ಪ್ರಕರಣದ ರೂವಾರಿ ಶಿವಕುಮಾರ್ ವಜಾಕ್ಕೆ ಒತ್ತಾಯ
ಬೆಂಗಳೂರು:ಸಂಸದ ಪ್ರಜ್ವಲ್ ರೇವಣ್ಣ ಸಿಡಿ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಿತೂರಿ ನಡೆಸಿರುವುದು ಸ್ಪಷ್ಟವಾಗಿದ್ದು, ಪಾರದರ್ಶಕ ತನಿಖೆಗೆ ಪ್ರಕರಣವನ್ನು ಸಿಬಿಐಗೆ ವಹಿಸಿ ಇಲ್ಲವೇ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಿ ಎಂದು ಆಗ್ರಹಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತನಿಖೆ ಪೂರ್ಣಗೊಳ್ಳುವವರೆಗೂ ಅವರನ್ನು ಸಂಪುಟದಿಂದ ವಜಾ ಮಾಡಿ ಎಂದು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಡಿಯೊ ಮತ್ತು ಪೆನ್‌ಡ್ರೈವ್ ಅನ್ನು ಆಧುನಿಕ ತಂತ್ರಜ್ಞಾನ ಬಳಸಿ ತಿರುಚಿ, ಸೃಷ್ಠಿ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಹೆಣ್ಣು ಮಕ್ಕಳ ಮಾನ ತೆಗೆದಿರುವ ಈ ಮನುಷ್ಯನನ್ನು ಸಂಪುಟದಲ್ಲಿ ಇಟ್ಟುಕೊಳ್ಳಬೇಡಿ ಎಂದು ಆಗ್ರಹಿಸಿದರು.
ಅಧಿಕಾರಿಗಳು ಸರ್ಕಾರದ ಕೈಗೊಂಬೆ
ಎಸ್‌ಐಟಿ ಪ್ರಕರಣವನ್ನು ನಿಷ್ಪಕ್ಷ ಮತ್ತು ಪಾರದರ್ಶಕವಾಗಿ ಮಾಡುತ್ತಿಲ್ಲ, ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ, ಇಂತಹವರಿಂದ ನ್ಯಾಯ ದೊರೆಯುವುದಿಲ್ಲ.
ಸಿಡಿ ಪ್ರಕರಣವನ್ನು ನಿಷ್ಪಕ್ಷವಾಗಿ ತನಿಖೆ ನಡೆಸಿ, ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ಹಗರಣವನ್ನು ಸಿಬಿಐ ಇಲ್ಲವೇ ನ್ಯಾಯಮೂರ್ತಿ ಅವರಿಂದ ತನಿಖೆ ನಡೆಸಿ ಎಂದು ಆಗ್ರಹಿಸಿದರು.
ಅನ್ಯಾಯವಾಗಿರುವ ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಬೇಕಾದರೆ ಸಿಬಿಐ ತನಿಖೆಗೆ ವಹಿಸಬೇಕು, ಈ ಪ್ರಕರಣವನ್ನು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಪ್ರಭಾವ ಬೆಳೆಸಿ ತಮಗೆ ಬೇಕಾದಂತೆ ತಿರುಚಲಾಗುತ್ತಿದೆ.
ಸಿಡಿ ಪ್ರಚಾರಕ್ಕೆ ಬಳಕೆ
ಇವರಿಗೆ ಬೇಕಾಗಿರುವುದು ಪ್ರಚಾರವೇ ಹೊರತು ಪಾರದರ್ಶಕ ತನಿಖೆ ಅಲ್ಲ, ಇದೇ ಉದ್ದೇಶದಿಂದ ಮೊದಲನೇ ಹಂತದ ಮತದಾನದ ಸಮೀಪದಿಂದ ಹಿಡಿದು ಇಲ್ಲಿಯವರೆಗೂ ಸಿಡಿಯನ್ನು ಪ್ರಚಾರಕ್ಕೆ ಬಳಸಿಕೊಂಡಿದ್ದಾರಷ್ಟೆ.
ಸಂತ್ರಸ್ತೆಯರಿಗೆ ನ್ಯಾಯ ಕೊಡಿಸಬೇಕು ಎನ್ನುವುದಿದ್ದರೆ ಸಿಡಿಯಲ್ಲಿನ ಚಿತ್ರಗಳನ್ನು ಪೆನ್‌ಡ್ರೈವ್ ಮೂಲಕ ಹಂಚುವ ಕೆಲಸ ಮಾಡಿ ಹೆಣ್ಣು ಮಕ್ಕಳ ಮಾನ ತೆಗೆಯುತ್ತಿರಲಿಲ್ಲ ಎಂದರು.
ಹಾಸನದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಚುನಾವಣಾ ಏಜೆಂಟ್ ಪೂರ್ಣಚಂದ್ರ ತೇಜಸ್ವಿ ಅವರು ನೀಡಿದ ದೂರಿನ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ.
ಕಾನೂನು ಕ್ರಮ ಜರುಗಿಸಿಲ್ಲ
ಏಪ್ರಿಲ್ 21ರ ರಾತ್ರಿ ’ಅಶ್ಲೀಲ ವಿಡಿಯೊ ಬಿಡುಗಡೆ ಕ್ಷಣಗಣನೆ’ ಎಂದು ಪೋಸ್ಟರ್ ಹಾಕಿದ್ದ ವ್ಯಕ್ತಿಯ ಮೇಲೂ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ.
ಪೆನ್‌ಡ್ರೈವ್ ಹಂಚಿಕೆ ಮಾಡಿರುವವರು ಯಾರು ಎಂದು ಇದುವರೆಗೂ ಪತ್ತೆ ಹಚ್ಚಿಲ್ಲ, ಕೇವಲ ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಮಾತ್ರ ಎಸ್‌ಐಟಿ ತನಿಖೆ ಮಾಡುತ್ತಿದೆ, ಇವರಿಬ್ಬರ ಬಗ್ಗೆ ಲುಕ್‌ಔಟ್ ನೋಟಿಸ್ ಹೊರಡಿಸಿದೆ.
ಆದರೆ, 25 ಸಾವಿರ ಪೆನ್‌ಡ್ರೈವ್ ಹಂಚಿಕೆ ಮಾಡಿರುವವರ ಬಗ್ಗೆ ಎಸ್‌ಐಟಿ ಲುಕ್‌ಔಟ್ ನೋಟಿಸ್ ಏಕೆ ಹೊರಡಿಸಿಲ್ಲ.
ಪೆನ್‌ಡ್ರೈವ್ ಹಿಂದೆ ಯಾರ‍್ಯಾರಿದ್ದಾರೆ, ಇದರಲ್ಲಿ ಯಾರು ಪ್ರಮುಖ ಪಾತ್ರರು ಎಂಬ ಸತ್ಯಾಂಶ ದೇಶದ ಜನಕ್ಕೆ ತಿಳಿಯಬೇಕು.
ಪತ್ತೆ ಹಚ್ಚಬೇಕು
ಅಶ್ಲೀಲ ವಿಡಿಯೊ ಚಿತ್ರೀಕರಿಸಿದ ಹಾಗೂ ಅದನ್ನು ಬಹಿರಂಗಗೊಳಿಸಿದವರನ್ನು ಪತ್ತೆ ಹಚ್ಚಬೇಕು, ಇದರಲ್ಲಿ ಇರುವ ಪ್ರಭಾವೀ ರಾಜಕಾರಣಿಗಳನ್ನು ಬೀದಿಗೆ ತರಬೇಕು.
ಮುಖ್ಯಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪ್ರಜ್ವಲ್ ರೇವಣ್ಣ ಅವರದು ಎನ್ನಲಾದ ಅಶ್ಲೀಲ ವಿಡಿಯೊ ಪ್ರಕರಣವನ್ನು ಎಸ್‌ಐಟಿಗೆ ವಹಿಸುವುದಾಗಿ ತಿಳಿಸಿದ್ದರು.
ಸಿದ್ದರಾಮಯ್ಯ ಅವರ ಈ ರೀತಿಯ ಪ್ರಕಟಣೆ ಹಿಂದೆಯೂ ದೊಡ್ಡ ಸಂಚಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ಹಾಸನದ ಪೆನ್‌ಡ್ರೈವ್ ಕುರಿತಂತೆ ನಡೆದಿದೆ ಎನ್ನಲಾದ ಸಂಭಾಷಣೆಯೊಂದನ್ನು ಪತ್ರಿಕಾಗೋಷ್ಠಿಯಲ್ಲಿ ಕೇಳಿಸಿದರು.
ಅದರಲ್ಲಿ 700 ಪೆನ್‌ಡ್ರೈವ್‌ಗಳು ಅನಗೋಳದಲ್ಲಿ ಹಂಚಿಕೆ ಮಾಡಿರುವುದಾಗಿ ಸಂಭಾಷಣೆಯಲ್ಲಿ ವ್ಯಕ್ತವಾಗಿದೆ.
ನ್ಯಾಯಾಧೀಶರ ಮುಂದೆ ಮಹಿಳೆ ಹಾಜರುಪಡಿಸಿಲ್ಲ
ಅಪಹರಣವಾಗಿದ್ದಾರೆ ಎನ್ನಲಾದ ಮಹಿಳೆ ಪತ್ತೆಯಾಗಿ ಎರಡು ದಿನವಾದರೂ ಇನ್ನೂ ನ್ಯಾಯಾಧೀಶರ ಮುಂದೆ ಹಾಜರುಪಡಿಸಿಲ್ಲ.
ಪೆನ್‌ಡ್ರೈವ್ ಸೋರಿಕೆ ಮಾಡಿದವರಿಗೆ ಯಾವ ನೋಟಿಸ್ ಕೊಟ್ಟಿದ್ದೀರಿ ಎಂದು ಗೃಹ ಸಚಿವ ಡಾ.ಪರಮೇಶ್ವರ್ ಅವರನ್ನು ಪ್ರಶ್ನಿಸಿದರು.
ಈ ಪ್ರಕರಣ ಲೋಕಸಭಾ ಚುನಾವಣೆ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ, ಆದರೆ ದುಷ್ಟ ರಾಜಕಾರಣಿಗಳನ್ನು ಮಟ್ಟ ಹಾಕಲು ಇಲ್ಲೇ ಉಳಿಯಬೇಕೆ ಇಲ್ಲವೇ ಲೋಕಸಭೆಗೆ ಹೋಗಬೇಕೇ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.
ಲೋಕಸಭಾ ಚುನಾವಣೆ ಫಲಿತಾಂಶ ಕಾಂಗ್ರೆಸ್‌ನವರಿಗೆ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ತಳಮಳ ಶುರುವಾಗಿದೆ ಎಂದು ವ್ಯಂಗ್ಯವಾಡಿದರು.