ಬೆಂಗಳೂರು:ಮಾರ್ಚ್-ಏಪ್ರಿಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಭಾರೀ ಕುಸಿತ ಕಂಡಿದ್ದು, ಒಟ್ಟಾರೆ ಶೇಕಡ 73.40 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಶೇಕಡ 10 ರಷ್ಟು ಫಲಿತಾಂಶ ಕುಸಿದಿದೆ.
ಇದೇ ಮೊದಲ ಬಾರಿಗೆ ವೆಬ್‌ಕಾಸ್ಟಿಂಗ್ ವಿಧಾನ ಪರಿಚಯಿಸಿದ್ದರಿಂದ ಒಟ್ಟಾರೆ ಫಲಿತಾಂಶದಲ್ಲಿ ಶೇಕಡ 30ರಷ್ಟು ಕುಸಿತ ಕಂಡಿತ್ತು.
ಅರ್ಹ ಅಂಕ ಶೇಕಡ 35ರಿಂದ 25ಕ್ಕೆ ಇಳಿಕೆ
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಡಿಮೆಯಾಗಿರುವ ಫಲಿತಾಂಶವನ್ನು ಉತ್ತಮ ಪಡಿಸಲು ಸರ್ಕಾರ ನಿರ್ಧರಿಸಿ ಎಲ್ಲಾ ವಿಷಯಗಳಲ್ಲಿ ನೀಡುವ ಕೃಪಾಂಕಗಳನ್ನು ಆಕರ್ಷಿಸಲು ಪಡೆಯಬೇಕಾದ ಅರ್ಹ ಅಂಕಗಳನ್ನು ಶೇಕಡ 35ರಿಂದ 25ಕ್ಕೆ ಇಳಿಸಲಾಯಿತು.
ಕೃಪಾಂಕದ ಪ್ರಮಾಣವನ್ನು ಶೇಕಡ 10ರಿಂದ 20ಕ್ಕೆ ಹೆಚ್ಚಿಸಿದ್ದರಿಂದ ಒಟ್ಟಾರೆ ಶೇಕಡ 73.40 ವಿದ್ಯಾರ್ಥಿಗಳು ತೇರ್ಗಡೆಗೊಂಡರೆಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದಿಲ್ಲಿ ಪ್ರಕಟಿಸಿದೆ.
ಬಾಲಕರಿಗಿಂತ ಬಾಲಕಿಯರು ಶೇಕಡ 15ರಷ್ಟು ಹೆಚ್ಚು ತೇರ್ಗಡೆ ಹೊಂದಿದ್ದಾರೆ. ಒಟ್ಟಾರೆ 8,59,967 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 6,31,204 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಬಾಲಕಿಯರು ಶೇಕಡ 81.11ರಷ್ಟು, ಬಾಲಕರು ಶೇಕಡ 65.90 ರಷ್ಟು ವಿದ್ಯಾರ್ಥಿಗಳು ಮುಂದಿನ ವ್ಯಾಸಂಗಕ್ಕೆ ಅನುವು ಮಾಡಿಕೊಂಡಿದ್ದಾರೆ.
ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ
ನಗರ ಪ್ರದೇಶಗಳಿಗಿಂತ ಗ್ರಾಮೀಣ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿರುವುದಲ್ಲದೆ, ಹೆಚ್ಚು ಪ್ರಥಮ ಸ್ಥಾನಗಳನ್ನು ಪಡೆಯುವಲ್ಲಿ ಮುಂದಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿ ಅಂಕಿತ ಬಸಪ್ಪ ಕನ್ನೂರ 625ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ನಂತರ 625ಕ್ಕೆ 624 ಅಂಕಗಳೊಂದಿಗೆ ಏಳು ವಿದ್ಯಾರ್ಥಿಗಳು ಎರಡನೇ ಸ್ಥಾನ ಪಡೆದಿದ್ದಾರೆ. 14 ವಿದ್ಯಾರ್ಥಿಗಳು 623 ಅಂಕ ಪಡೆಯುವ ಮೂಲಕ 3ನೇ ಸ್ಥಾನದಲ್ಲೂ, 21 ಮಂದಿ 622 ಅಂಕ ಪಡೆದು 4ನೇ ಸ್ಥಾನದಲ್ಲೂ, 44 ವಿದ್ಯಾರ್ಥಿಗಳು 621 ಅಂಕ ಪಡೆದು ೫ನೇ ಸ್ಥಾನದಲ್ಲಿದ್ದರೆ, 64 ಮಂದಿ 620 ಅಂಕ ಪಡೆದು 6ನೇ ಸ್ಥಾನ ಗಳಿಸಿದ್ದಾರೆ.
ಉಡುಪಿ ಮೊದಲ ಸ್ಥಾನ
ಉಡುಪಿ ಶೇಕಡ 94ರಷ್ಟು ಪಡೆದು ಮೊದಲ ಸ್ಥಾನದಲ್ಲೂ, ದಕ್ಷಿಣ ಕನ್ನಡ ಶೇಕಡ 92.12 ಪಡೆದು ದ್ವೀತೀಯ ಸ್ಥಾನ, ಶಿವಮೊಗ್ಗ ಶೇಕಡ 88.67 ರಷ್ಟು ಪಡೆದು ಮೂರನೇ ಸ್ಥಾನ ಹೊಂದಿದ್ದು, ಯಾದಗಿರಿ ಶೇಕಡ 50.59 ರಷ್ಟು ತೇರ್ಗಡೆ ಪ್ರಮಾಣದೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಕೊಡಗು 88.62%, ಹಾಸನ 86.28%, ಮೈಸೂರು 85.5%, ಮಂಡ್ಯ 73.59%, ದಾವಣಗೆರೆ 72.48%, ಚಾಮರಾಜನಗರ 71.59% ಫಲಿತಾಂಶ ಪಡೆದುಕೊಂಡಿವೆ.
ಅನುತ್ತೀರ್ಣರಾದ ವಿದ್ಯಾರ್ಥಿಗಳು ತೇರ್ಗಡೆ ಹೊಂದಲು ಎರಡು ಬಾರಿ ಪರೀಕ್ಷೆ ಬರೆಯಲು ಮಂಡಳಿ ಅವಕಾಶ ಮಾಡಿಕೊಟ್ಟಿದೆ.
ಮೇ ಮೂರನೇ ವಾರದಲ್ಲಿ ಎರಡನೇ ಪರೀಕ್ಷೆ
ಇದೇ ಮೊದಲ ಬಾರಿ ಸರ್ಕಾರ ಮೂರು ಪರೀಕ್ಷೆಗಳನ್ನು ಪರಿಚಯಿಸಿದ್ದು, ಮೇ ಮೂರನೇ ವಾರದಲ್ಲಿ ಎರಡನೇ ಪರೀಕ್ಷೆ ಆರಂಭವಾಗಲಿದೆ.
ಉತ್ತೀರ್ಣರಾದ ವಿದ್ಯಾರ್ಥಿಗಳು ಸಹಾ ಉಳಿದ ಎರಡು ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು, ಯಾವ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುತ್ತಾರೋ ಆ ಅಂಕ ಪಟ್ಟಿಯನ್ನು ಪಡೆಯಬಹುದಾಗಿದೆ.