ಬೆಂಗಳೂರು:ಅಸಂಖ್ಯಾತ ಮಹಿಳೆಯರ ಮೇಲಿನ ಲೈಂಗಿಕ ಶೋಷಣೆ ಆರೋಪ ಎದುರಿಸುತ್ತಿರುವ ಹಾಸನ ಲೋಕಸಭಾ ಕ್ಷೇತ್ರದ ಪ್ರತಿನಿಧಿ ಪ್ರಜ್ವಲ್ ರೇವಣ್ಣ ಅವರನ್ನು ವಿದೇಶದಿಂದ ಕರೆತರಲು ಸಹಕಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಇಂದು ಪತ್ರ ಬರೆದಿರುವ ಮುಖ್ಯಮಂತ್ರಿ ಅವರು, ವಿದೇಶಾಂಗ ಸಚಿವಾಲಯಕ್ಕೆ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಮಾಹಿತಿ ನೀಡಿ ಅವರನ್ನು ಕರೆತರಲು ತನಿಖಾ ತಂಡಕ್ಕೆ ಸಹಕಾರ ನೀಡಬೇಕು ಎಂದಿದ್ದಾರೆ.
ಅಂದೇ ಎಫ್‌ಐಆರ್
ಶೋಷಣೆ ಪ್ರಕರಣ ಹೊರಬರುತ್ತಿದ್ದಂತೆ ಏಪ್ರಿಲ್ 28ರಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ, ಅಂದೇ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಪ್ರಜ್ವಲ್ ರೇವಣ್ಣ ತಮ್ಮ ಕ್ಷೇತ್ರದ ಮತದಾನ ಮುಗಿಯುತ್ತಿದ್ದಂತೆ, ಏಪ್ರಿಲ್ 27ರಂದು ವಿದೇಶಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಇದೆ.
ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಎಸ್‌ಐಟಿ ಅಗತ್ಯವಿರುವ ಎಲ್ಲ ವಿವರಗಳನ್ನು ಒದಗಿಸುವುದಲ್ಲದೆ, ಕಾನೂನು ರೀತ್ಯ ಆಗಬೇಕಿರುವ ಔಪಚಾರಿಕತೆಗಳನ್ನೂ ಪೂರೈಸಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.