ಬೆಂಗಳೂರು:ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ರಾಷ್ಟ್ರಕ್ಕೆ ಇಂದು ಹಿಂದಿರುಗಲಿದ್ದಾರೆ ಎಂಬುದು ಮತ್ತೊಮ್ಮೆ ಹುಸಿಯಾಗಿದೆ.
ಜರ್ಮನಿಯ ಮ್ಯೂನಿಚ್ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಭಾರತೀಯ ಕಾಲಮಾನ ಬುಧವಾರ ಸಂಜೆ 4.05ಕ್ಕೆ ಹೊರಟು, ಗುರುವಾರ ಬೆಳಗ್ಗೆ 00.45ಕ್ಕೆ ನೇರವಾಗಿ ತಲುಪುವ ವಿಮಾನದಲ್ಲಿ ಟಿಕೆಟ್ ಕಾಯ್ದಿರಿಸಲಾಗಿತ್ತು.
ಕೊನೆ ಗಳಿಗೆಯಲ್ಲಿ ನಿರ್ಧಾರ ಬದಲು
ಪ್ರಜ್ವಲ್ ಜೊತೆಗೆ ಇನ್ನೂ ಏಳು ಮಂದಿಯ ಹೆಸರಿನಲ್ಲಿ ಟಿಕೆಟ್ ನೋಂದಾಯಿಸಲಾಗಿತ್ತು, ಆದರೆ, ಪ್ರಜ್ವಲ್ ಕೊನೆ ಗಳಿಗೆಯಲ್ಲಿ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ.
ಈ ಹಿಂದೆ ಎರಡು ಬಾರಿ ಇದೇ ರೀತಿ ರಾಷ್ಟ್ರಕ್ಕೆ ಹಿಂತಿರುಗುವ ನಿರ್ಧಾರವನ್ನು ಪ್ರಜ್ವಲ್ ಬದಲಿಸಿದ್ದರು.
ಆದರೆ, ಇಂದು ನಗರಕ್ಕೆ ಪ್ರಜ್ವಲ್ ಬಂದೇ ಬರುತ್ತಾರೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆಯಿಂದಲೇ ಮೊಕ್ಕಾಂ ಹೂಡಿದ್ದರು.
ಅಧಿಕಾರಿಗಳ ತಂಡ ಜರ್ಮನಿಯಲ್ಲಿ
ಎಸ್‌ಐಟಿಯ ಆರು ಅಧಿಕಾರಿಗಳ ತಂಡ ಜರ್ಮನಿಯಲ್ಲಿ ಬಿಡಾರ ಹೂಡಿ ಪ್ರಜ್ವಲ್ ಅವರ ಮನವೊಲಿಸಿ ಕರೆತರುವ ಪ್ರಯತ್ನ ನಡೆಸಿದ್ದಾರೆ.
ಅಧಿಕಾರಿಗಳು ಬಲವಂತವಾಗಿ ಆ ದೇಶದಿಂದ ಕರೆತರಲು ಸಾಧ್ಯವಿಲ್ಲ, ಆದ್ದರಿಂದ ಮನವೊಲಿಸಿ ರಾಷ್ಟ್ರಕ್ಕೆ ಕರೆತರುವ ಮೊದಲ ಪ್ರಯತ್ನದಲ್ಲಿ ವಿಫಲವಾಗಿದ್ದಾರೆ.
ಪ್ರಜ್ವಲ್ ಜೊತೆ ಮತ್ತೊಬ್ಬ ಸ್ನೇಹಿತರಿರುವನೆಂದು ಹೇಳಲಾಗಿದ್ದು, ಆತ ಯಾರು ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ.
ಹಿರಿಯ ವಕೀಲರ ಸಲಹೆ
ಇದರ ನಡುವೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ಕುಟುಂಬದವರ ಮೇಲೆ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನ ಖ್ಯಾತ ಹಿರಿಯ ವಕೀಲರುಗಳನ್ನು ಮನೆಗೆ ಕರೆಸಿಕೊಂಡು ಸಲಹೆ ಪಡೆದುಕೊಂಡಿದ್ದಾರೆ.
ಅವರ ಸಲಹೆಯಂತೆ ಪುತ್ರ ರೇವಣ್ಣ ವಿರುದ್ಧ ಎಸ್‌ಐಟಿ ಸಲ್ಲಿಸಿರುವ ಚಾರ್ಜ್‌ಶೀಟ್ ಅನ್ನು ರದ್ದು ಮಾಡುವಂತೆ ಹೈಕೋರ್ಟ್‌ನ ಮೊರೆ ಹೋಗಲು ತೀರ್ಮಾನ ಕೈಗೊಂಡಿದ್ದಾರೆ.
ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಅವರನ್ನು ಎಸ್‌ಐಟಿ ಅವರು ಬಂಧಿಸಿ ಜೈಲಿಗೆ ಕಳುಹಿಸಿದ್ದರು, ನಿನ್ನೆಯಷ್ಟೇ ರೇವಣ್ಣ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಹೊರಬಂದಿದ್ದಾರೆ.
ಕಾನೂನು ತಜ್ಞರೊಂದಿಗೆ ಸಮಾಲೋಚನೆ
ತಂದೆಯ ಜೊತೆ ರೇವಣ್ಣ ಕೂಡ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಪ್ರಜ್ವಲ್‌ನನ್ನು ಸುರಕ್ಷಿತವಾಗಿ ರಾಷ್ಟ್ರಕ್ಕೆ ಕರೆತಂದು ಪೊಲೀಸರಿಗೆ ಶರಣಾಗಿಸುವ ಬಗ್ಗೆಯೂ ಸಲಹೆ ಪಡೆದಿದ್ದಾರೆನ್ನಲಾಗಿದೆ.
ಪೊಲೀಸರು ಪ್ರಜ್ವಲ್‌ನನ್ನ ವಶಕ್ಕೆ ಪಡೆದ ನಂತರ ಕುಟುಂಬದವರಾಗಿ ಯಾವ ರೀತಿ ಕಾನೂನು ಹೋರಾಟ ಮಾಡಲು ಸಾಧ್ಯ ಎಂಬ ಬಗ್ಗೆಯೂ ಮಾಹಿತಿ ಮತ್ತು ಮಾರ್ಗದರ್ಶನ ಪಡೆದಿದ್ದಾರೆ.
ಇದರ ಹೊಣೆಗಾರಿಕೆಯನ್ನು ಹಿರಿಯ ವಕೀಲರಿಗೆ ವಹಿಸಿದ್ದಾರೆ ಎನ್ನಲಾಗಿದೆ.