ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಸಿಡಿಗಳು ಆಚೆ ಬಂದರೂ ಅಚ್ಚರಿ ಪಡುವಂತಹುದ್ದು ಏನೂ ಇಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಇದಕ್ಕೂ ಮುನ್ನವೇ ಸಿಡಿಯ ಪ್ರಮುಖ ಪಾತ್ರದಾರಿ ಮಹಾನ್ ನಾಯಕನ ತಡೆಯಿರಿ ಎಂದು ಮುಖ್ಯಮಂತ್ರಿ ಅವರಿಗೆ ಕಿವಿಮಾತು ಹೇಳಿದ್ದಾರೆ.
ಯಾರೂ ಇದನ್ನು ನಂಬಲಿಲ್ಲ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಸಿಡಿ ಹೊರಬಂದ ದಿನವೇ ಇದರ ಹಿಂದಿನ ರೂವಾರಿ ಮಹಾನ್ ನಾಯಕ ಎಂದು ಹೇಳಿದ್ದೆ, ಆದರೆ ಯಾರೂ ಇದನ್ನು ನಂಬಲಿಲ್ಲ ಎಂದರು.
ನನ್ನ ಖಾಸಗಿ ವಿಡಿಯೊಗಳು ಹೊರಬಂದಾಗಲೇ ಎಚ್ಚರಿಕೆ ಕೊಟ್ಟಿದ್ದೆ, ಮಹಾನ್ ನಾಯಕನೊಬ್ಬ ಪ್ರತಿಷ್ಠಿತ ಕುಟುಂಬಕ್ಕೆ ಖೆಡ್ಡ ತೋಡುತ್ತಿದ್ದಾನೆ ಎಂದಾಗಲೂ ಯಾರೂ ಬೆಲೆ ಕೊಡಲಿಲ್ಲ, ಈಗ ಏನಾಗಿದೆ.
ರಾಜಕಾರಣದಲ್ಲಿ ಈಗ ಸೈದ್ಧಾಂತಿಕ ಹೋರಾಟ ಮುಗಿದುಹೋಗಿದೆ, ಒಬ್ಬರನ್ನು ಕಂಡರೆ ಮತ್ತೊಬ್ಬರು ತುಳಿಯುವುದು ಜಾಸ್ತಿಯಾಗಿದೆ.
ಪಕ್ಷಾತೀತವಾಗಿ ಇಲ್ಲಿಗೇ ಮುಗಿಸಬೇಕು
ಸಿಡಿ, ಪೆನ್‌ಡ್ರೈವ್ ಪ್ರಕರಣಗಳು ಯಾವುದೂ ಒಳ್ಳೆಯದಲ್ಲ, ಇದನ್ನು ಪಕ್ಷಾತೀತವಾಗಿ ಇಲ್ಲಿಗೇ ಮುಗಿಸಬೇಕು, ಇಲ್ಲದಿದ್ದರೆ ಮುಂದೊಂದು ದಿನ ಸಿದ್ದರಾಮಯ್ಯ, ಪರಮೇಶ್ವರ್ ಸಿಡಿಗಳು ಆಚೆ ಬಂದರೂ ಅಚ್ಚರಿ ಪಡಬೇಕಿಲ್ಲ ಎಂದರು.
ನನ್ನ ವಿಚಾರದಲ್ಲಿ ಇಂದಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇರ ಪಾತ್ರವಿದೆ, ಪ್ರಜ್ವಲ್ ವಿಚಾರದಲ್ಲಿ ಪರೋಕ್ಷ ಆರೋಪಿ ಎನ್ನುತ್ತಿದ್ದಾರೆ.
ನನ್ನ ಖಾಸಗಿ ಸಿಡಿ ಪ್ರಕರಣವನ್ನೂ ಸಿಬಿಐಗೆ ಕೊಟ್ಟರೆ, ಎಲ್ಲಾ ದಾಖಲೆಗಳನ್ನೂ ನೀಡುತ್ತೇನೆ, ಅದರಲ್ಲಿ ಶಿವಕುಮಾರ್ ಅಷ್ಟೇ ಅಲ್ಲ, ನಮ್ಮವರೂ ಕೆಲವರಿದ್ದಾರೆ ಎಂದರು.