ಬೆಂಗಳೂರು:ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದ ವಿದ್ಯುತ್ ಅಭಾವ ನೀಗಿದೆ.
ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಅಗಾಧವಾಗಿ ಹೆಚ್ಚಿತ್ತು.
ಗೃಹಜ್ಯೋತಿ ಯೋಜನೆ ಅನುಷ್ಟಾನ ಹಾಗೂ ಮಳೆ ಅಭಾವದಿಂದ ರಾಜ್ಯದಲ್ಲಿ 17 ಸಾವಿರ ಮೆಗಾವ್ಯಾಟ್‌ವರೆಗೂ ಬೇಡಿಕೆ ಹೆಚ್ಚಿ ದಾಖಲೆ ಸ್ಥಾಪಿಸಿತ್ತು.
ಅಗಾಧ ವಿದ್ಯುತ್ ಬೇಡಿಕೆ
ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಅಗಾಧ ವಿದ್ಯುತ್ ಬೇಡಿಕೆ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.
ಈ ಸಂದರ್ಭಲ್ಲಿ ಬೇಡಿಕೆ ಈಡೇರಿಸದಿದ್ದರೆ, ಆಡಳಿತಾರೂಢ ಕಾಂಗ್ರೆಸ್‌ಗೆ ಹಿನ್ನಡೆ ಉಂಟಾಗುತ್ತಿತ್ತು, ಇದನ್ನು ತಪ್ಪಿಸಲು ಮತ್ತು ಬೇಡಿಕೆ ಸರಿದೂಗಿಸಲು ವಿದ್ಯುತ್ ಹೆಚ್ಚು ಉತ್ಪಾದಿಸುವ ರಾಜ್ಯಗಳಿಂದ ಖರೀದಿಗೆ ಮುಂದಾಯಿತು.
ಛತ್ತೀಸ್‌ಘಡ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಗಣನೀಯ ಪ್ರಮಾಣದಲ್ಲಿ ರಾಜ್ಯ ಸರ್ಕಾರ ವಿದ್ಯುತ್ ಖರೀದಿ ಮಾಡಿತು, ಇಷ್ಟಾಗ್ಯೂ ಮೇ, ಜೂನ್ ಪರಿಸ್ಥಿತಿ ನಿಭಾಯಿಸಲಾಗದ ಕಷ್ಟಕ್ಕೆ ಸಿಲುಕಿತ್ತು.
ಗೃಹ ಬಳಕೆ, ರೈತರ ಪಂಪ್‌ಸೆಟ್, ಕೈಗಾರಿಕಾ ವಲಯಗಳ ಬೇಡಿಕೆ ಪ್ರಮಾಣ ಪೂರೈಸಲು ಸಾಧ್ಯವಾಗದ ಸ್ಥಿತಿಗೆ ಸರ್ಕಾರ ತಲುಪಿತ್ತು.
ನೀರಿನ ಸಂಗ್ರಹ ಕುಸಿತ
ಮುಂಗಾರು ಕೈಕೊಟ್ಟಿದ್ದರಿಂದ ಲಿಂಗನಮಕ್ಕಿ ಸೇರಿದಂತೆ ಪ್ರಮುಖ ಜಲವಿದ್ಯುತ್ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಪ್ರಮಾಣ ತೀರಾ ಕುಸಿದಿತ್ತು.
ಶಾಖೋತ್ಪನ್ನ ಸ್ಥಾವರಗಳಿಂದ ಹೆಚ್ಚಿನ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಿದ ಸರ್ಕಾರ, ಮೇ, ಜೂನ್ ತಿಂಗಳಲ್ಲಿ ವಿದ್ಯುತ್ ಬೇಡಿಕೆ ತೀವ್ರವಾಗಿ ಹೆಚ್ಚಾಗುವ ನಿರೀಕ್ಷೆ ಹಿನ್ನೆಲೆಯಲ್ಲಿ ಈ ತಿಂಗಳುಗಳಲ್ಲಿ ಜಲವಿದ್ಯುತ್ ಘಟಕಗಳಿಂದ ಹೆಚ್ಚು ಉತ್ಪಾದನೆ ನಿರೀಕ್ಷಿಸಲಾಗಿತ್ತು.
ಹೊರ ರಾಜ್ಯಗಳಿಂದ ಖರೀದಿಸುವ ವಿದ್ಯುತ್ ಪ್ರಮಾಣವನ್ನೂ ಹೆಚ್ಚಿಸಲು ಕೆಲವು ರಾಜ್ಯಗಳೊಂದಿಗೆ ಮಾತುಕತೆ ನಡೆಸಲು ಇಂಧನ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಸಹಾ ರವಾನೆಯಾಗಿತ್ತು.
3,000 ಮೆಗಾವ್ಯಾಟ್‌ಗಳಷ್ಟು ಬೇಡಿಕೆ ಕುಸಿತ
ಕಳೆದ ಕೆಲವು ದಿನಗಳಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿದ್ದು, ಕೃಷಿ ಪಂಪ್‌ಸೆಟ್ ಮತ್ತು ಗೃಹ ಬಳಕೆ ವಿದ್ಯುತ್ ಬೇಡಿಕೆ ಪ್ರಮಾಣದಲ್ಲಿ ಸುಮಾರು 3,000 ಮೆಗಾವ್ಯಾಟ್‌ಗಳಷ್ಟು ಕುಸಿತವಾಗಿದೆ.
ಜೂನ್‌ನಲ್ಲಿ ಆರಂಭವಾಗಲಿರುವ ಮುಂಗಾರು ವಾಡಿಕೆಯಂತೆ ಇರಲಿದೆ, ಜೂನ್ ಮೊದಲ ವಾರ ಕೇರಳಕ್ಕೆ ಮುಂಗಾರು ಪ್ರವೇಶ ನಿರೀಕ್ಷಿಸಲಾಗಿದೆ, ಕಳೆದ ವರ್ಷದಂತೆ ಈ ವರ್ಷ ಮಳೆ ಕೊರತೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.