ಲೋಕಾಸಭಾ ಚುನಾವಣೆ ಫಲಿತಾಂಶದ ಮೇಲೆ ನಿಂತಿದೆ
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ೧೮ಕ್ಕೂ ಹೆಚ್ಚು ಸ್ಥಾನಗಳನ್ನು ಪಕ್ಷ ಗಳಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಸರ್ಕಾರದ ಮೊದಲ ವರ್ಷ ಪೂರ್ಣಗೊಳಿಸಿದ ಸಾಧನಾ-ಸಂಭ್ರಮ ಆಚರಣೆಗೆ ತೀರ್ಮಾನಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರಕ್ಕೆ ಮೇ ೨೦ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ, ಅಲ್ಲದೆ ಜೂನ್ ೨೦ಕ್ಕೆ ತಮ್ಮ ಸರ್ಕಾರದ ಮಹತ್ವದ ಐದು ಗ್ಯಾರಂಟಿ ಯೋಜನೆಗಳಿಗೆ ಚಾಲನೆ ನೀಡಿದ ದಿನ. ಎರಡೂ ಸಾಧನೆಗಳನ್ನು ಒಟ್ಟಾಗಿ ಸಂಭ್ರಮಿಸಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ.
ಚುನಾವಣಾ ಮಾದರಿ ನೀತಿ ಸಂಹಿತೆ ಜೂನ್ ೬ರವರೆಗೆ ಇರುವುದರಿಂದ ಇದಕ್ಕೂ ಮೊದಲು ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಬ್ಬ ಆಚರಿಸಿಕೊಳ್ಳಲು ಸಾಧ್ಯವಿಲ್ಲ.
ಸಂಭ್ರಮಾಚರಣೆಗಾಗಿ ಸರ್ಕಾರ ಮಾಡಿದ ಮನವಿಯನ್ನು ಆಯೋಗ ತಿರಸ್ಕರಿಸಿದೆ, ಹೀಗಾಗಿ ಲೋಕಸಭಾ ಚುನಾವಣೆ ಫಲಿತಾಂಶದ ನಂತರವೇ ಆಚರಣೆಯ ರೂಪರೇಷೆ ನಿರ್ಧಾರವಾಗಲಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ೧೮ ಸ್ಥಾನಗಳ ನಿರೀಕ್ಷೆಯಲ್ಲಿರುವ ಮುಖ್ಯಮಂತ್ರಿ ಅವರು, ಆ ಗುರಿ ಮುಟ್ಟಿ ಇಡೀ ರಾಷ್ಟ್ರದಲ್ಲಿ ಬೇರೆ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಇಂತಹ ಸಾಧನೆ ಮಾಡದಿದ್ದರೆ ಅದನ್ನು ದೊಡ್ಡ ಸಂಭ್ರಮವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ.
ಒಂದು ವೇಳೆ ತಮ್ಮ ನಿರೀಕ್ಷೆಯ ಗುರಿ ಮುಟ್ಟದಿದ್ದರೆ, ಸಂಭ್ರಮವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಿದ್ದಾರೆ ಎನ್ನಾಲಾಗಿದೆ.
ಇದೇ ಉದ್ದೇಶಕ್ಕಾಗಿ ಮುಖ್ಯಮಂತ್ರಿ ಅವರು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹೋರಾಟ ನಡೆಸಿರುವ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.
ಇತಿಹಾಸದ ಚುನಾವಣಾ ಸಂದರ್ಭದಲ್ಲಿ ಯಾವುದೇ ಮುಖ್ಯಮಂತ್ರಿಗಳು ತಾವು ಎಷ್ಟು ಚುನಾವಣಾ ಭಾಷಣ, ರೋಡ್ ಶೋ ನಡೆಸಿದ ವಿವರಗಳನ್ನು ಬಹಿರಂಗ ಪಡಿಸಿರಲಿಲ್ಲ.
ಆದರೆ, ಇವರು, ಕಳೆದ ನಾಲ್ಕು ತಿಂಗಳಿಂದ ಚುನಾವಣಾ ಪೂರ್ವ ಮತ್ತು ಚುನಾವಣಾ ದಿನಾಂಕ ಪ್ರಕಟಣೆ ನಂತರ ಮಾಡಿದ ಪ್ರಚಾರಕ್ಕೆ ಸಂಬಂಧಿಸಿದಂತೆ ಪೂರ್ಣ ಮಾಹಿತಿ ನೀಡಿದ್ದಾರೆ. ಇದು ಕಾಂಗ್ರೆಸ್ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.
ಹೆಚ್ಚು ಸ್ಥಾನ ಗಳಿಸಿದರೆ ತನ್ನಿಂದಲೇ ಎಂದು ಬಿಂಬಿಸಿಕೊಳ್ಳಲು ಮುಖ್ಯಮಂತ್ರಿ ಅವರು ಈ ಮಾಹಿತಿ ಹೊರಗಿಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ತಮ್ಮ ಅನಿಸಿಕೆಯಂತೆ ಎಲ್ಲವೂ ಸರಿ ಹೋದರೆ ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಗುಲ್ಬರ್ಗದಲ್ಲಿ ನಾಲ್ಕು ಬೃಹತ್ ಸಮಾವೇಶಗಳನ್ನು ನಡೆಸುವ ಉದ್ದೇಶ ಇದೆ.
ತಮ್ಮ ಮೊದಲ ವರ್ಷದಲ್ಲಿ ಮಾಡಿರುವ ಸಾಧನೆಗಳ ಕಿರುಹೊತ್ತಿಗೆ ಜೊತೆಗೆ ಅವುಗಳ ಅನುಷ್ಟಾನ, ಎಲ್ಲದಕ್ಕೂ ಮಿಗಿಲಾಗಿ ಗ್ಯಾರಂಟಿ ಮೂಲಕ ಬಡವರನ್ನು ಮೇಲ್ದರ್ಜೆಗೆ ಏರಿಸಿರುವ ಅಂಕಿ-ಅಂಶಗಳನ್ನು ಬಹಿರಂಗ ಪಡಿಸುವುದು ಸರ್ಕಾರದ ಉದ್ದೇಶವಾಗಿದೆ.
ವಿಭಾಗೀಯ ಮಟ್ಟದ ಸಮಾವೇಶದ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರುಗಳು ಆಯಾ ಜಿಲ್ಲೆಗಳಲ್ಲಿ ಸಾಧನಾ-ಸಂಭ್ರಮಗಳನ್ನು ಜಿಲ್ಲಾಡಳಿತದ ವತಿಯಿಂದಲೇ ಆಚರಿಸಲು ಯೋಜಿಸಲಾಗಿದೆ.