ಬೆಂಗಳೂರು:ಕೇಂದ್ರದ ಸಚಿವರು, ಮಾಜಿ ಮುಖ್ಯಮಂತ್ರಿಗಳು, ಸಚಿವರ ಕುಟುಂಬದ ಸದಸ್ಯರು ಕಣದಲ್ಲಿರುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಾಗೂ ಅಂತಿಮ ಹಂತದ ಮತದಾನ ಮಂಗಳವಾರ (ಮೇ 7) ಜರುಗಲಿದೆ.
ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಮತದಾನಕ್ಕೆ ಕೇಂದ್ರದ ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದ್ದು, ಹಳೆ ಮೈಸೂರು ಭಾಗದಲ್ಲಿ ಬೀಡು ಬಿಟ್ಟಿದ್ದ ಅರೆಸೇನಾ ಪಡೆ ಹಾಗೂ ಹೊರ ರಾಜ್ಯದ ಪೊಲೀಸ್ ಸಿಬ್ಬಂದಿಯನ್ನು ನಾಳೆ ನಡೆಯಲಿರುವ ಲೋಕಸಭಾ ಕ್ಷೇತ್ರಗಳಿಗೆ ಸ್ಥಳಾಂತರಿಸಿದೆ.
ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ಧಾರವಾಡ, ಹಾವೇರಿ, ಬೆಳಗಾವಿ, ಚಿಕ್ಕೋಡಿ, ವಿಜಾಪುರ, ಬಾಗಲಕೋಟೆ, ಗುಲ್ಬರ್ಗ, ಬೀದರ್, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.
ತಾಪಮಾನ ಕ್ಷೇತ್ರಗಳು
ಮಲೆನಾಡು ಮತ್ತು ಕರಾವಳಿ ತೀರದ ಎರಡು-ಮೂರು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳು ಅತಿ ತಾಪಮಾನ ಹೊಂದಿರುವ ಕ್ಷೇತ್ರಗಳಾಗಿವೆ.
ತಾಪಮಾನದ ಭಯ ಆಯೋಗಕ್ಕೂ ಕಾಡಿದೆ, ಮತದಾರರ ಅನುಕೂಲಕ್ಕಾಗಿ ಮತದಾನ ಸಮಯವನ್ನು ಒಂದು ಗಂಟೆ ವಿಸ್ತರಿಸಿ ಅನುಕೂಲ ಮಾಡಿಕೊಂಡಬೇಕೆಂಬ ಚಿಂತನೆಯಲ್ಲಿದೆ, ಆದರೆ ಇನ್ನೂ ನಿರ್ಧಾರವಾಗಿಲ್ಲ.
ಹಳೆ ಮೈಸೂರು ಭಾಗದ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಏಪ್ರಿಲ್ 26ರಂದು ಮತದಾನ ಮುಗಿಯುತ್ತಿದ್ದಂತೆ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಅಭ್ಯರ್ಥಿಗಳ ಗೆಲುವಿಗೆ ಇತ್ತ ಗಮನ ಹರಿಸಿದರು.
ಈ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಮತ್ತು ಆಡಳತಾರೂಢ ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆದಿದೆ.
ಮತದಾರರ ಮನ ಗೆಲ್ಲುವ ಪ್ರಯತ್ನ
ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಅಭಿವೃದ್ಧಿ ಹಾಗೂ ಹಿಂದೂತ್ವ ಮುಂದಿಟ್ಟುಕೊಂಡು ಬಿಜೆಪಿ ಬಿರುಸಿನ ಪ್ರಚಾರ ಮಾಡಿ ಮತದಾರರ ಓಲೈಕೆಗೆ ಮುಂದಾಗಿದ್ದರೆ, ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ತಮ್ಮ ಐದು ಗ್ಯಾರಂಟಿಗಳನ್ನು ಬದಿಗಿಟ್ಟು ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಹಗರಣ ಹಾಗೂ ಪ್ರಧಾನಿ ಅವರನ್ನು ನಿಂದಿಸುವ ಅಸ್ತ್ರವಾಗಿಟ್ಟುಕೊಂಡು ಕಾಂಗ್ರೆಸ್ ಮತದಾರರ ಮನ ಗೆಲ್ಲುವ ಪ್ರಯತ್ನ ಮಾಡಿದೆ.
ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲುವಿನ ದಡ ಮುಟ್ಟಿಸಲು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ವಾದ್ರಾ, ರಾಜ್ಯ ನಾಯಕರ ಜೊತೆಗೂಡಿ ಬಿರಿಸಿನ ಪ್ರಚಾರ ನಡೆಸಿದರು.
ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ, ಭಗವಂತ ಖೂಬಾ ಮರು ಆಯ್ಕೆ ಬಯಸಿ ಧಾರವಾಡ ಹಾಗೂ ಬೀದರ್ ಕ್ಷೇತ್ರಗಳಿಂದ ಕಣಕ್ಕಿಳಿದಿದ್ದಾರೆ.
ಇನ್ನು ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಕಮಲದ ಚಿನ್ಹೆಯಡಿ ಬೆಳಗಾವಿ ಮತ್ತು ಹಾವೇರಿಯಿಂದ ಸ್ಪರ್ಧಿಸಿದ್ದಾರೆ.
ಮಕ್ಕಳ ಅದೃಷ್ಟ ಪರೀಕ್ಷೆ
ಸಿದ್ದರಾಮಯ್ಯ ಸಂಪುಟದಲ್ಲಿರುವ ಎಸ್.ಎಸ್.ಮಲ್ಲಿಕರ್ಜುನ್ ತಮ್ಮ ಪತ್ನಿಯನ್ನು ದಾವಣಗೆರೆಯಿಂದ ಕಣಕ್ಕಿಳಿಸಿದ್ದರೆ, ಸತೀಶ್ ಜಾರಕಿಹೊಳಿ, ಶಿವಾನಂದ ಪಾಟೀಲ್, ಈಶ್ವರ್ ಖಂಡ್ರೆ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಮಕ್ಕಳನ್ನು ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ.
ರಾಜ್ಯ ಮೊದಲ ಹಂತಕ್ಕಿಂತ ಎರಡನೇ ಹಂತದಲ್ಲಿ ಘಟಾನುಘಟಿಗಳು ಕಣದಲ್ಲಿರುವುದರಿಂದ ಹೆಚ್ಚು ಮತದಾನ ಆಗುವ ನಿರೀಕ್ಷೆ ಇದೆ. ಆದರೆ ಸುಡು ಬಿಸಿಲು ಇದಕ್ಕೆ ಹೇಗೆ ಅವಕಾಶ ಮಾಡಿಕೊಡುತ್ತದೆ ಎಂದು ಕಾದು ನೋಡಬೇಕು.
ಘಟಾನುಘಟಿಗಳೂ ಸೇರಿದಂತೆ ಒಟ್ಟು 227 ಮಂದಿ ಕಣದಲ್ಲಿದ್ದು ಇವರ ರಾಜಕೀಯ ಭವಿಷ್ಯವನ್ನು 2,59,17,493 ಮತದಾರರು ನಿರ್ಧರಿಸಲಿದ್ದಾರೆ.