ಬೆಂಗಳೂರು:ಪೆನ್‌ಡ್ರೈವ್ ಪ್ರಕರಣಕ್ಕೂ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಯಾವ ನಾಯಕರಿಗೂ ಯಾವುದೇ ಸಂಬಂಧ ಇಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.
ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಮಾಡಿರುವ ಆರೋಪದ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿದ ಚಲುವರಾಯಸ್ವಾಮಿ, ನಮಗೆ ಈ ಪೆನ್‌ಡ್ರೈವ್‌ನಿಂದ ಯಾವುದೇ ರಾಜಕೀಯ ಲಾಭವಿಲ್ಲ.
ಪೆನ್‌ಡ್ರೈವ್ ಅಸ್ತ್ರ
ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಿಂದ ಬೇರೆಡೆಗೆ ಗಮನ ಸೆಳೆಯಲು ಪೆನ್‌ಡ್ರೈವ್ ಅಸ್ತ್ರ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದರು.
ಪೆನ್‌ಡ್ರೈವ್ ಬಹಿರಂಗಗೊಂಡಿದ್ದರ ಬಗ್ಗೆ ನಮಗೆ ನೋವಾಗಿದೆ, ಈ ರೀತಿ ಆಗಬಾರದಿತ್ತು, ಗೌಡರ ಕುಟುಂಬದವರು ಪ್ರಜ್ವಲ್‌ನನ್ನು ಕರೆಸಿ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ದೇವರಾಜೇಗೌಡ ಮಾಡಿರುವ ಆರೋಪ ಸಾಬೀತುಪಡಿಸಿದರೆ, ನಾನು ಬೇಷರತ್ ಕ್ಷಮೆ ಯಾಚಿಸಲು ಸಿದ್ಧನಿದ್ದೇನೆ.
ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು
ಮೊದಲಿನಿಂದಲೂ ಈತನಿಗೂ ರೇವಣ್ಣ ಕುಟುಂಬಕ್ಕೂ ವೈಷಮ್ಯವಿತ್ತು, ಆತನೇ ಹೇಳುವಂತೆ ಒಂದು ವರ್ಷದ ಹಿಂದಿನಿಂದಲೇ ಪೆನ್‌ಡ್ರೈವ್ ಆತನ ಬಳಿ ಇತ್ತು ಎಂದಿದ್ದಾನೆ, ಅದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬಹುದಿತ್ತಲ್ಲವೇ ಎಂದರು.
ಈ ಪ್ರಕರಣದಲ್ಲಿ ನಾನು ಭಾಗಿಯಾಗಿಲ್ಲ, ನನ್ನ ಸಹೋದ್ಯೋಗಿಗಳಾದ ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ಪಾತ್ರವೂ ಇಲ್ಲ, ಎಲ್ಲಕ್ಕಿಂತ ಮಿಗಿಲಾಗಿ ಉಪಮುಖ್ಯಮಂತ್ರಿ ಶಿವಕುಮಾರ್‌ಗೂ ಇದಕ್ಕೂ ಸಂಬಂಧವೇ ಇಲ್ಲ.
ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಪ್ರಜ್ವಲ್, ಕಾರ್ತಿಕ್ ಹಾಗೂ ದೇವರಾಜೇಗೌಡ ಪ್ರಮುಖ ಆರೋಪಿಗಳು, ಅವರನ್ನು ತನಿಖೆಗೆ ಒಳಪಡಿಸಿದರೆ ಸತ್ಯ ಹೊರಬರುತ್ತದೆ ಎಂದರು.
ಅನಗತ್ಯ ಚರ್ಚೆಗಳು ಏಕೆ
ಮೂಲ ಪ್ರಶ್ನೆ ಇರುವುದು ಪ್ರಜ್ವಲ್ ರೇವಣ್ಣ ಹೆಣ್ಣು ಮಕ್ಕಳನ್ನು ದುರುಪಯೋಗಪಡಿಸಿಕೊಂಡಿರುವುದು, ಎರಡನೆಯದು ವಿಡಿಯೊವನ್ನು ರೆಕಾರ್ಡ್ ಮಾಡಿಕೊಂಡಿರುವುದು, ಮೂರನೆಯದು ಅದು ಎಲ್ಲಿಂದ, ಯಾರ ಮೂಲಕ ಬಹಿರಂಗವಾಯಿತು ಎಂಬುದು, ಈ ನಿಟ್ಟಿನಲ್ಲಿ ತನಿಖೆ ನಡೆಯಬೇಕೇ ಹೊರತು ಇದರ ನಡುವೆ ನೂರು ಕೋಟಿ ರೂ. ಡೀಲು, ಸರ್ಕಾರ ಪತನ.., ಈ ಅನಗತ್ಯ ಚರ್ಚೆಗಳು ಏಕೆ ಎಂದು ಪ್ರಶ್ನಿಸಿದರು.
ರೇವಣ್ಣ ಅವರ ಬಗ್ಗೆ ಎಲ್ಲರಿಗೂ ಗೌರವವಿದೆ, ಮಹಿಳೆ ಅಪಹರಣ ಪ್ರಕರಣದಲ್ಲಿ ಅವರ ಬಂಧನವಾಗಿದೆ, ಇಲ್ಲದೇ ಇದ್ದಿದ್ದರೆ ರೇವಣ್ಣ ಅವರಿಗೆ ಕಾನೂನಿನ ತೊಡಕಾಗುತ್ತಿರಲಿಲ್ಲ, ಈಗಲೂ ಕುಮಾರಸ್ವಾಮಿಯವರು ಪ್ರಕರಣದ ಬಗ್ಗೆ ಪದೇ ಪದೇ ಕೆಣಕಿ ಮಾತನಾಡುವುದನ್ನು ನಿಲ್ಲಿಸಿದರೆ ತನಿಖೆಯ ಪಾಡಿಗೆ ತನಿಖೆ ನಡೆಯುತ್ತದೆ.
ಡಿ.ಕೆ.ಶಿವಕುಮಾರ್ ಅವರು ಹೇಳಿಕೆ ನೀಡುವಾಗ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.