ಬೆಂಗಳೂರು:ಸಂಸದ ಪ್ರಜ್ವಲ್ ರೇವಣ್ಣ ತಪ್ಪೆಸಗಿರುವುದು ಸಾಬೀತಾದರೆ ಕಾನೂನು ಪ್ರಕಾರ ಕ್ರಮ ಜರುಗಿಸಲಿ, ಅದಕ್ಕೆ ನಮ್ಮ ಆಕ್ಷೇಪ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದಿಲ್ಲಿ ತಿಳಿಸಿದ್ದಾರೆ.
ಜೆ.ಪಿ.ನಗರದ ಶ್ರೀನಿವಾಸ ದೇವಸ್ಥಾನದಲ್ಲಿ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ದೇವರಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯವನ್ನು ಮುಂದಿಟ್ಟುಕೊಂಡು ಇಲ್ಲದ ಕಟ್ಟು ಕತೆಗಳನ್ನು ಕಟ್ಟಿ ನಮ್ಮ ಕುಟುಂಬವನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ನಡೆದಿದೆ.
ತಪ್ಪು ಮಾಡಿದ್ರೆ ಶಿಕ್ಷೆಗೆ ಒಳಪಡಲಿ
ಇಂತಹ ಷಡ್ಯಂತ್ರಗಳನ್ನು ಎದುರಿಸುವ ಶಕ್ತಿಯನ್ನು ಭಗವಂತ ನೀಡಿದ್ದಾನೆ, ಪ್ರಜ್ವಲ್ ಆರೋಪಕ್ಕೆ ಸಂಬಂಧಿಸಿದಂತೆ ನಮ್ಮ ತಕರಾರಿಲ್ಲ, ಆ ಬಗ್ಗೆ ತನಿಖೆ ನಡೆಯುತ್ತಿದೆ, ಅವನು ತಪ್ಪು ಮಾಡಿದ್ರೆ ಶಿಕ್ಷೆಗೆ ಒಳಪಡಲಿ ಎಂದರು.
ಪ್ರಜ್ವಲ್ ಮತ್ತು ರೇವಣ್ಣ ಪ್ರಕರಣದ ನಂತರ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡ ದೇವೇಗೌಡರು, ಸುದ್ದಿಗಾರರ ಪ್ರಶ್ನೆಗಳಿಗೂ ಚುಟುಕಾಗಿ ಉತ್ತರಿಸಿದರು.
ನಮ್ಮ ವಿರುದ್ಧ ರಾಜಕೀಯ ಸೇಡು
ರೇವಣ್ಣ ಪ್ರಕರಣವನ್ನು ಸೃಷ್ಠಿಸಿ ನಮ್ಮ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ, ಅವರು ಯಾರೆಂಬುದು ನಮಗೆ ಗೊತ್ತಿದೆ, ಆ ಬಗ್ಗೆ ಈಗ ಮಾತನಾಡುವುದಿಲ್ಲ, ಮುಂದೆ ಸಮಯ ಬಂದಾಗ ತಿಳಿಸುತ್ತೇನೆ ಎಂದರು.
ರೇವಣ್ಣ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ನಾನು ಹೆಚ್ಚಿಗೆ ಮಾತನಾಡುವುದಿಲ್ಲ, ಪ್ರಜ್ವಲ್ ಪ್ರಕರಣವನ್ನು ನಾವು ವಹಿಸಿಕೊಂಡು ಮಾತನಾಡುವುದಿಲ್ಲ, ಆದರೆ ರೇವಣ್ಣ ಪ್ರಕರಣ ಒಂದು ಕಟ್ಟುಕತೆ.
ಪ್ರಜ್ವಲ್ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಕುಟುಂಬದ ಪರವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ, ಇನ್ನು ರೇವಣ್ಣ ವಿಷಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ, ನಾನು ಆ ಬಗ್ಗೆ ಹೆಚ್ಚು ಮಾತನಾಡುವುದು ಸೂಕ್ತ ಅಲ್ಲ ಎಂದರು.
ಕಾನೂನಿನ ಚೌಕಟ್ಟಿನಡಿ ಕ್ರಮ
ಪ್ರಜ್ವಲ್ ಹೊರಗೆ ಹೋಗಿದ್ದಾನೆ, ಆತನ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ, ಘಟನೆ ಬಗ್ಗೆ ಈ ನೆಲದ ಕಾನೂನಿನ ಚೌಕಟ್ಟಿನಡಿ ಏನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳಲಿ, ಅದಕ್ಕೆ ನಮ್ಮ ಆಕ್ಷೇಪ ಇಲ್ಲ.
ಪ್ರಜ್ವಲ್ ಪ್ರಕರಣದಲ್ಲಿ ಅನೇಕ ಮಂದಿ ಇದ್ದಾರೆ, ನಾನು ಅವರ ಹೆಸರುಗಳನ್ನು ಹೇಳುವಂತಹವನಲ್ಲ, ಅನ್ಯಾಯಕ್ಕೆ ಒಳಗಾಗಿರುವ ಸಂತ್ರಸ್ತೆಯರಿಗೆ ಪರಿಹಾರ ನೀಡಬೇಕು, ಈ ಎಲ್ಲಾ ವಿಚಾರಗಳ ಬಗ್ಗೆ ಕುಮಾರಸ್ವಾಮಿ ಬಿಡಿಸಿ.., ಬಿಡಿಸಿ ಹೇಳಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಕೀಲ ದೇವರಾಜೇಗೌಡ ಮಾಡಿರುವ ಆರೋಪಕ್ಕೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹೋರಾಡುವ ಛಲ ಇದೆ
ಎಲ್ಲಾ ವಿಚಾರಗಳ ಬಗ್ಗೆ ಕುಮಾರಸ್ವಾಮಿ ಉತ್ತರ ನೀಡಿದ್ದಾರೆ, ನಮ್ಮ ವಿರುದ್ಧ ಎಂತಹ ಆರೋಪ ಬಂದರೂ ನಮಗೆ ಹೋರಾಟ ಮಾಡುವ ಛಲ ಇದೆ.
ಜೂನ್ 4ರಂದು ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳುತ್ತದೆ, ಆ ನಂತರ ಸಾಕಷ್ಟು ವಿಷಯಗಳ ಬಗ್ಗೆ ನಿಮ್ಮ ಮುಂದಿಡುತ್ತೇನೆ ಎಂದರು.
ಪ್ರಧಾನಿ ಶುಭ ಹಾರೈಕೆ
ತೊಂಭತ್ತೊಂದನೇ ವರ್ಷ ಪೂರ್ಣಗೊಳಿಸಿ 92ಕ್ಕೆ ಕಾಲಿರಿಸಿರುವ ದೇವೇಗೌಡರಿಗೆ ಪ್ರಧಾನಿ ನರೇಂದ್ರ ಮೋದಿ ಅವರು, ಎಕ್ಸ್ ಖಾತೆ ಮೂಲಕ ಶುಭ ಕೋರಿರುವುದಲ್ಲದೆ, ರೈತನ ಮಗನಿಗೆ ತಮ್ಮ ಕಾರ್ಯಕರ್ತನ ಮೂಲಕ ಹಲಸಿನಹಣ್ಣು ಕಳುಹಿಸಿಕೊಟ್ಟಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನಿ ಅವರು, ಗೌಡರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ, ನಿಮ್ಮ ಸೇವೆ ಗಣನೀಯವಾಗಿದ್ದು, ರಾಜಕೀಯ ವಲಯದಲ್ಲಿ ಅತ್ಯಂತ ಗೌರವದಿಂದ ಕಾಣಲಾಗುತ್ತದೆ.
ಪ್ರಧಾನಿ ಅವರು ಪಕ್ಷದ ಕಾರ್ಯಕರ್ತನ ಮೂಲಕ ಕಳುಹಿಸಿಕೊಟ್ಟ ಹಲಸಿನ ಹಣ್ಣನ್ನು ದೇವೇಗೌಡರು, ತಮ್ಮ ಮೂಗಿನ ಬಳಿ ಇಟ್ಟುಕೊಂಡು ಆಸ್ವಾದಿಸಿದರು.