ಬೆಂಗಳೂರು:ಸಂಸದ ಪ್ರಜ್ವಲ್ ರೇವಣ್ಣ ಅವರದೆನ್ನಲಾದ ಪೆನ್ ಡ್ರೈವ್‌ನಲ್ಲಿ ಪೊಲೀಸ್ ಸೇರಿದಂತೆ ವಿವಿಧ ಇಲಾಖೆಯ ಮಹಿಳಾ ಅಧಿಕಾರಿಗಳೂ ಇರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಪ್ರಾಥಮಿಕ ತನಿಖಾ ವರದಿ ಆಧಾರದ ಮೇಲೆ ಈ ಅಂಶ ಬೆಳಕಿಗೆ ಬಂದಿದ್ದು ಇದರ ಸತ್ಯಾಸತ್ಯತೆ ಅರಿಯಲು ಎಸ್‌ಐಟಿ ತನಿಖಾ ಸಂಸ್ಥೆಗೆ ಮಹಿಳೆಯರನ್ನುಒಳಗೊಂಡ 18 ಸಿಬ್ಬಂದಿಯನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ವಿಡಿಯೊ ಪರಿಶೀಲನೆಗೆ ಪ್ರತ್ಯೇಕ ತಂಡ
ಪೆನ್ ಡ್ರೈವ್ ಹಾಗೂ ಇತರ ವಿಡಿಯೊ ತನಿಖೆ ಪರಿಶೀಲನೆಗೆ ತಂಡದಲ್ಲಿ ಪ್ರತ್ಯೇಕ ತಂಡ ರಚಿಸಲಾಗಿದ್ದು, ಇದರಲ್ಲಿ ಬಹುತೇಕ ಮಹಿಳಾ ಅಧಿಕಾರಿಗಳೇ ಇದ್ದಾರೆ.
ಪೆನ್‌ಡ್ರೈವ್‌ನಲ್ಲಿ ದೊರೆತಿರುವ ಮಾಹಿತಿಯಂತೆ ಪಿಎಸ್‌ಐ, ಎಇ ಸೇರಿದಂತೆ ಸರ್ಕಾರಿ ಅಧಿಕಾರಿಗಳೇ ಶೇಕಡ 50ರಷ್ಟು ಇದ್ದಾರೆ ಎಂದು ಹೇಳಲಾಗಿದೆ. ವಿಡಿಯೊದಲ್ಲಿರುವ ಮಹಿಳೆಯರ ತನಿಖೆಗೆ ವಿಶೇಷ ಪ್ರಯತ್ನ ಮಾಡಲಾಗುತ್ತಿದೆ.
ವಿಡಿಯೊದಲ್ಲಿ ಮಹಿಳಾ ಅಧಿಕಾರಿಗಳು ಇರುವ ವಿಚಾರದ ಹಿನ್ನೆಲೆ ಅವಲೋಕಿಸಿದರೆ ಕೆಲಸ ಕೊಡಿಸುವ ಮತ್ತು ವರ್ಗಾವಣೆ ವಿಚಾರಗಳು ಈ ದಂಧೆಯ ಭಾಗವಾಗಿರಬಹುದೇ ಎಂಬ ಸಂಶಯ ಮೂಡುತ್ತಿದೆ.
ತನಿಖೆ ಕಾರ್ಯ ಆರಂಭ
ಈ ಕಾರಣಕ್ಕಾಗಿಯೇ ರಾಜ್ಯದ ವಿವಿಧ ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಣಿತ ಮಹಿಳೆಯರನ್ನೊಳಗೊಂಡ ತಂಡ ರಚಿಸಲಾಗಿದೆ. ವಿಶೇಷ ತನಿಖಾ ತಂಡದಿಂದ ತನಿಖೆ ಚುರುಕಾಗುತ್ತಿದ್ದು, ವಿಡಿಯೋ ಪರಿಶೀಲನೆಗೆ ಪ್ರತ್ಯೇಕ ತಂಡ ಮಾಡಿದ್ದು, ಈಗಾಗಲೇ ತನಿಖೆ ಕಾರ್ಯ ಆರಂಭಿಸಿದೆ.
ಈ ತನಿಖಾ ತಂಡ ಸತ್ಯಾಸತ್ಯತೆಯನ್ನು ಪರಿಶೀಲಿಸಿ ನಂತರ ಎಸ್‌ಐಟಿ ಮುಖ್ಯಸ್ಥರಿಗೆ ವರದಿ ಸಲ್ಲಿಸಲಿದ್ದಾರೆ.