ಬೆಂಗಳೂರು:ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿಯಲ್ಲಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಬಂಧನಗೊಂಡು ಬಿಡುಗಡೆಯಾದ ಬೆನ್ನಲ್ಲೇ ಸರ್ಕಾರಕ್ಕೆ ಮತ್ತೊಂದು ತಲೆನೋವು ಎದುರಾಗಿದೆ.
ಪೊಕ್ಸೋ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಈಗಾಗಲೇ ಎಫ್‌ಐಆರ್ ದಾಖಲಿಸಿ ಪ್ರಾಥಮಿಕ ಹಂತದ ತನಿಖೆ ಮುಗಿಸಿ ಈಗ ಆರೋಪ ಪಟ್ಟಿ ಸಲ್ಲಿಸಲು ಮುಂದಾಗಿದ್ದಾರೆ.

ನ್ಯಾಯಾಲಯಕ್ಕೆ ಆರೋಪ ಪಟ್ಟಿ
ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುವುದಕ್ಕೂ ಮುನ್ನ ಯಡಿಯೂರಪ್ಪ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕಾಗಿದೆ. ಇನ್ನೆರಡು ದಿನದಲ್ಲೇ ಈ ಕಾರ್ಯ ಮುಗಿಯಬೇಕಿದೆ.
ಯಡಿಯೂರಪ್ಪ ಅವರನ್ನು ಬಂಧಿಸುವುದಕ್ಕೂ ಮುನ್ನ ಅಧಿಕಾರಿಗಳು ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಗಮನಕ್ಕೆ ವಿಷಯ ತಂದಿದ್ದಾರೆ, ತದನಂತರ ಸಿದ್ದರಾಮಯ್ಯ ಹಾಗೂ ಡಾ.ಪರಮೇಶ್ವರ್ ಅವರು ಚರ್ಚೆ ಮಾಡಿ, ಸರ್ಕಾರವನ್ನು ಮತ್ತೆ ಇಕ್ಕಟ್ಟಿಗೆ ಸಿಲುಕಿಸಬೇಡಿ ಎಂಬ ಕಿವಿಮಾತು ಹೇಳಿದ್ದಾರಂತೆ.
ರೇವಣ್ಣ ಪ್ರಕರಣದಿಂದ ಒಂದು ಸಮುದಾಯದ ವಿರೋಧ ಕಟ್ಟಿಕೊಂಡಿದೆ, ಯಡಿಯೂರಪ್ಪ ಅವರನ್ನೂ ಬಂಧಿಸಿದರೆ ಆ ಸಮಾಜವೂ ತಿರುಗಿಬೀಳುತ್ತದೆ.
ಯಡಿಯೂರಪ್ಪ ಹೋರಾಟ
ನೀವು ಕಾನೂನು ರೀತಿ ಕ್ರಮ ಕೈಗೊಳ್ಳಿ, ಯಡಿಯೂರಪ್ಪ ನ್ಯಾಯಾಲಯದಲ್ಲಿ ಹೋರಾಟ ನಡೆಸಲಿ ಎಂಬ ಸಲಹೆ ನೀಡಿದ್ದಾರಂತೆ.
ಸಹಾಯ ಕೇಳಲು ಹೋಗಿದ್ದ 17 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಅವರ ತಾಯಿ, ಸದಾಶಿವನಗರ ಠಾಣೆಯಲ್ಲಿ ದೂರು ನೀಡಿದ್ದರು.
ಕಳೆದ ಫೆಬ್ರವರಿ 2ರಂದು ಯಡಿಯೂರಪ್ಪ ಅವರು ಬಾಲಕಿಯನ್ನು ಕೊಠಡಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾಗಿ ದೂರಿನಲ್ಲಿ ಆರೋಪಿಸಲಾಗಿತ್ತು.
ಮಾರ್ಚ್ 14ರಂದು ಎಫ್‌ಐಆರ್
ದೂರು ನೀಡಿದ ನಂತರ ಮಕ್ಕಳ ಮೇಲಿನ ಲೈಂಗಿಕ ತಡೆ (ಪೊಕ್ಸೋ) ಕಾಯಿದೆ ಸೆಕ್ಷನ್ 8 ಹಾಗೂ ಐಪಿಸಿ ಸೆಕ್ಷನ್ 354 (ಎ) ಅಡಿ ಮಾರ್ಚ್ 14ರಂದು ಎಫ್‌ಐಆರ್ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾಧಿಕಾರಿಗಳು ಕೆಲವು ವಿಡಿಯೊಗಳನ್ನು ವಶ ಪಡಿಸಿಕೊಂಡಿದ್ದು, ಜೊತೆಗೆ ಕೆಲವರ ಹೇಳಿಕೆಗಳನ್ನೂ ದಾಖಲಿಸಿಕೊಂಡಿದ್ದಾರೆ.
ದೂರು ಕೊಟ್ಟ ಮಹಿಳೆಗೆ ಮಾನಸಿಕ ಸಮಸ್ಯೆ ಇದೆ ಎಂದು ಕೆಲವರು ಹೇಳಿದ್ದಾರೆ, ಅವರು ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿದ್ದಾರೆ, ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಿ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಂದು ಪ್ರತಿಕ್ರಿಯಿಸಿದ್ದರು.
