ಬೆಂಗಳೂರು:ವಿಧಾನ ಪರಿಷತ್ ಚುನಾವಣೆಯಲ್ಲೂ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮುಂದುವರೆಯಲಿದೆ.
ಪದವಿ ಹಾಗೂ ಶಿಕ್ಷಕರ ಆರು ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ನಾಲ್ಕರಲ್ಲೂ, ಜೆಡಿಎಸ್ ಎರಡರಲ್ಲೂ ಸ್ಪರ್ಧಿಸಲಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜೊತೆ ಚರ್ಚೆ ಮಾಡಿದ ನಂತರ ಸೀಟು ಹೊಂದಾಣಿಕೆ ಅಂತಿಮಗೊಂಡಿದೆ.
ಬಿಜೆಪಿ-ಜೆಡಿಎಸ್ ಒಗ್ಗಟ್ಟಿನಿಂದ ಕೆಲಸ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದು, ಇದನ್ನೇ ಪ್ರಜ್ಞಾವಂತ ಮತದಾರರ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲೂ ಮುಂದುವರೆಸಲು ತೀರ್ಮಾನಿಸಲಾಗಿದೆ.
ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣ ಹೊರಬೀಳುತ್ತಿದ್ದಂತೆ ಮೈತ್ರಿಯಲ್ಲಿ ಬಿರುಕು ಎಂಬ ಮಾತುಗಳು ಕೇಳಿಬಂದಿದ್ದವು.
ಇತ್ತೀಚಿಗೆ ಅಮಿತ್ ಷಾ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲೂ ಕುಮಾರಸ್ವಾಮಿ ಅವರೊಂದಿಗೆ ಚುನಾವಣೆ ಬಗ್ಗೆ ಪ್ರಾಸ್ತಾವಿಕವಾಗಿ ಚರ್ಚೆ ಮಾಡಿದ್ದರು, ಅದಾದ ನಂತರ ರಾಜ್ಯ ಬಿಜೆಪಿ ನಾಯಕರೊಂದಿಗೆ ನಡ್ಡಾ ಅವರು ಸಮಾಲೋಚಿಸಿ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.
ಯಾರಿಗೆ ಯಾವ ಕ್ಷೇತ್ರ ಎಂಬ ಪಟ್ಟಿ ಹೊರಬೀಳಲಿದೆ. ಉನ್ನತ ಮೂಲಗಳ ಪ್ರಕಾರ ಜೆಡಿಎಸ್‌ಗೆ ಕರ್ನಾಟಕ ದಕ್ಷಿಣ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರಗಳು ದೊರೆಯುವ ಸಾಧ್ಯತೆ ಇದೆ.
ಉಳಿದಂತೆ ಕರ್ನಾಟಕ ಈಶಾನ್ಯ, ನೈಋತ್ಯ, ಆಗ್ನೇಯ ಶಿಕ್ಷಕರ ಕ್ಷೇತ್ರ, ಬೆಂಗಳೂರು ಪದವೀಧರರ ಕ್ಷೇತ್ರ ಬಿಜೆಪಿ ಪಾಲಾಗಬಹುದು.
ಅಭ್ಯರ್ಥಿಗಳ ಆಯ್ಕೆ ಚರ್ಚೆ
ನಡ್ಡಾ ಅವರ ಸೂಚನೆ ತಲುಪುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ ಪಾಲಿಗೆ ಬಂದಿರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ರಾಜ್ಯ ಮುಖಂಡರೊಂದಿಗೆ ಇಡೀ ದಿನ ಚರ್ಚೆ ಮಾಡಿದ್ದಾರೆ.
ನಾಳೆ ಬೆಳಗ್ಗೆ ಬಹುತೇಕ ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಬಿಜೆಪಿ ವರಿಷ್ಠರಿಗೆ ಕಳುಹಿಸಲು ಮುಖಂಡರು ತೀರ್ಮಾನ ಕೈಗೊಂಡಿದ್ದಾರೆ.
ಕಳೆದ ಬಾರಿ ಈ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮೂರರಲ್ಲೂ, ಜೆಡಿಎಸ್ ಎರಡರಲ್ಲೂ, ಕಾಂಗ್ರೆಸ್ ಒಂದರಲ್ಲೂ ಗೆದ್ದಿದ್ದವು.
ಈ ಮಧ್ಯೆ, ಪ್ರವಾಸದಲ್ಲಿರುವ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ-ಜೆಡಿಎಸ್ ಮೈತ್ರಿ ವಿಧಾನ ಪರಿಷತ್‌ಗೆ ನಡೆಯಲಿರುವ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳ ಚುನಾವಣೆಯಲ್ಲೂ ಮುಂದುವರೆಯಲಿದೆ ಎಂದಿದ್ದಾರೆ.
ಬಿಜೆಪಿ ನಾಲ್ಕು ಸ್ಥಾನಗಳಲ್ಲೂ, ಜೆಡಿಎಸ್ ಎರಡು ಕ್ಷೇತ್ರಗಳನ್ನು ಹಂಚಿಕೆ ಮಾಡಿಕೊಂಡು ಚುನಾವಣೆ ಎದುರಿಸುವುದಾಗಿ ತಿಳಿಸಿದ್ದಾರೆ.