ವಕೀಲ ದೇವರಾಜೇಗೌಡ ನೇರ ಆರೋಪ
ಬೆಂಗಳೂರು: ಹಾಸನ ಪೆನ್‍ಡ್ರೈವ್ ಪ್ರಕರಣದಲ್ಲಿ ನೊಂದ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಹರಿಯಬಿಟ್ಟ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಕಥಾನಾಯಕ ಎಂದು ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸಂಜೆ ತಮ್ಮ ಸಂಗಡಿಗ ವಕೀಲರ ಜತೆಗೂಡಿ ಮಾಧ್ಯಮಗೋಷ್ಠಿ ನಡೆಸಿದ ಅವರು; ವಿಡಿಯೋಗಳನ್ನು ಲೀಕ್ ಮಾಡಿರುವ ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವೇ ಶಾಮೀಲಾಗಿದೆ. ಸ್ವತಃ ಉಪ ಮುಖ್ಯಮಂತ್ರಿಯೇ ನೇರ ಪಾತ್ರ ವಹಿಸಿದ್ದಾರೆ. ಹೀಗಾಗಿ ವಿಶೇಷ ತನಿಖಾದಳ -ಎಸ್‌ಐಟಿ ಯಿಂದ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ. ಆದ್ದರಿಂದ ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ದೇವರಾಜೇಗೌಡ ಒತ್ತಾಯಿಸಿದರು.
ನಾಗಮಂಗಲದ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಅವರನ್ನು ಹತ್ತು ಬಾರಿ ನನ್ನ ಬಳಿಗೆ ಸಂಧಾನಕ್ಕೆ ಕಳಿಸಿ ಮಹಿಳೆಯರ ವಿಡಿಯೋಗಳ ಬಿಡುಗಡೆ ಮಾಡಿ ಜೆಡಿಎಸ್-ಬಿಜೆಪಿ ಮೈತ್ರಿ ಹಾಳುಗೆಡವಲು ಕೈಜೋಡಿಸುವಂತೆ ಕೇಳಿದ್ದರು.
ಸ್ವತಃ ಡಿ.ಕೆ.ಶಿವಕುಮಾರ್ ಅವರೇ ಮೊಬೈಲ್ ಕರೆ ಮಾಡಿ ನನಗೆ ಸರ್ಕಾರದಲ್ಲಿ ಸಂಪುಟ ದರ್ಜೆ ಹುದ್ದೆಯ ಆಮಿಷ ಒಡ್ಡಿದರು ಎಂದು ಆರೋಪ ಮಾಡಿದರು. ಅದಕ್ಕೆ ಪೂರಕವಾದ ಆಡಿಯೋ ಕ್ಲಿಪ್ ಅನ್ನು ಕೂಡ ಅವರು ಮಾಧ್ಯಮಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಟ್ಟ ಹೆಸರು ತರಲು, ಬಿಜೆಪಿ-ಜೆಡಿಎಸ್ ಮೈತ್ರಿ ಮುರಿದು ಹೋಗುವಂತೆ ಮಾಡಲು ಕಾಂಗ್ರೆಸ್ ಪಕ್ಷ ಹಾಗೂ ಡಿ.ಕೆ.ಶಿವಕುಮಾರ್ ಮಹಿಳೆಯ ಮಾನವನ್ನು ದುರ್ಬಳಕೆ ಮಾಡಿಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು, ಎಸ್‌ಐಟಿ ಅಧಿಕಾರಿಗಳ ಮೇಲೆ ಭಾರೀ ಒತ್ತಡವಿದೆ ಎಂದು ಅವರು ದೂರಿದರು.
ರಹಸ್ಯ ಸಭೆ ನಡೆಸಿದ್ದ ಸಿಎಂ, ಡಿಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆಶಿ ಅವರ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳ ಸಭೆಯನ್ನು ಗೌಪ್ಯವಾಗಿ ನಡೆಸಲಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ಯಾರನ್ನು ಆರೋಪಿಗಳನ್ನಾಗಿ ಮಾಡಬೇಕು, ಮಾಡಬಾರದು ಎಂಬ ಬಗ್ಗೆ ಸುದೀರ್ಘವಾಗಿ ಚರ್ಚೆಯಾಗಿದೆ.
ಅವರ ಆಮಿಷಕ್ಕೆ ಬಲಿಯಾಗದ ನನ್ನನ್ನು ವಿಡಿಯೋ ಲೀಕ್ ಪ್ರಕರಣದಲ್ಲಿ ಮೊದಲ ಆರೋಪಿಯನ್ನಾಗಿ ಮಾಡಲು ಎಸ್‌ಐಟಿ ಹುನ್ನಾರ ನಡೆಸಿದೆ ಎಂದು ದೇವರಾಜೇಗೌಡರು ಗಂಭೀರ ಆರೋಪ ಮಾಡಿದರು.
ಡಿ.ಕೆ.ಶಿವಕುಮಾರ್ ಅವರು ನನಗೆ ಹತ್ತು ಹಲವು ಆಮಿಷಗಳನ್ನು ಒಡ್ಡಿದ್ದರು. ಶಿವರಾಮೇಗೌಡರನ್ನು ನನ್ನ ಜತೆ ಮಾತುಕತೆಗೆ ಕಳಿಸಿದ್ದರು. ತಾರಾ ಹೋಟೆಲ್ ಗಳಲ್ಲಿ ನನ್ನ ಹಾಗೂ ಶಿವರಾಮೇಗೌಡರ ಭೇಟಿ ಹತ್ತು ಬಾರಿ ನಡೆದಿದೆ. ಸರ್ಕಾರಕ್ಕೆ ವಿರುದ್ಧವಾದ ಯಾವುದೇ ಹೆಜ್ಜೆ ಇಡಬಾರದು ಎಂದು ನನ್ನ ಮೇಲೆ ಒತ್ತಡ ಹಾಕಿದರು ಎಂದು ಅವರು ತಿಳಿಸಿದರು.
ಇದಕ್ಕೆ ಪೂರಕವಾಗಿ ಶಿವರಾಮೇಗೌಡರು ಡಿಸಿಎಂ ಡಿಕೆಶಿ ಒಡ್ಡಿರುವ ಆಮಿಷವನ್ನು ಉಲ್ಲೇಖಿಸಿ ಮಾತನಾಡಿರುವ ಮೊಬೈಲ್ ಸಂಭಾಷಣೆಯನ್ನು ಇದೇ ವೇಳೆ ಬಿಡುಗಡೆ ಮಾಡಿದರು. ಡಿ.ಕೆ.ಶಿವಕುಮಾರ್ ಅವರೇ ನನ್ನನ್ನು ನೇರವಾಗಿ ಕರೆಸಿಕೊಂಡಿದ್ದರು.
ಎಲ್.ಆರ್.ಶಿವರಾಮೇಗೌಡ ಹಾಗೂ ಡಿ.ಕೆ.ಶಿವಕುಮಾರ್ ಈ ಕೇಸ್ ವಿಚಾರವಾಗಿ ನನ್ನ ಬಳಿ ಪದೇಪದೆ ಚರ್ಚೆ ನಡೆಸಿದರು. ಸಂತ್ರಸ್ಥರು ಬಂದು ದೂರು ಕೊಡುತ್ತಾರಾ? ಅಥವಾ ಅವರಿಗೆ ನ್ಯಾಯ ಕೊಡಿಸೋದು ಹೇಗೆ ಎನ್ನುವ ಬಗ್ಗೆ ಅವರು ಚರ್ಚೆ ನಡೆಸಲಿಲ್ಲ.
ಆದರೆ, ಪೆನ್ ಡ್ರೈವ್ ಲೀಕ್ ಮಾಡುವ ಬಗ್ಗೆ ಬಹಳ ಮುತುವರ್ಜಿಯಿಂದ ಮಾತನಾಡಿದರು. ಈಗ ನೋಡಿದರೆ ನನ್ನನ್ನೇ ಕೇಸ್ ನಲ್ಲಿ ಸಿಲುಕಿಸಲು ನೋಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಡಿಕೆಶಿ ಹೆಸರು ತೆಗೆಯುವಂತೆ ಎಸ್‌ಐಟಿ ಒತ್ತಡ
ಎಸ್ಐಟಿ ಎಸ್‍ಪಿ ಒಬ್ಬರು ಡಿಕೆಶಿ ಹೆಸರು ಡಿಲಿಟ್ ಮಾಡಿ ಎಂದು ಒತ್ತಡ ಹೇರಿದರು. ನಾನು ಒಪ್ಪಲಿಲ್ಲ. ನಿಮಗೆ ತೊಂದರೆ ಆಗುತ್ತದೆ ಎಂದು ಹೆದರಿಸಿದರು. ನಾನು ಕೇರ್ ಮಾಡಲಿಲ್ಲ ಎಂದ ಅವರು; ಎಲ್.ಆರ್.ಶಿವರಾಮೇಗೌಡ ಅವರು, “ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಡ. ಡಿಕೆಶಿ, ಸಿದ್ದರಾಮಯ್ಯರನ್ನು ಸಿಲುಕಿಸಬೇಡ” ಎಂದರು.
ಕಾರು ಚಾಲಕನನ್ನು ನಾವೇ ವಿದೇಶಕ್ಕೆ ಕಳುಹಿಸಿದ್ದೇವೆ ಎಂದು ಶಿವರಾಮೇಗೌಡ ಮಾತಾಡಿರುವ ಮೊಬೈಲ್ ಆಡಿಯೋವನ್ನು ಬಿಡುಗಡೆ ಮಾಡಿದ ದೇವರಾಜೇಗೌಡ ಅವರು, ಶಿವರಾಮೇಗೌಡ ಮಧ್ಯವರ್ತಿಯಾಗಿ 10ಕ್ಕೂ ಹೆಚ್ಚು ಬಾರಿ ಭೇಟಿ ಮಾಡಿದ್ದಾರೆ. ಪೆನ್ ಡ್ರೈವ್ ಹಂಚಿರುವ ವ್ಯಕ್ತಿಗಳನ್ನು ಪತ್ತೆ ಮಾಡಲೇ ಇಲ್ಲ ಇವರು.
ಅವರ ಲೊಕೇಷನ್, ಫೋನ್ ನಂಬರ್ ಕೊಟ್ಟರೂ ಪತ್ತೆ ಮಾಡಲೇ ಇಲ್ಲ. ಹಾಸನದಲ್ಲಿ ದಾಖಲಾಗಿರುವ ಎಫ್ಐಆರ್ ಕೈ ಬಿಟ್ಟರು. ಇದೆಲ್ಲದರ ಸೂತ್ರಧಾರ ರಾಜ್ಯ ಸರ್ಕಾರವೇ ಆಗಿದೆ ಎಂದು ದೇವರಾಜೇಗೌಡ ಗಂಭೀರ ಆರೋಪ ಮಾಡಿದರು.
ವಿಡಿಯೋಗಳನ್ನು ಲೀಕ್ ಮಾಡಿರುವ ಚಾಲಕ ಕಾರ್ತಿಕ್ ವಿರುದ್ಧ ಹಾಸನದಲ್ಲಿ ಎಫ್ ಐಆರ್ ದಾಖಲಾಗಿದೆ. ಆದರೆ, ಆತನನ್ನು ಈವರೆಗೆ ಬಂಧಿಸಿ ಕ್ರಮ ಜರುಗಿಸಲಿಲ್ಲ. ಆತ ಎಲ್ಲಿದ್ದಾನೆ? ಏನಾಗಿದ್ದಾನೆ? ಎನ್ನುವುದಕ್ಕೆ ಸರ್ಕಾರ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ನನ್ನ ಜೀವನದ ಹೋರಾಟ ಇದ್ದದ್ದೇ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ವಿರುದ್ಧ. ನನ್ನ ಹೋರಾಟಕ್ಕೆ ನಿಜವಾದ ನ್ಯಾಯ ಸಿಕ್ಕಿದೆ ಎಂದುಕೊಂಡಿದ್ದೆ. ಇದನ್ನೇ ಕೆಲ ಕಿಡಿಗೇಡಿ ರಾಜಕಾರಣಿಗಳು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್ ಐಟಿ ಮುಖ್ಯಸ್ಥರು ಹಾಗೂ ತನಿಖಾಧಿಕಾರಿಗಳನ್ನು ಎರಡು ಸಲ ಭೇಟಿಯಾಗಿದ್ದೇನೆ. ಸಾಕ್ಷಿಯನ್ನಾಗಿ ನನ್ನ ಹೇಳಿಕೆ ಪಡೆದಿದ್ದಾರೆ. ಆದರೆ, ಕೆಲ ಕಹಿ ಸತ್ಯಗಳನ್ನು ಹೇಳಲೇಬೇಕಿದೆ. ತಡೆಯಾಜ್ಞೆ ಇದ್ದರೂ ಅಶ್ಲೀಲ ವೀಡಿಯೋಗಳಿದ್ದ ಪೆನ್ ಡ್ರೈವ್ ಗಳನ್ನು ಹಂಚಿರುವ ಬಗ್ಗೆ ಹಾಸನದಲ್ಲಿ ಎಫ್ʼಐಆರ್ ಆಗಿದೆ. ಅಶ್ಲೀಲ ವೀಡಿಯೋ ಆಗಿದ್ದರೂ ಹೆಣ್ಣು ಮಕ್ಕಳ ಮುಖವನ್ನು ಮರೆಮಾಚಿಲ್ಲ ಎಂದು ಅವರು ಕಿಡಿಕಾರಿದರು.
ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ನನ್ನ ಕಚೇರಿಗೆ ಬಂದು ನನ್ನ ಕೈಗೆ ಕಾಪಿ ಕೊಟ್ಟಿದ್ದ. ಇದರ ಜತೆಗೆ ಒಂದು ಪೆನ್ ಡ್ರೈವ್ ಸಹಾ ಕೊಟ್ಟಿದ್ದ. ನಾನು ವಿಚಾರಣೆಗೆ ಹೋದಾಗ ಎಸ್‌ಐಟಿ ಅಧಿಕಾರಿಗಳು ನನ್ನ ಹೇಳಿಕೆ ಪಡೆದಿದ್ದಾರೆ. ನನ್ನ ಬಳಿ ಇದ್ದ ದಾಖಲೆಗಳನ್ನು ನೀಡಿದ್ದೇನೆ. ನಾನು ಹೇಳಿಕೆಯಲ್ಲಿ ಬಹಳ ಪ್ರಮುಖ ಅಂಶಗಳನ್ನೇ ಉಲ್ಲೇಖ ಮಾಡಿದ್ದೇನೆ ಎಂದು ಅವರು ಮಾಹಿತಿ ನೀಡಿದರು.
ಪುಟ್ಟರಾಜು ಅಲಿಯಾಸ್ ಪುಟ್ಟಿ ಎನ್ನುವವರ ಮೂಲಕ ಪೆನ್ʼಡ್ರೈವ್ ಬೆಂಗಳೂರಿಗೆ ತಲುಪಿತು. ಮುಖ್ಯಮಂತ್ರಿಗಳು ರಹಸ್ಯ ಸ್ಥಳವೊಂದರಲ್ಲಿ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ ಎಂದು ಆರೋಪ ಮಾಡಿದ ದೇವರಾಜೇಗೌಡರು, ಇಡೀ ಪ್ರಸಂಗದ ಕಥಾನಾಯಕರೇ ಡಿಸಿಎಂ ಡಿಕೆಶಿ ಮತ್ತು ಸಿಎಂ ಸಿದ್ದರಾಮಯ್ಯ ಹಾಗೂ ಮತ್ತೋರ್ವ ಮಧ್ಯವರ್ತಿ (ಎಲ್.ಆರ್.ಶಿವರಾಮೇಗೌಡರು).
ಆದರೆ, ನೊಂದ ಮಹಿಳೆಯರಿಗೆ ನ್ಯಾಯ ಕೊಡಸುವುದು ಬಿಟ್ಟು ರಾಜಕೀಯ ಸ್ವಾರ್ಥಕ್ಕಾಗಿ ಇವರು ಷಡ್ಯಂತ್ರ ನಡೆಸಿದ್ದಾರೆ. ಅಲ್ಲದೆ, ಈ ಪ್ರಕರಣದವನ್ನು ಬಿಜೆಪಿಗೆ ಮೆತ್ತಲು ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಬೇಸತ್ತು ನಾನು ಮಾಧ್ಯಮಗಳ ಮುಂದೆ ಸತ್ಯ ಹೇಳಿದ್ದೇನೆ ಎಂದು ಅವರು ತಿಳಿಸಿದರು.
ಕರೆ ಮಾಡಿ ಆಮಿಷ ಒಡ್ಡಿದ್ದ ಡಿಕೆಶಿ
ಭಾನುವಾರ ಸಂಜೆವರೆಗೂ ನನ್ನ ಜತೆ ಡಿ.ಕೆ.ಶಿವಕುಮಾರ್, ಎಲ್.ಆರ್.ಶಿವರಾಮೇಗೌಡರು ಸಂಧಾನ ನಡೆಸಿದರು. ನಾನು ಒಪ್ಪದೇ ಹೋದಾಗ ಆ ದಿನವೇ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಮೂರು ದಿನಗಳ ಹಿಂದೆ ರಾತ್ರಿ 12.48 ಗಂಟೆ ವೇಳೆಗೆ ಡಿ.ಕೆ.ಶಿವಕುಮಾರ್ ಅವರೇ ಫೋನ್ ಕರೆ ಮಾಡಿದರು. ಜೆಡಿಎಸ್-ಬಿಜೆಪಿ ಜತೆ ಕೈ ಜೋಡಿಸಿರುವುದರಿಂದ ಮೋದಿ ಅವರನ್ನು ಟಾರ್ಗೆಟ್ ಮಾಡಿ ಇಷ್ಟೆಲ್ಲ ಮಾಡಬೇಕಾಯಿತು.
ಅದಕ್ಕೆ ನನ್ನ ಜೊತೆಯಲ್ಲಿ ಬರುವಂತೆ ಕರೆದರು. ಮೇ 29ನೇ ತಾರೀಖು ರಾತ್ರಿ ಡಿ.ಕೆ.ಶಿವಕುಮಾರ್ ಅವರು ನನ್ನ ಬಳಿ ಮಾತನಾಡಿದ್ದಾರೆ. ಇವತ್ತು ನನ್ನ ಬಳಿ ಇರುವ ಪೆನ್ ಡ್ರೈವ್ ನಲ್ಲಿ ಇದ್ಯಾವ ವಿಡಿಯೋ ಇಲ್ಲ. ಈಗ ನೋಡಿದರೆ ಬೇರೆ ವಿಡಿಯೋಗಳು ಬರುತ್ತಿವೆ. ಕಾರು ಚಾಲಕ ಬಹಳ ಟೆಕ್ನಾಲಜಿ ಇಟ್ಟುಕೊಂಡಿದ್ದಾನೆ ಎಂದರು ದೇವರಾಜೇಗೌಡ.
ಪ್ರಜ್ವಲ್ ರೇವಣ್ಣ ವಿಡಿಯೋದಲ್ಲಿ ಮಿಕ್ಸಿಂಗ್ ಆಗಿದೆ. ಅದಕ್ಕೆ ನನ್ನಲ್ಲಿರುವ ದಾಖಲೆಗಳನ್ನು ಸಿಬಿಐಗೆ ಕೊಡುತ್ತಿದ್ದೇನೆ. 2 ಗಂಟೆ 31 ನಿಮಿಷ ನನ್ನ ಜತೆ ಮಾತನಾಡಿರುವ ಆಡಿಯೋ ನನ್ನ ಬಳಿಯೇ ಇದೆ. ಇದನ್ನು ಈಗಲೇ ಬಿಡುಗಡೆ ಮಾಡಿದರೆ ಆಡಿಯೋ ಎಲ್ಲವೂ ತಿರುಚುತ್ತಾರೆ. ಹೀಗಾಗಿ ನಾನು ಬಿಡುಗಡೆ ಮಾಡಲ್ಲ. ಸಿಬಿಐ ತನಿಖೆಗೆ ಎಲ್ಲ ದಾಖಲೆ ಕೊಡುತ್ತೇನೆ. ನಮ್ಮ ಸಂಸ್ಕೃತಿ, ಹೆಣ್ಣು ಮಕ್ಕಳ ಮಾನ ಹರಾಜು ಹಾಕೋದಲ್ಲ, ಮೈತ್ರಿ ಮಾಡಿಕೊಂಡಿರುವ ಬಿಜೆಪಿಯನ್ನು ಹಣಿಯಲು ಈ ರೀತಿ ಮಾಡಿದ್ದಾರೆ ಎಂದು ಅವರು ದೂರಿದರು.
ಮುಖ್ಯಮಂತ್ರಿಗಳೇ ಈ ಪ್ರಕರಣವನ್ನು ಸಿಬಿಐಗೆ ಕೊಡಿ. ಇಲ್ಲವಾದಲ್ಲಿ ನಾವೇ ವಕೀಲರು ಹೋರಾಟ ಮಾಡಿ ಸಿಬಿಐಗೆ ಕೊಡಿಸುತ್ತೇವೆ ಎಂದು ದೇವಾರಾಜೇಗೌಡ ಸವಾಲು ಹಾಕಿದರು.
ವಕೀಲ ವಿವೇಕ್ ಸುಬ್ಬಾರೆಡ್ಡಿ ಸೇರಿದಂತೆ ಕೆಲವು ವಕೀಲರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.