ಬೆಂಗಳೂರು:ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಜಾತ್ಯತೀತ ಜನತಾ ದಳ ಇಂದಿಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದೆ.
ಲೈಂಗಿಕ ದೌರ್ಜನ್ಯ ದೃಶ್ಯಗಳನ್ನು ಪೆನ್‌ಡ್ರೈವ್ ಮೂಲಕ ಹಂಚಿ ಸಂತ್ರಸ್ತೆಯರ ಬದುಕು ಹಾಳುಗೆಡಹುವಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೈವಾಡ ಮೇಲ್ನೋಟಕ್ಕೆ ಕಂಡುಬಂದಿದೆ.
ಸಂಪುಟದಿಂದ ಶಿವಕುಮಾರ್ ಕೈಬಿಡಿ
ತನಿಖೆ ಮುಗಿಯುವವರೆಗೂ ಅವರನ್ನು ಸಂಪುಟದಿಂದ ಕೈಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದೆ.
ರಾಜಭವನಕ್ಕೆ ತೆರಳುವ ಮುನ್ನ ಮಾಜಿ ಸಚಿವ ಜಿ.ಟಿ. ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣ ಹಾಗೂ ಎಸ್‌ಐಟಿ ಏಕಪಕ್ಷೀಯವಾಗಿ ವರ್ತಿಸುತ್ತಿರುವ ಬಗ್ಗೆ ಚರ್ಚಿಸಿ, ನ್ಯಾಯಕ್ಕಾಗಿ ರಾಜ್ಯಪಾಲರ ಮೊರೆ ಹೋಗುವ ತೀರ್ಮಾನವನ್ನು ಸಭೆ ಕೈಗೊಂಡಿತು.
ಅದರಂತೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ಮುಖಂಡರು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಜೆಡಿಎಸ್‌ಗೆ ಕುಂದು ತರುವ ಪಿತೂರಿ
ದೇವರಾಜೇಗೌಡ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಸಂಭಾಷಣೆಯಿಂದ ಈ ಪ್ರಕರಣದಲ್ಲಿ ದೇವೇಗೌಡ, ಕುಮಾರಸ್ವಾಮಿ ಮತ್ತು ಜೆಡಿಎಸ್‌ನ ಗೌರವ ಮತ್ತು ಘನತೆಗೆ ಕುಂದು ತರುವ ಪಿತೂರಿ ಕಾಣುತ್ತಿದೆ.
ಪ್ರಕರಣ ತನಿಖೆ ನಡೆಸುತ್ತಿರುವ ಎಸ್‌ಐಟಿ ಏಕಪಕ್ಷೀಯವಾಗಿ ಕಾರ್ಯನಿರ್ವಹಿಸುತ್ತಿದೆ, ಕಾನೂನುರೀತ್ಯ ತನಿಖೆ ಕೈಗೊಳ್ಳದೆ, ದುರುದ್ದೇಶ ಪೂರಿತ, ಪಾರದರ್ಶಕವಲ್ಲದ ತನಿಖೆ ನಡೆಸುತ್ತಿದೆ.
ಪೆನ್‌ಡ್ರೈವ್‌ಗಳನ್ನು ಹಂಚುವುದನ್ನು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಘಟನೆಯ ಸಂತ್ರಸ್ತೆಯರ ಗೌರವಕ್ಕೆ ಧಕ್ಕೆ ತಂದಿದೆ ಎಂದು ಜೆಡಿಎಸ್ ನಾಯಕರು ಮನವಿಯಲ್ಲಿ ತಿಳಿಸಿದ್ದಾರೆ.