ಬೆಂಗಳೂರು:ಕೇಂದ್ರ ಸರ್ಕಾರದಿಂದ ರೈತರ ಖಾತೆಗಳಿಗೆ ಹಾಕಿದ್ದ ಬರ ಪರಿಹಾರ ಹಣವನ್ನು ಬ್ಯಾಂಕ್‌ಗಳು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿವೆ.
ಕಳೆದ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ರಾಜ್ಯದ ಬಹುತೇಕ ಭಾಗ ಬರಕ್ಕೆ ಸಿಲುಕಿ ರೈತರು ಕೈಗೆ ಬಂದ ಬೆಳೆಯನ್ನು ಕಳೆದುಕೊಂಡಿದ್ದರು.
ನಿಯಮಾವಳಿಯಡಿ ಬೆಳೆ ಪರಿಹಾರ
ಬೆಳೆ ಕಳೆದು ಕೊಂಡ ರೈತರಿಗೆ ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ ನಿಯಮಾವಳಿಯಡಿ ಬೆಳೆ ಮತ್ತು ಭೂಮಿಯ ಆಧಾರದ ಮೇಲೆ ಪರಿಹಾರ ನೀಡಿತ್ತು.
ರಾಜ್ಯ ಸರ್ಕಾರ 4,663.12 ಕೋಟಿ ರೂ. ಬೆಳೆ ಪರಿಹಾರ ಕೋರಿತ್ತು, ಆದರೆ ಕೇಂದ್ರ ಸರ್ಕಾರ 3,454 ಕೋಟಿ ರೂ. ಬಿಡುಗಡೆ ಮಾಡಿತ್ತು.
ರಾಜ್ಯ ಸರ್ಕಾರ ಕಳುಹಿಸಿದ್ದ ವರದಿ ಆಧಾರದ ಮೇಲೆ ಪರಿಹಾರ ಹಣ ರೈತರ ಖಾತೆಗಳಿಗೆ ನೇರವಾಗಿ ತಲುಪಿತ್ತು.
ಇದರಲ್ಲಿ ಕೆಲವರಿಗೆ ಅಲ್ಪ ಮೊತ್ತದ ಹಣ ದೊರೆತಿದ್ದರೆ, ಇನ್ನು ಕೆಲವರಿಗೆ ಗೌರವಯುತ ಮೊತ್ತ ದೊರೆತಿತ್ತು.
ಹಣ ಸಾಲದ ಖಾತೆಗೆ ವರ್ಗಾ
ಬೆಳೆ ಕಳೆದು ಕೊಂಡ ಬಹುತೇಕ ರೈತರು ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ್ದರು. ಪರಿಹಾರದ ಹಣ ಜಮೆ ಆಗುತ್ತಿದ್ದಂತೆ ಆ ಹಣವನ್ನು ಬ್ಯಾಂಕ್‌ಗಳು ಸಾಲದ ಖಾತೆಗೆ ವರ್ಗಾಯಿಸಿಕೊಂಡಿವೆ.
ಬ್ಯಾಂಕ್ ವರ್ತನೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿ, ಯಾವ ಕಡೆಯಿಂದ ನೋಡಿದರೂ ರೈತರ ಸಂಕಷ್ಟಕ್ಕೆ ಕೊನೆಯೇ ಇಲ್ಲದಂತಾಗಿದೆ.
ಹೆಸರಿಗೆ ಅನ್ನದಾತ, ಆದರೆ, ಅವರ ಕಣ್ಣೀರು ಒರೆಸಿ ಅವರಿಗೆ ದಾತನಾಗಿ ನಿಲ್ಲಬೇಕಿದ್ದ ರಾಜ್ಯ ಸರ್ಕಾರ ಕೈಕಟ್ಟಿ ಕೂತಿದೆ ಎಂದು ಕಿಡಿ ಕಾರಿದ್ದಾರೆ.
ಬ್ಯಾಂಕ್‌ಗಳ ಕ್ರೂರ ವರ್ತನೆ
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರದಿಂದ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿದ್ದ ಬರ ಪರಿಹಾರ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿರುವ ಬ್ಯಾಂಕ್‌ಗಳ ವರ್ತನೆ ನಿಜಕ್ಕೂ ಕ್ರೂರ ಮತ್ತು ಖಂಡನೀಯ ಎಂದಿದ್ದಾರೆ.
ಮೊದಲೇ ತೀವ್ರ ಬೆಳೆ ನಷ್ಟದಿಂದ ಕಂಗೆಟ್ಟಿರುವ ರೈತರ ಕಣ್ಣಲ್ಲಿ ರಕ್ತ ಕಣ್ಣೀರು ತರಿಸುವ ಅಮಾನವೀಯ ಕ್ರಮ ಎಂದು ಬಣ್ಣಿಸಿದ್ದಾರೆ.
ರಾಜ್ಯ ಸರ್ಕಾರ ಕೂಡಲೇ ಸಾಲ ನೀಡಿರುವ ಎಲ್ಲಾ ಬ್ಯಾಂಕ್‌ಗಳ ಮುಖ್ಯಸ್ಥರ ಸಭೆ ಕರೆದು ಈ ಬಗ್ಗೆ ಗಂಭೀರ ಚರ್ಚೆ ನಡೆಸಬೇಕು, ಬರ ಪರಿಹಾರ ಮೊತ್ತವನ್ನು ಸಾಲಕ್ಕೆ ಜಮೆ ಮಾಡಬಾರದು ಎಂದು ತಾಕೀತು ಮಾಡುವಂತೆ ಒತ್ತಾಯಿಸಿದ್ದಾರೆ.