ಬೆಂಗಳೂರು:ಸಂಸದ ಪ್ರಜ್ವಲ್ ರೇವಣ್ಣ ಮೇ 4ರಂದು ನಗರಕ್ಕೆ ಹಿಂತಿರುಗಲಿದ್ದು, ಅಂದೇ ಎಸ್‌ಐಟಿ ಮುಂದೆ ಹಾಜರಾಗಲಿದ್ದಾರೆ.
ಜರ್ಮನಿ ಪ್ರವಾಸ ಕೈಗೊಂಡಿರುವ ಪ್ರಜ್ವಲ್ ಕುಟುಂಬದವರ ಸಲಹೆಯಂತೆ ದೇಶಕ್ಕೆ ಹಿಂತಿರುಗುತ್ತಿದ್ದಾರೆ.
ಪ್ರಜ್ವಲ್ ಹಾಗೂ ಅವರ ತಂದೆ ರೇವಣ್ಣ ವಿರುದ್ಧದ ಪೆನ್ ಡ್ರೈವ್ ಪ್ರಕರಣ ಆರೋಪ ಹಾಗೂ ಅವರ ಮನೆಯ ಕೆಲಸದಾಕೆ ನೀಡಿರುವ ದೂರಿನ ಆಧಾರದ ಮೇಲೆ ಎಸ್‌ಐಟಿ ಈ ಇಬ್ಬರ ಮೇಲೂ ಪ್ರಕರಣ ದಾಖಲಿಸಿಕೊಂಡಿದೆ.
ಪೆನ್ ಡ್ರೈವ್ ಹಾಗೂ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ತನಿಖೆಗಾಗಿ ವಿಶೇಷ ಎಸ್‌ಐಟಿ ರಚನೆ ಮಾಡಿದೆ.
ಕಾನೂನು ತಜ್ಞರ ಮೊರೆ
ಎಸ್‌ಐಟಿ ಪ್ರಕರಣ ದಾಖಲು ಮಾಡುತ್ತಿದ್ದಂತೆ ಕಾನೂನು ತಜ್ಞರ ಮೊರೆ ಹೋಗಿರುವ ರೇವಣ್ಣ ಕುಟುಂಬ, ಅವರ ಸಲಹೆಯಂತೆ ಪ್ರಜ್ವಲ್ ಅವರನ್ನು ವಿದೇಶದಿಂದ ಹಿಂದಕ್ಕೆ ಕರೆಸುತ್ತಿದ್ದಾರೆ.
ಎಸ್‌ಐಟಿ ಅಧಿಕಾರಿಗಳು ಈಗಾಗಲೇ ಹಾಸನಕ್ಕೆ ತೆರಳಿ ಸಂತ್ರಸ್ತೆಯರಿಂದ ಮಾಹಿತಿ ಸಂಗ್ರಹಿಸುತ್ತಿರುವುದಲ್ಲದೆ, ರೇವಣ್ಣ ಮತ್ತು ಪ್ರಜ್ವಲ್ ಅವರನ್ನು ವಿಚಾರಣೆಗೆ ಕರೆಸಲು ಅಣಿಯಾಗುತ್ತಿದ್ದಾರೆ.
ಎಚ್.ಡಿ.ರೇವಣ್ಣ, ಹಾಸನ ಮತ್ತು ಬೆಂಗಳೂರಿನಲ್ಲೇ ಇದ್ದರೂ ಇದುವರೆಗೂ ಎಸ್‌ಐಟಿ ತಂಡ ಅವರನ್ನು ಭೇಟಿಯೂ ಆಗಿಲ್ಲ, ವಿಚಾರಣೆಯನ್ನೂ ಮಾಡಿಲ್ಲ.
ಇವರುಗಳ ವಿಚಾರಣೆಗೂ ಮುನ್ನ ರೇವಣ್ಣ ಅವರ ಕಾರು ಚಾಲಕ ಕಾರ್ತಿಕ್ ಹಾಗೂ ಹಾಸನದ ವಕೀಲ ಮತ್ತು ಬಿಜೆಪಿ ನಾಯಕ ದೇವರಾಜೇಗೌಡ ಅವರಿಂದ ಮಾಹಿತಿ ಸಂಗ್ರಹಿಸಬೇಕಿದೆ.
ದೇವರಾಜೇಗೌಡ ಅವರಿಗೆ ನೋಟೀಸ್
ಕಾರ್ತಿಕ್ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗಾಗಿ ತನಿಖಾ ತಂಡ ಮುಂದಾಗಿದೆ. ಇದರ ಮಧ್ಯೆ ದೇವರಾಜೇಗೌಡ ಅವರಿಗೆ ನೋಟೀಸ್ ನೀಡಿ ವಿಚಾರಣೆಗೆ ಬರುವಂತೆ ತಿಳಿಸಿದ್ದಾರೆ.
ಅವರಿಂದ ಮಾಹಿತಿ ಮತ್ತು ದಾಖಲೆ ಪಡೆದ ನಂತರ ಪ್ರಮುಖ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುತ್ತಾರೆಂದು ಉನ್ನತ ಮೂಲಗಳು ತಿಳಿಸಿವೆ.
ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ
ಪೆನ್ ಡ್ರೈವ್ ಪ್ರಕರಣವನ್ನು ಕಾಂಗ್ರೆಸ್‌ನ ಕೆಲವು ಮುಖಂಡರು ರಾಜಕೀಯವಾಗಿ ಬಳಕೆ ಮಾಡುತ್ತಿದ್ದಾರೆಂದು ಆರೋಪಿಸಿರುವ ರೇವಣ್ಣ, ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರಿ ಓಡಿ ಹೋಗುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟ ಪಡಿಸಿದ್ದಾರೆ.
ಎಸ್‌ಐಟಿ ಅಧಿಕಾರಿಗಳು ವಿಚಾರಣೆಗೆ ಕರೆದರೆ ಹೋಗುವುದಾಗಿಯೂ ತಿಳಿಸಿದ್ದಾರೆ. ಪ್ರಜ್ವಲ್ ರೇವಣ್ಣ ಕೂಡ, ವಿಚಾರಣೆಗೆ ಕರೆದಲ್ಲಿ ಹಾಜರಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧ ಎಸ್‌ಐಟಿ ಪ್ರಕರಣ ದಾಖಲಿಸಿ, ಎಫ್‌ಐಆರ್ ಸಿದ್ಧಪಡಿಸುತ್ತಿದ್ದಂತೆ ರೇವಣ್ಣ ಕುಟುಂಬ ರಾಜ್ಯ ಹೈಕೋರ್ಟ್‌ನ ಹಿರಿಯ ವಕೀಲರ ಸಲಹೆ, ಸೂಚನೆ ಪಡೆದು ಅವರ ಮಾರ್ಗದರ್ಶನದಂತೆ ನಡೆಯಲು ಮುಂದಾಗಿದ್ದಾರೆ.
ಏಕಾಏಕಿ ಬಂಧನ ಸಾಧ್ಯವಿಲ್ಲ
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಏಕಾಏಕಿ ಯಾರನ್ನೂ ಬಂಧಿಸಲು ಮುಂದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆ ಮತ್ತು ಪುರಾವೆ ದೂರು, ದೂರಿನಲ್ಲಿ ಏನು ಹೇಳಿರುತ್ತಾರೆ ಅನ್ನೋದು ಮುಖ್ಯ, ಯಾವ ಸೆಕ್ಷನ್ ಬರುತ್ತೆ, ಅದರಲ್ಲಿ ಅರೆಸ್ಟ್ ಮಾಡಬಹುದಾ, ಬೇಲ್ ಕೇಸಾ, ನಾನ್ ಬೇಲ್ ಕೇಸಾ ಅಂತ ನೋಡಬೇಕು ಎಂದರು.
ಅದ್ದರಿಂದಲೇ ಸಿಆರ್‌ಪಿಸಿ ಸೆಕ್ಷನ್ 41ಎ ಅಡಿ ನೋಟಿಸ್ ಕೊಟ್ಟಿದ್ದು, ನೋಟಿಸ್ ಪಡೆದವರು 24 ಗಂಟೆ ಒಳಗೆ ತನಿಖಾಧಿಕಾರಿಗಳ ಮುಂದೆ ಬಂದು ಹಾಜರಾಗಬೇಕು, ಹಾಗೊಂದು ವೇಳೆ ಹಾಜರಾಗದಿದ್ದಲ್ಲಿ, ವಿಶೇಷ ತನಿಖಾ ತಂಡ ಅಧಿಕಾರಿಗಳು ಮುಂದಿನ ಪ್ರಕ್ರಿಯೆ ಕೈಗೊಳ್ಳುತ್ತಾರೆ ಎಂದರು.
ಸದ್ಯ ಪ್ರಜ್ವಲ್ ತನಿಖೆ ಎಸ್‌ಐಟಿಗೆ ತುಂಬಾ ಮುಖ್ಯವಾಗಿದೆ, ರೇವಣ್ಣ ಪ್ರಮುಖ ಆರೋಪಿ (ಎ1) ಆಗಿದ್ದರೂ, ಪ್ರಕರಣಗಳು ಬೆಳಕಿಗೆ ಬಂದಿದ್ದು ಸಂಶಯಾಸ್ಪದ ವಿಡಿಯೊಗಳಿಂದ, ಹೀಗಾಗಿ ಪ್ರಜ್ವಲ್ ರೇವಣ್ಣ ಅವರ ಹೇಳಿಕೆ ಇಲ್ಲಿ ಅಗತ್ಯವಿದೆ.