯರು, ಪಲ್ಸ್ ರೇಟ್ ಕಡಿಮೆಯಾಗುತ್ತಿರುವುದನ್ನು ಗಮನಿಸಿದ್ದಾರೆ. ಆ ಸಮಯದಲ್ಲಿ ದೇಹ ಕೂಡ ಯಾವುದೇ ಸ್ಪಂದನೆಯನ್ನು ಮಾಡುತ್ತಿರಲಿಲ್ಲ. ಹೀಗಾಗಿ ಕೂಡಲೇ ಸಿಪಿಆರ್ ಮಾಡಿದ್ದು, ಪರಿಸ್ಥಿತಿಯು ಕೊಂಚ ಮಟ್ಟಿಗೆ ಸುಧಾರಿಸುವಂತೆ ಮಾಡಿದ್ದಾರೆ. ಚುನಾವಣಾ ಕರ್ತವ್ಯದಲ್ಲಿದ್ದವರು ಧಾವಿಸಿ ಜ್ಯೂಸ್ ನೀಡಿದ್ದಾರೆ. ಕೂಡಲೇ ಆಂಬ್ಯುಲೆನ್ಸ್‌ಗೆ ಕರೆ ಮಾಡಲಾಗಿದೆ. ಐದು ನಿಮಿಷದೊಳಗೆ ಮತಗಟ್ಟೆ ಬಳಿ ಆಂಬ್ಯುಲೆನ್ಸ್ ಬಂದಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.