ಮರುಪರೀಕ್ಷೆ ಇಲ್ಲ: ಸರ್ಕಾರದ ಸ್ಪಷ್ಟನೆ
ಬೆಂಗಳೂರು:ಪಠ್ಯಕ್ರಮದ ಹೊರತಾದ ಪ್ರಶ್ನೆಗಳನ್ನು ಸಿಇಟಿ ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ ಎಂದು ಸರ್ಕಾರ ಘೋಷಣೆ ಮಾಡಿರುವ ಜೊತೆಗೆ ಮರು ಪರೀಕ್ಷೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಸಂಬಂಧ ಪ್ರಕಟಣೆ ನೀಡಿರುವ ಉನ್ನತ ಶಿಕ್ಷಣ ಪ್ರಧಾನ ಕಾರ್ಯದರ್ಶಿ ಶ್ರೀಕರ್ ಎಂ.ಎಸ್. ಅವರು, ಗಣಿತ, ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಜೀವ ಶಾಸ್ತ್ರಗಳಲ್ಲಿನ ಒಟ್ಟಾರೆ 50 ಅಂಕಗಳು ಪಠ್ಯಕ್ರಮ ಹೊರತಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ನಿಗದಿಯಂತೆ ಸಿಇಟಿ ಫಲಿತಾಂಶ
ಈ ಎಲ್ಲ ಗೊಂದಲದ ನಡುವೆಯೂ ನಿಗದಿಯಂತೆ ಸಿಇಟಿ ಪರೀಕ್ಷೆ ಫಲಿತಾಂಶ ಮೇ ತಿಂಗಳಲ್ಲೇ ಪ್ರಕಟಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಭೌತಶಾಸ್ತ್ರದಲ್ಲಿ 9, ರಾಸಾಯನ ಶಾಸ್ತ್ರದಲ್ಲಿ 15, ಗಣಿತ 15, ಜೀವಶಾಸ್ತ್ರದಲ್ಲಿನ 11 ಅಂಕಗಳನ್ನು ಹೊರಗಿಟ್ಟು ಮೌಲ್ಯಮಾಪನ ಮಾಡಲಾಗುವುದು.
ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕ ಪಡುವ ಅಗತ್ಯವಿಲ್ಲ, ಒಟ್ಟಾರೆ 4 ಪಠ್ಯಗಳಿಂದ 240 ಅಂಕಗಳಿಗೆ ಬದಲಾಗಿ 190 ಅಂಕಗಳನ್ನು ಮಾತ್ರ ಪರಿಗಣಿಸಿ ವಿದ್ಯಾರ್ಥಿಗಳಿಗೆ ಅವರು ಪಡೆದ ಅಂಕಗಳ ಮೌಲ್ಯದ ಮೇಲೆ ರ‍್ಯಾಂಕ್‌ಗಳನ್ನು ನೀಡಲಾಗುವುದು.
ದ್ವಿತೀಯ ಪಿಯುಸಿ ಅಂಕ
ಸಿಇಟಿ ಅಂಕಗಳ ಜೊತೆಗೆ ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳು ಪಡೆದಿರುವ 50 ಅಂಕಗಳನ್ನು ರ‍್ಯಾಂಕ್ ನೀಡುವ ಸಂದರ್ಭದಲ್ಲಿ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.
ಪರಿಣಿತ ಸಮಿತಿಯ ವರದಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕೆಇಎಯ ಮತ್ತು ಸಿಇಟಿ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ಸಾಮಾನ್ಯತೆಯನ್ನು ಉಳಿಸಲು ನಿರ್ಧರಿಸಿದೆ.
ಕೆಇಎ ಸರಿಯಾದ ಉತ್ತರಗಳೊಡನೆ ಪಠ್ಯಕ್ರಮದ ಹೊರತಾದ ಪ್ರಶ್ನೆಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡುವುದು.
ಅಭ್ಯರ್ಥಿಗಳ ಹಿತ
ಸಿಇಟಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಅಂಕಗಳನ್ನು ಉಳಿದ ಪ್ರಶ್ನೆಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡುವುದರಿಂದ ಅಭ್ಯರ್ಥಿಗಳ ಹಿತ ಕಾಪಾಡಲಾಗುವುದು.
ಸಿಸಿಟಿಗೆ ಮರು ಪರೀಕ್ಷೆ ಮಾಡಬಾರದೆಂದು ಸರ್ಕಾರ ತೀರ್ಮಾನಿಸಿದೆ, ಮೇ ಮತ್ತು ಜೂನ್ ಮಾಹೆಯಲ್ಲಿ ಕಾಮೆಡ್-ಕೆ, ಜೆಈಈ, ಮುಖ್ಯ ಪರೀಕ್ಷೆ ನೀಟ್, ನಾಟಾ, ಮತ್ತು ಎರಡನೇ ಪಿಯುಸಿಯ 2 ಮತ್ತು 3ನೇ ಪರೀಕ್ಷೆ ನಡೆಯುಲಿವೆ.
ಇಂತಹ ಸಂದರ್ಭದಲ್ಲಿ ಸಿಇಟಿಗೆ ಮರುಪರೀಕ್ಷೆ ಸೂಕ್ತವಲ್ಲವೆಂದು ಹಾಗೂ ವಿದ್ಯಾರ್ಥಿಗಳಿಗೆ ಹೊರೆಯಾಗುವುದನ್ನು ಗಮನಿಸಿ, ಇಂತಹ ತೀರ್ಮಾನ ಕೈಗೊಳ್ಳಲಾಗಿದೆ.
ವಿದ್ಯಾರ್ಥಿಗಳ ಮುಂದೆ ಅನೇಕ ಪರೀಕ್ಷೆ
ವಿದ್ಯಾರ್ಥಿಗಳು ಮುಂದೆ ಇನ್ನೂ ಅನೇಕ ಪರೀಕ್ಷೆಗಳನ್ನು ಬರೆಯಬೇಕಿರುವುದರಿಂದ ಸಿಇಟಿಗೇ ಒತ್ತು ನೀಡಲು ಸಾಧ್ಯವಿಲ್ಲ.
ಪರೀಕ್ಷೆ ನಡೆಸಿದರೆ ವೃತ್ತಿಕೋರ್ಸ್‌ಗಳ ಶೈಕ್ಷಣಿಕ ವೇಳಾಪಟ್ಟಿ ವಿಳಂಬವಾಗುತ್ತದೆ, ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಕೆಇಎ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲು ನಿಗದಿತ ಮಾನದಂಡಗಳನ್ನು ರೂಪಿಸಬೇಕು.
ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಪಠ್ಯಕ್ರಮದ ಹೊರತಾದ ಪ್ರಶ್ನೆಗಳನ್ನು ಹೊರತುಪಡಿಸಿ ಮೌಲ್ಯಮಾಪನ ನಡೆಸಲು ತೀಮಾನಿಸಲಾಗಿದೆ ಎಂದರು.