ಬೆಂಗಳೂರು:ಮಹಾರಾಷ್ಟ್ರ ರಾಜಕೀಯದಲ್ಲಿ ಬೀಸಿದ ಬಿರುಗಾಳಿ ಕರ್ನಾಟಕದಲ್ಲೂ ಬೀಸಿ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಏಕನಾಥ ಶಿಂಧೆ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ.
ಶಿಂಧೆ ಇಂತಹ ಹೇಳಿಕೆ ನೀಡಿದ ಬೆನ್ನಲ್ಲೇ ನಮ್ಮ ಕಾಂಗ್ರೆಸ್‌ನ ಯಾವ ಶಾಸಕರೂ ಖರೀದಿಗಿಲ್ಲ, ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೊದಲನೆಯದಾಗಿ ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರುವುದು ಕನಸು ಎಂದು ತಿರುಗೇಟು ನೀಡಿದ್ದಾರೆ.
ಸರ್ಕಾರ ಪತನ ಸನ್ನಿಹಿತ
ಲೋಕಸಭಾ ಚುನಾವಣೆ ಪೂರ್ಣಗೊಳ್ಳುತ್ತಿದ್ದಂತೆ ಕರ್ನಾಟಕದಲ್ಲಿ ಸರ್ಕಾರ ಪತನಕ್ಕೆ ಸಮಯ ಸನ್ನಿಹಿತವಾಗಿದೆ, ಇಂತಹ ಸಂದರ್ಭದಲ್ಲಿ ನನ್ನ ನೆರವನ್ನು ರಾಜ್ಯ ಬಿಜೆಪಿ ನಾಯಕರು ಕೋರಿದ್ದಾರೆಂದು ಶಿಂಧೆ ಹೇಳಿಕೆ ನೀಡಿದ್ದಾರೆ.
ಕರ್ನಾಟಕದ ಬಿಜೆಪಿ ಮತ್ತು ಎನ್‌ಡಿಎ ಭಾಗೀದಾರ ಮುಖಂಡರುಗಳು ಈಗಾಗಲೇ ಹಲವಷ್ಟು ಸಭೆ ನಡೆಸಿ, ನನ್ನ ಮತ್ತು ಗೋವಾ ಮುಖ್ಯಮಂತ್ರಿ ಅವರ ಸಹಕಾರ ಕೋರಿದ್ದಾರೆ.
ಅಲ್ಲಿನ ಕಾಂಗ್ರೆನ ಬಹು ಶಾಸಕರು ಬಿಜೆಪಿ ಮುಖಂಡರ ಜೊತೆ ಸಂಪರ್ಕದಲ್ಲಿದ್ದಾರೆ.
ಅವರಿಗೆ ಹಸಿರು ನಿಶಾನೆ ದೊರೆಯುತ್ತಿದ್ದಂತೆ ಪಕ್ಷ ತೊರೆದು ಬಿಜೆಪಿ ಜೊತೆ ಕೈಜೋಡಿಸಲಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ.
ಸರ್ಕಾರ ಬದಲಾವಣೆ ಸಂದರ್ಭದಲ್ಲಿ ಯಾವ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಅಲ್ಲಿನ ಮುಖಂಡರು ಈಗಾಗಲೇ ನನ್ನ ಸಲಹೆ ಪಡೆದಿದ್ದಾರೆ.
ಚುನಾವಣೆ ಮುಗಿಯುತ್ತಿದ್ದಂತೆ ನಾನೇ ಖುದ್ದಾಗಿ ಕರ್ನಾಟಕಕ್ಕೆ ಬಂದು ಎಲ್ಲವನ್ನೂ ಮಾರ್ಗದರ್ಶನ ಮಾಡುವುದಾಗಿ ತಿಳಿಸಿದ್ದೇನೆ.
ಪದೇ ಪದೇ ಹೇಳಿಕೆ
ಈ ಬೆಳವಣಿಗೆ ನಂತರವೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ರಾಘವೇಂದ್ರ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆ ನಂತರ ತಾನಾಗಿಯೇ ಪತನಗೊಳ್ಳಲಿದೆ ಎಂದು ಪದೇ ಪದೇ ಹೇಳಿಕೆ ನೀಡುತ್ತಲೇ ಬಂದಿದ್ದಾರೆ.
ಇದರ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂಧೆ ಭ್ರಮೆಯಲ್ಲಿದ್ದಾರೆ ಎಂದು ಖಾರವಾಗಿ ತಿರುಗೇಟು ನೀಡಿದ್ದಾರೆ.
ಆಪರೇಷನ್ ಕಮಲ ಆಗುವುದಿಲ್ಲ
ಯಾವ ಕಾರಣಕ್ಕೂ ಆಪರೇಷನ್ ಕಮಲ ಮಾಡಲು ಆಗುವುದಿಲ್ಲ, ಚುನಾವಣಾ ಸಂದರ್ಭದಲ್ಲಿ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ.
ಮಹಾರಾಷ್ಟ್ರದಲ್ಲಾದಂತೆ ಕರ್ನಾಟಕದಲ್ಲಿ ಆಗುವುದಿಲ್ಲ, ಲೋಕಸಭಾ ಚುನಾವಣೆಯಲ್ಲೂ ಇಂಡಿಯಾ ಮೈತ್ರಿಕೂಟ ಗೆಲ್ಲುತ್ತದೆ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದರು.
ಕನಾಟಕದಲ್ಲಿ ನಾವು 20 ಸ್ಥಾನ ಗೆಲ್ಲುತ್ತೇವೆ, ಅವರು ಚುನಾವಣೆಯಲ್ಲಿ ಸೋಲುತ್ತಾರೆ, ಅದಕ್ಕೆ ಹತಾಶರಾಗಿ ಸರ್ಕಾರ ಬೀಳಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಮಹಾರಾಷ್ಟ್ರ ಸರ್ಕಾರ ಉಳಿಯುವುದೇ ಸಂಶಯ
ಮತ್ತೊಂದೆಡೆ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಹಾರಾಷ್ಟ್ರ ಸರ್ಕಾರ ಉಳಿಯುವುದೇ ಸಂಶಯ ಇದೆ, ಅಲ್ಲಿನ ಶಾಸಕರೇ ಯು-ಟರ್ನ್ ಹೊಡೆಯುತ್ತಿದ್ದಾರೆ, ಲೋಕಸಭಾ ಚುನಾವಣೆ ನಂತರ ಅಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯಲಿದೆ ಎಂದರು.
ಶಿವಸೇನೆ ಮತ್ತು ಎನ್‌ಸಿಪಿ ಶಾಸಕರು ಮತ್ತೆ ತಮ್ಮ ಮನೆಗೆ ಹಿಂತಿರುಗುತ್ತಿದ್ದಾರೆ, ಆ ಭಯದಿಂದ ಶಿಂಧೆ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ತಿಳಿಸಿದರು.