ಬೆಂಗಳೂರು:ಲೈಂಗಿಕ ಹಗರಣದಲ್ಲಿ ಸಿಲುಕಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್‌ನಿಂದ ಅಮಾನತು ಮಾಡಲಾಗಿದೆ.
ಜಾತ್ಯತೀತ ಜನತಾ ದಳದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಹುಬ್ಬಳ್ಳಿಯಲ್ಲಿ ಇಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಪಕ್ಷದ ಗೌರವಕ್ಕೆ ಧಕ್ಕೆ
ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ವಿಡಿಯೊಗಳು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಪಕ್ಷದ ಘನತೆ ಮತ್ತು ಗೌರವಕ್ಕೆ ಹಾಗೂ ಮುಖಂಡತ್ವಕ್ಕೆ ಸಾಕಷ್ಟು ಧಕ್ಕೆ ಉಂಟಾಗಿರುತ್ತದೆ.
ರಾಜ್ಯದಲ್ಲಿ ಪ್ರಸ್ತುತ ಕಾಂಗ್ರೆಸ್ ಸರ್ಕಾರ, ಮಹಿಳೆಯರ ಮೇಲೆ ಎಸಗಿದೆ ಎಂದು ಹೇಳಲಾಗಿರುವ ಚಿತ್ರಗಳು ಮತ್ತು ವಿಡಿಯೊಗಳ ಬಗ್ಗೆ ತನಿಖೆ ನಡೆಸಲು ಒಂದು ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿದೆ.
ತನಿಖಾ ಸಂಸ್ಥೆ ಈಗಾಗಲೇ ತನ್ನ ಕಾರ್ಯವನ್ನು ಆರಂಭಿಸಿರುವುದರಿಂದ ತನಿಖೆಗೆ ಯಾವುದೇ ರೀತಿಯ ಅಡ್ಡಿ ಆತಂಕಗಳು ಎದುರಾಗಬಾರದೆಂಬ ಉದ್ದೇಶದಿಂದ ಇಂತಹ ಕ್ರಮ ಕೈಗೊಂಡಿದ್ದೇವೆ.
ಪಕ್ಷದ ನಿಯಮಗಳಡಿ ಕ್ರಮ
ಪಕ್ಷದ ಸಂವಿಧಾನ ಮತ್ತು ನಿಯಮಗಳ ಅಡಿಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಪ್ರತಿನಿಧಿಯಾದ ಪ್ರಜ್ವಲ್ ರೇವಣ್ಣ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಅನುಮೋದನೆ ಪಡೆದು ಪಕ್ಷ ತಮ್ಮ ಸಂಸದನ ಮೇಲೆ ಕಠಿಣ ಕ್ರಮ ಕೈಗೊಂಡಿದೆ.
ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಮುರು ಆಯ್ಕೆ ಬಯಸಿ ಚುನಾವಣಾ ಕಣದಲ್ಲಿದ್ದಾರೆ.
ಕ್ಷೇತ್ರದಲ್ಲಿ ಅಶ್ಲೀಲ ಪೆನ್ ಡ್ರೈವ್
ಈ ಕ್ಷೇತ್ರಕ್ಕೆ ಏಪ್ರಿಲ್ 26ರಂದು ಮತದಾನ ನಡೆದಿದ್ದು, ಮತದಾನಕ್ಕೂ 48 ಗಂಟೆಗಳ ಮುನ್ನ ಇಡೀ ಕ್ಷೇತ್ರದಲ್ಲಿ ಸಂಸದರ ವಿರುದ್ಧದ ಅಶ್ಲೀಲ ಪೆನ್ ಡ್ರೈವ್ ಬಹಿರಂಗಗೊಂಡಿತ್ತು.
ಪೆನ್ ಡ್ರೈವ್ ಬಗ್ಗೆ ಕ್ಷೇತ್ರದಲ್ಲಷ್ಟೇ ಅಲ್ಲದೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದಂತೆ ಮಹಿಳಾ ಆಯೋಗ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಜ್ವಲ್ ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆದೇಶ ಮಾಡಿ ಪ್ರಕರಣದ ತನಿಖೆಗೆ ಎಸ್‌ಐಟಿ ನೇಮಕ ಮಾಡಿ ಆದೇಶ ಹೊರಡಿಸಿದ್ದರು.