ಶಿವಕುಮಾರ್ ಅವರಿಗೆ ಸೋಮಣ್ಣ ಕಿವಿಮಾತು
ಬೆಂಗಳೂರು:ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಅವರ ಕುಟುಂಬದವರ ವಿರುದ್ಧ ವಾಗ್ದಾಳಿ ನಡೆಸುವುದನ್ನು ನಿಲ್ಲಿಸಬೇಕೆಂದು ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ವಿ.ಸೋಮಣ್ಣ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿಯಾಗಲು ಆತುರ ಪಡಬೇಡಿ, ತರಾತುರಿಯಲ್ಲಿ ನಿರ್ಧಾರ ಕೈಗೊಂಡರೆ ಹಿನ್ನಡೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ್ ಉನ್ನತ ಹುದ್ದೆಯೊಂದನ್ನು ಬಿಟ್ಟು ಎಲ್ಲಾ ಅಧಿಕಾರವನ್ನು ಸವಿದಿದ್ದಾರೆ, ಸವಿಯುತ್ತಿದ್ದಾರೆ.
ದೊಡ್ಡ ಸ್ಥಾನ ಬೇಕಾದರೆ ತಾಳ್ಮೆ ಮುಖ್ಯ
ದೊಡ್ಡ ಸ್ಥಾನ ಧಕ್ಕಿಸಿಕೊಳ್ಳಲು ತಾಳ್ಮೆ ಮುಖ್ಯ, ನಿಮಗೆ ದೊರಕಬೇಕಾದ ಸ್ಥಾನ ದೊರಕೇ ದೊರಕುತ್ತಿದೆ, ಆತುರ ಪಟ್ಟರೆ, ಲಭಿಸುವ ಅವಕಾಶವೂ ತಪ್ಪಬಹುದು ಎಂದಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ನಿಮ್ಮಿಬ್ಬರ ಹೋರಾಟವನ್ನು ಅನ್ಯ ಸಮಾಜದವರು ನೋಡಿಕೊಂಡು ಅದರಲ್ಲಿ ಕೆಲವರು ರಾಜಕೀಯ ಲಾಭ ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ, ಇಷ್ಟು ನಿಮಗೆ ಅರ್ಥವಾದರೆ ಸಾಕು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಆಸೆ ಪಟ್ಟವನಲ್ಲಿ ನಾನೂ ಒಬ್ಬ, ಆದರೆ ಅವರಿಗೆ ಧಕ್ಕಬೇಕಾದ ಸ್ಥಾನ ಧಕ್ಕಲಿಲ್ಲ, ಅವರ ಊರಿನವನಾಗಿ ದುಡುಕಬೇಡಿ ಎಂದಷ್ಟೇ ಕಿವಿಮಾತು ಹೇಳುತ್ತೇನೆ.
ಗೊಂದಲ ಸೃಷ್ಟಿಸಿಕೊಳ್ಳಬೇಡಿ
ಪ್ರಜ್ವಲ್ ತಪ್ಪು ಮಾಡಿದ್ದರೆ ಕಠಿಣ ಶಿಕ್ಷೆ ಆಗಲೇಬೇಕು, ಅದರಲ್ಲಿ ಎರಡು ಮಾತಿಲ್ಲ, ಆ ವಿಷಯದಲ್ಲಿ ಯಾರೂ ತಲೆ ತೂರಿಸುವುದಿಲ್ಲ, ನೀವು ಅನಗತ್ಯವಾಗಿ ಇಲ್ಲದವರನ್ನು ಎಳೆ ತಂದು ಗೊಂದಲ ಸೃಷ್ಟಿಸಿಕೊಳ್ಳಬೇಡಿ.
ಶಿವಕುಮಾರ್ ಆತ್ಮೀಯ ಸ್ನೇಹಿತರಾದರೂ ಸೋಮಣ್ಣ, ಪ್ರಜ್ವಲ್ ಪ್ರಕರಣದ ವಿಷಯದಲ್ಲಿ ಗೌಡರ ಕುಟುಂಬದ ಪರ ನಿಂತಿದ್ದಾರೆ.
ಲೋಕಸಭಾ ಚುನಾವಣಾ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ತುಮಕೂರಿನಿಂದ ಸ್ಪರ್ಧಿಸಲು ರಾಜ್ಯದ ಕೆಲವು ಬಿಜೆಪಿ ನಾಯಕರೇ ಸೋಮಣ್ಣ ಅವರಿಗೆ ಅಡ್ಡಗಾಲಾಗಿದ್ದರು.
ಇಂತಹ ಸನ್ನಿವೇಶದಲ್ಲಿ ದೇವೇಗೌಡ, ಕುಮಾರಸ್ವಾಮಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರುಗಳು, ಸೋಮಣ್ಣ ಅವರ ಬೆನ್ನಿಗೆ ನಿಂತರು.
ಸೋಮಣ್ಣ ಪರ ಪ್ರಚಾರ
ಎನ್‌ಡಿಎ ಕೂಟದ ಪಾಲುದಾರರಾಗಿರುವ ಜೆಡಿಎಸ್, ತುಮಕೂರು ಲೋಕಸಭಾ ಕ್ಷೇತ್ರದಿಂದ ಸೋಮಣ್ಣ ಅವರಿಗೆ ಬಿಜೆಪಿ ಟಿಕೆಟ್ ದೊರಕಿದ ನಂತರ ಚುನಾವಣಾ ಸಂದರ್ಭದಲ್ಲೂ ಗೌಡರು ಮತ್ತು ಕುಮಾರಸ್ವಾಮಿ ಅವರ ಪರ ಬಿರುಸಿನ ಪ್ರಚಾರ ಕೈಗೊಂಡರು.
ಪ್ರಜ್ವಲ್ ವಿಷಯಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಹಾಗೂ ಕುಮಾರಸ್ವಾಮಿ ನಡುವೆ ಪರಸ್ಪರ ವಾಗ್ದಾಳಿ, ಆರೋಪ-ಪ್ರತ್ಯಾರೋಪ ನಡೆಯುತ್ತಿದೆ, ಇದರ ಮಧ್ಯೆ ಮಂಡ್ಯ, ಮೈಸೂರು, ಹಾಸನ, ರಾಮನಗರದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ವಿರುದ್ಧ ಜೆಡಿಎಸ್ ಕಾರ್ಯಕರ್ತರು ನಿರಂತರವಾಗಿ ಪ್ರತಿಭಟನೆ ನಡೆಸಿದ್ದಾರೆ.
ಇಂತಹ ಸನ್ನಿವೇಶದಲ್ಲಿ ಅನ್ಯ ಪಕ್ಷದ ಯಾವುದೇ ಮುಖಂಡರು ಮಧ್ಯೆ ಪ್ರವೇಶ ಮಾಡಿಲ್ಲ, ಆದರೆ ಸೋಮಣ್ಣ ಇಂದು ಏಕಾಏಕಿ ಗೌಡರ ಕುಟುಂಬದ ಪರ ನಿಂತು ಸ್ನೇಹಿತ ಶಿವಕುಮಾರ್ ಅವರಿಗೆ ಕಿವಿಮಾತು ಹೇಳಿದ್ದಾರೆ.