ಬೆಂಗಳೂರು:ದಕ್ಷಿಣ ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಎಸ್‌ನ ಕೆ.ವಿವೇಕಾನಂದ ಅವರನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಇಂದು ವಿವೇಕಾನಂದ ಅವರಿಗೆ ’ಬಿ’ ಫಾರಂ ನೀಡುವ ಮೂಲಕ ಹಲವು ವಿವಾದಗಳಿಗೆ ತೆರೆ ಎಳೆದಿದ್ದಾರೆ.
ವಿವೇಕಾನಂದ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಅವರ ನಡುವೆ ಟಿಕೆಟ್‌ಗೆ ಪೈಪೋಟಿ ನಡೆದಿತ್ತು, ಈ ಸಮಯದಲ್ಲೇ ಬಿಜೆಪಿಯ ರಾಷ್ಟ್ರೀಯ ನಾಯಕರು ದಕ್ಷಿಣ ಕ್ಷೇತ್ರವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದರು.
ಎರಡು ಕ್ಷೇತ್ರ ಮಿತ್ರ ಪಕ್ಷಕ್ಕೆ
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಜೊತೆ ಸಮಾಲೋಚನೆ ನಡೆಸಿದ ನಂತರ ಹಿಂದೆ ನಡೆದ ಕರಾರಿನಂತೆ ದಕ್ಷಿಣ ಕ್ಷೇತ್ರ ಸೇರಿದಂತೆ ಎರಡು ಕ್ಷೇತ್ರವನ್ನು ಮಿತ್ರ ಪಕ್ಷಕ್ಕೆ ಬಿಟ್ಟು ಉಳಿದ ನಾಲ್ಕನ್ನು ಬಿಜೆಪಿ ಉಳಿಸಿಕೊಂಡಿತ್ತು.
ಜೆಡಿಎಸ್‌ಗೆ ದಕ್ಷಿಣ ಕ್ಷೇತ್ರ ದಕ್ಕುತ್ತಿದ್ದಂತೆ ಮಂಡ್ಯ ಹಾಗೂ ಮೈಸೂರು ಮುಖಂಡರುಗಳು ತಮ್ಮ ಜಿಲ್ಲೆಯವರೇ ಅಭ್ಯರ್ಥಿ ಆಗಬೇಕೆಂದು ವರಿಷ್ಠರ ಮುಂದೆ ಪಟ್ಟು ಹಿಡಿದಿದ್ದರು.
ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರ ಮಾತಿಗೆ ಮಣಿದ ಗೌಡರು, ವಿವೇಕಾನಂದ ಅವರಿಗೆ ಟಿಕೆಟ್ ನೀಡಿದ್ದಾರೆ.
ಬಂಡಾಯ ಮುನ್ಸೂಚನೆ
ಇದರ ಬೆನ್ನಲ್ಲೇ ಮತ್ತೊಬ್ಬ ಆಕಾಂಕ್ಷಿ ಶ್ರೀಕಂಠೇಗೌಡ ಬಂಡಾಯ ಸಾರುವ ಮುನ್ಸೂಚನೆ ನೀಡಿದ್ದಾರೆ.
ಪದವಿ ಹಾಗೂ ಶಿಕ್ಷಕರ ಆರು ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಕಡೆಯ ದಿನವಾಗಿದೆ.
ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕಳೆದ ಬಾರಿ ಜೆಡಿಎಸ್‌ನಿಂದ ಆಯ್ಕೆಗೊಂಡಿದ್ದ ಮರಿತಿಬ್ಬೇಗೌಡ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.
ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲಾ ವ್ಯಾಪ್ತಿಯನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಎದುರಿಸಲಿದ್ದಾರೆ.