ಬೆಂಗಳೂರು:ಗ್ರಾಮೀಣ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಆದ್ಯತೆ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, 548 ಗ್ರಾಮಗಳಿಗೆ 846 ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿದೆ, 1,659 ಗ್ರಾಮಗಳಿಗೆ ನೀರು ಸರಬರಾಜು ಕಲ್ಪಿಸಲು 2,098 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯಲಾಗಿದೆ ಎಂದಿದ್ದಾರೆ.
2,207 ಗ್ರಾಮಗಳಲ್ಲಿ ನೀರಿನ ಸಮಸ್ಯೆ
ಗ್ರಾಮೀಣ ನೀರು ಸರಬರಾಜು ಇಲಾಖೆ ಸಮಸ್ಯೆ ಬಗ್ಗೆ ನಿಗಾ ವಹಿಸುತ್ತಿದ್ದು, ರಾಜ್ಯದಲ್ಲಿ ಪ್ರಸ್ತುತ ಬರ ಪರಿಸ್ಥಿತಿಯ ಪರಿಣಾಮ 158 ತಾಲೂಕುಗಳಿಗೆ ಸಂಬಂಧಿಸಿದ 26,106 ಗ್ರಾಮಗಳ ಪೈಕಿ 2,207 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ನಿಧಿ ಅಡಿ ಲಭ್ಯವಿರುವ ಅನುದಾನವನ್ನು ಆದ್ಯತೆ ಮೇಲೆ ಬಳಸಿಕೊಳ್ಳಲಾಗುತ್ತದೆ, ತೊಂದರೆಗೀಡಾದ ಪ್ರದೇಶಗಳಲ್ಲಿ ಕಾಮಗಾರಿ ಕೈಗೊಳ್ಳಲು 2024-25ನೇ ಸಾಲಿಗೆ 20 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಬಹುಗ್ರಾಮ ಯೋಜನೆ ಮೂಲಕ 6,828 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ, 37 ಬಹುಗ್ರಾಮ ಯೋಜನೆಗಳ ಜಲಮೂಲಗಳು ಕಳೆದ 7 ದಿನಗಳಲ್ಲಿ ಒಣಗಿದ್ದು, ಈ ಗ್ರಾಮಗಳಿಗೆ ಟ್ಯಾಂಕರ್ ಮತ್ತು ಬಾಡಿಗೆ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ ಎಂದಿದ್ದಾರೆ.