ಬೆಂಗಳೂರು:ಕರ್ನಾಟಕದ ಏಕನಾಥ್ ಶಿಂಧೆ ಯಾರು ಎಂಬ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಎಡೆ ಮಾಡಿದೆ.
ಲೋಕಸಭಾ ಚುನಾವಣಾ ಫಲಿತಾಂಶ ಹೊರಬರುತ್ತಿದ್ದಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಮಹಾರಾಷ್ಟ್ರದ ಮಾದರಿಯಲ್ಲಿ ತೆಗೆಯುತ್ತೇವೆ ಎಂದು ಅಲ್ಲಿನ ಮುಖ್ಯಮಂತ್ರಿ ಶಿಂಧೆ ನೀಡಿರುವ ಹೇಳಿಕೆ ಸಿದ್ದರಾಮಯ್ಯ ಸರ್ಕಾರಕ್ಕೆ ಭೀತಿ ಮೂಡಿಸಿದೆ.
ಸರ್ಕಾರ ಅಸ್ಥಿರಗೊಳಿಸುವ ಸಂಚು
ಜೆಡಿಎಸ್ ಎನ್‌ಡಿಎ ಮೈತ್ರಿಕೂಟದ ಕೈಜೋಡಿಸಿದ ನಂತರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಸಂಚು ಕಳೆದ ಐದು ತಿಂಗಳಿಂದಲೂ ನಡೆಯುತ್ತಿದೆ.
ಇದೀಗ ಅದಕ್ಕೆ ಬಿರುಸಿನ ಚಾಲನೆ ದೊರೆತಂತಿದೆ, ಕಾಂಗ್ರೆಸ್‌ನಲ್ಲಿ ಮೇಲ್ನೋಟಕ್ಕೆ ಒಗ್ಗಟ್ಟು ಕಂಡುಬಂದರೂ ಒಳಗಿಂದೊಳಗೆ ಎಲ್ಲವೂ ಸರಿ ಇಲ್ಲ.
ನಮ್ಮಲ್ಲಿ ಬೆಂಗಳೂರಿನವರ, ದಾವಣಗೆರೆಯ ಇಲ್ಲವೆ ಬೆಳಗಾವಿ ನಾಯಕರು ಕರ್ನಾಟಕದ ಏಕನಾಥ ಶಿಂಧೆ ಆಗಿ ಹೊರ ಹೊಮ್ಮುತ್ತಾರಾ ಎಂಬ ಚರ್ಚೆ ನಡೆದಿದೆ.
ಮುಖ್ಯಮಂತ್ರಿಗೆ ಸಂದೇಶ ರವಾನೆ
ಇದರ ಬೆನ್ನಲ್ಲೇ ಎಐಸಿಸಿ ಕೂಡ ಸರ್ಕಾರ ತೆಗೆಯಲು ಬಿಜೆಪಿ ವರಿಷ್ಠರು ಯಾವ ಹಂತಕ್ಕಾದರೂ ಹೋಗಬಹುದು ನೀವು ಎಚ್ಚರಿಕೆಯಿಂದಿರಿ ಎಂಬ ಸಂದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರವಾನೆ ಮಾಡಿದೆ.
ಪಕ್ಷದ ಕೆಲವು ಶಾಸಕರು ಮತ್ತು ಸಚಿವರನ್ನು ಗೋವಾ ಹಾಗೂ ಮಹಾರಾಷ್ಟ್ರದ ಎನ್‌ಡಿಎ ಕೂಟದ ಮುಖಂಡರುಗಳು ಸಂಪರ್ಕದಲ್ಲಿರಿಸಿಕೊಂಡಿದ್ದಾರೆ.
ನೀವು 80ಕ್ಕೂ ಹೆಚ್ಚು ಶಾಸಕರಿಗೆ ಸಂಪುಟ ದರ್ಜೆಯ ವಿವಿಧ ಹುದ್ದೆಗಳನ್ನು ನೀಡಿದ್ದರೂ ಅವರಲ್ಲೂ ಅಸಮಾಧಾನಿತರಿರಬಹುದು, ಜೊತೆಗೆ ಅಧಿಕಾರ ದೊರೆಯದವರೂ ಹುದ್ದೆಗೆ ಪರಿತಪಿಸಬಹುದು.
ಶಾಸಕರ ಬೇಡಿಕೆ ಈಡೇರಿಸಿ
ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಜೊತೆಗೆ ಅವರ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಂದೇಶ ಬಂದಿದೆ.
ಇದರ ಬೆನ್ನಲ್ಲೇ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಇಲಾಖಾ ಪ್ರಧಾನಕಾರ್ಯದರ್ಶಿಗಳ ಜೊತೆ ಅನೌಪಚಾರಿಕ ಸಭೆ ನಡೆಸಿ, ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಿ ಎಂದಿದ್ದಾರೆ.
ಚುನಾವಣಾ ಮಾದರಿ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಆದೇಶಗಳು ಹೊರಬರಲಿವೆ ಮತ್ತು ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಿ ಎಂದು ಸಲಹೆ ಮಾಡಿದ್ದಾರೆ.
ಶಾಸಕರ ನಿಧಿಗೆ ಹಣ ಇಲ್ಲ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಐದು ಗ್ಯಾರಂಟಿಗಳ ಅನುಷ್ಟಾನಕ್ಕೆ ಒತ್ತು ನೀಡಿದ್ದರಿಂದ ಶಾಸಕರ ನಿಧಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡಲು ಸಾಧ್ಯವಾಗಲಿಲ್ಲ.
ಇದನ್ನು ಅರಿತ ಮುಖ್ಯಮಂತ್ರಿ ಅವರು, ಕಳೆದ ಮುಂಗಡಪತ್ರದಲ್ಲಿ ಒಂದು ಲಕ್ಷ ಕೋಟಿ ರೂ. ಸಾಲ ಪಡೆದು ಗ್ಯಾರಂಟಿ ಯೊಜನೆಗಳನ್ನು ಮುಂದುವರಿಸುವುದರ ಜೊತೆಗೆ ಅಭಿವೃದ್ಧಿ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಅಷ್ಟೇ ಅಲ್ಲ 3 ಲಕ್ಷ ಕೋಟಿ ರೂ.ನಷ್ಟು ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿಯೂ ಹೇಳಿದ್ದಾರೆ.
ಅವರು ಬಜೆಟ್ ಮಂಡನೆ ಮಾಡಿ ಅನುಮೋದನೆ ಪಡೆಯುತ್ತಿದ್ದಂತೆ ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡಿತು.
ಕ್ಷೇತ್ರಕ್ಕೆ ಹಣ ಇಲ್ಲ
ಇದರಿಂದ ಬಜೆಟ್‌ನ ಕಾರ್ಯಕ್ರಮಗಳು ಆದೇಶದ ರೂಪದಲ್ಲಿ ಹೊರಬರಲು ಸಾಧ್ಯವಾಗಲಿಲ್ಲ, ಅಭಿವೃದ್ಧಿ ಆಗುತ್ತಿಲ್ಲ, ಕ್ಷೇತ್ರಕ್ಕೆ ಹಣ ನೀಡುತ್ತಿಲ್ಲ ಎಂಬ ಅಸಮಾಧಾನ ಶಾಸಕರಲ್ಲಿ ವ್ಯಾಪಕವಾಗಿ ಕೇಳಿಬಂದಿದೆ.
ಇದು ನಮಗೆ ಮುಳುವಾಗಬಾರದೆಂಬ ಉದ್ದೇಶದಿಂದ ಮುಖ್ಯಮಂತ್ರಿ ಅವರು ಅಧಿಕಾರಿಗಳ ಜೊತೆ ಅನೌಪಚಾರಿಕೆ ಸಭೆ ನಡೆಸಿ ಹಣ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಿ ಎಂದಿದ್ದಾರೆ.