ಬೆಂಗಳೂರು:ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದ ಡಿ.ಕೆ.ಸುರೇಶ್ ನಡುವೆ ಪ್ರಜ್ವಲ್ ರೇವಣ್ಣ ವಿಷಯದಲ್ಲಿ ಟ್ವೀಟ್ ಸಮರ ನಡೆದಿದೆ.
ಪ್ರಜ್ವಲ್ ರೇವಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ಸುರೇಶ್ ಟ್ವೀಟ್ ಮಾಡಿ, ಪ್ರಜ್ವಲ್‌ನಿಂದ ದೌರ್ಜನ್ಯಕ್ಕೊಳಗಾದ ಹೆಣ್ಣು ಮಕ್ಕಳಿಗೆ ಆ ಕುಟುಂಬದಿಂದ ಯಾವುದೇ ಸಮಯಕ್ಕೂ ಆಪತ್ತು ತಪ್ಪಿದ್ದಿಲ್ಲ.
ಮುಖ್ಯಮಂತ್ರಿಗೆ ಒತ್ತಾಯ
ಹೀಗಾಗಿ ಸರ್ಕಾರ ಜವಾಬ್ದಾರಿ ತೆಗೆದುಕೊಂಡು ಎಲ್ಲಾ ಸಂತ್ರಸ್ತೆಯರಿಗೂ ಸೂಕ್ತ ರಕ್ಷಣೆ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸುರೇಶ್ ಒತ್ತಾಯಿಸಿದ್ದಾರೆ.
ಸುರೇಶ್ ಟ್ವೀಟ್‌ಗೆ ಪ್ರತಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ನಿಮ್ಮ ದಬ್ಬಾಳಿಕೆಯಿಂದ ಜೀವ ಬಿಟ್ಟ ಜನರಿಗೆ ಯಾವ ರೀತಿ ಭದ್ರತೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ನೀವು, ನಿಮ್ಮ ಅಣ್ಣ ಸೋಲುವ ಮುನ್ಸೂಚನೆ ಸಿಕ್ಕದ್ದರಿಂದ ಈ ರೀತಿ ನೀಚ ರಾಜಕೀಯ ಮಾಡುತ್ತಿರುವುದು ನಮಗೆ ಮೇಲ್ನೋಟಕ್ಕೆ ಕಾಣಿಸುತ್ತಿದೆ.
ಪೆನ್ ಡ್ರೈವ್
ಈ ಪೆನ್ ಡ್ರೈವ್ ನಿಮ್ಮ ಅಣ್ಣನಿಗೆ ಎರಡು ತಿಂಗಳ ಹಿಂದೆಯೇ ಗೊತ್ತಿದ್ದರೆ ಯಾಕೆ ನೀವೇ ದೂರು ಕೊಡಲಿಲ್ಲ, ನಿಮ್ಮ ಈ ರಾಜಕೀಯ ನಿಜಕ್ಕೂ ಅಸಹ್ಯ ಎಂದಿದ್ದಾರೆ.
ಕುಮಾರಸ್ವಾಮಿ ಮತ್ತು ಸುರೇಶ್ ಟ್ವೀಟ್ ಹೊರಬರುತ್ತಿದ್ದಂತೆ, ಹಲವಷ್ಟು ನಾಗರಿಕರು ಕುಮಾರಸ್ವಾಮಿ ಎತ್ತಿರುವ ಪ್ರಶ್ನೆ ಬೆಂಬಲಿಸಿ ಸಹೋದರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಟ್ವೀಟ್ ಸಮರದ ನಡುವೆಯೇ ಮಾಜಿ ಸಚಿವ ಎಚ್.ಡಿ.ರೇವಣ್ಣ, ಪೆನ್ ಡ್ರೈವ್ ಪ್ರಕರಣದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡು, ಸುದ್ದಿಗಾರರೊಂದಿಗೆ ಮಾತನಾಡಿ, ಇದು ನಮ್ಮ ಕುಟುಂಬದ ವಿರುದ್ಧ ನಡೆದಿರುವ ರಾಜಕೀಯ ಷಡ್ಯಂತ್ರ ಎಂದಿದ್ದಾರೆ.
ಹೆದರಿ ಓಡಿಹೋಗುವುದಿಲ್ಲ
ಇದಕ್ಕೆ ಹೆದರಿ ನಾವು ಓಡಿಹೋಗುವುದಿಲ್ಲ, ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ನೇಮಕ ಮಾಡಿದ್ದಾರೆ.
ನಾವು ಕಾನೂನು ರೀತಿ ಹೋರಾಟ ಮಾಡುತ್ತೇವೆ, ಪ್ರಜ್ವಲ್ ಏನೂ ಓಡಿ ಹೋಗಿಲ್ಲ, ಆತ ಸಂಸದ, ಮೊದಲಿನ ಕಾರ್ಯಕ್ರಮದಂತೆ ವಿದೇಶಕ್ಕೆ ತೆರಳಿದ್ದಾನೆ, ಅವನು ತೆರಳುವಾಗ ಸರ್ಕಾರ ಎಸ್‌ಐಟಿ ಆದೇಶವನ್ನೂ ಮಾಡಿರಲಿಲ್ಲ, ಎಫ್‌ಐಆರ್ ಸಹಾ ಹಾಕಿರಲಿಲ್ಲ.
ತನಿಖೆಗೆ ಕರೆದರೆ ಬರುತ್ತಾನೆ, ಈಗಾಗಲೇ ಪ್ರಕರಣವನ್ನು ತನಿಖಾ ಸಂಸ್ಥೆಗೆ ವಹಿಸಿರುವುದರಿಂದ ನಾನು ಹೆಚ್ಚು ಮಾತನಾಡಲು ಬಯಸುವುದಿಲ್ಲ, ನಾವು ಓಡಿ ಹೋಗುವುದೂ ಇಲ್ಲ, ಇದನ್ನು ಎದುರಿಸುತ್ತೇವೆ ಎಂದರು.