ಪ್ರಜ್ವಲ್ ಪ್ರಕರಣ ಕುರಿತ ಹೇಳಿಕೆ
ಬೆಂಗಳೂರು:ನಾಲ್ಕು ನೂರು ಮಹಿಳೆಯರ ಮೇಲೆ ಸಂಸದ ಪ್ರಜ್ವಲ್ ರೇವಣ್ಣ ಮಾಸ್ ರೇಪ್ ಮಾಡಿದ್ದಾರೆ ಎಂದು ಬಹಿರಂಗ ಸಭೆಗಳ ಭಾಷಣದಲ್ಲಿ ಆರೋಪಿಸಿದ್ದ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಜೆಡಿಎಸ್ ಇಂದಿಲ್ಲಿ ದೂರು ನೀಡಿದೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಹುಲ್ ಗಾಂಧಿ ಅವರು ಶಿವಮೊಗ್ಗ ಹಾಗೂ ರಾಯಚೂರಿನಲ್ಲಿ ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆಗಳಲ್ಲಿ ಮಾಸ್‌ರೇಪ್ ಬಗ್ಗೆ ಹೇಳಿದ್ದರು, ಇದೇ ಮಾಹಿತಿಯನ್ನು ಮಾಧ್ಯಮಗಳ ಮುಂದೆಯೂ ನೀಡಿದ್ದಾರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಎಸ್‌ಐಟಿ ಸಮನ್ಸ್ ನೀಡಬೇಕು ಎಂದು ಜೆಡಿಎಸ್ ಒತ್ತಾಯ ಮಾಡಿದೆ.
ಪೊಲೀಸ್ ಡಿಜಿಪಿಗೆ ದೂರು
ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಮಂಜೇಗೌಡ, ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ.ರಂಗನಾಥ್, ಬೆಂಗಳೂರು ನಗರದ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ರಮೇಶ್ ಅವರ ನಿಯೋಗ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದೆ.
ಕಾಂಗ್ರೆಸ್ ನಾಯಕ ಹಾಗೂ ವಯನಾಡು ಲೋಕಸಭಾ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಅವರು, ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಮಾಸ್ ರೇಪ್ ಮಾಡಿ, ಅದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ, ಇದು ಕೇವಲ ಅತ್ಯಾಚಾರ ಅಷ್ಟೇ ಅಲ್ಲ, ಇದೊಂದು ಸಾಮೂಹಿಕ ಅತ್ಯಾಚಾರ, ಒಬ್ಬ ಮಾಸ್ ರೇಪಿಸ್ಟ್ ಪರ ಪ್ರಧಾನಿ ನರೇಂದ್ರ ಮೋದಿ ಅವರು ಮತ ಯಾಚಿಸಿರುವುದು ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಮೇ 2ರಂದು ಹೇಳಿಕೆ ನೀಡಿದ್ದರು.
ರಾಹುಲ್ ಗಾಂಧಿ ಅವರ ಹೇಳಿಕೆ, ಭಾಷಣ ಎಲ್ಲವೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ, ಮುದ್ರಣ ಮಾಧ್ಯಮದಲ್ಲಿಯೂ ವರದಿಯಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದ್ದು, ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಜೆಡಿಎಸ್ ಸಲ್ಲಿಸಿದೆ.
ಜನಪ್ರತಿನಿಧಿಯಾಗಿ ಸಲ್ಲದ ಹೇಳಿಕೆ
ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸುವುದರ ಬಗ್ಗೆ ಮಾತನಾಡದೆ, ಒಬ್ಬ ಜನಪ್ರತಿನಿಧಿಯಾಗಿ ರಾಹುಲ್ ಗಾಂಧಿ ಅವರು ಇಂಥ ಹೇಳಿಕೆ ನೀಡಿರುವುದು ಕಾನೂನು ಉಲ್ಲಂಘನೆಯಾಗಿದೆ, ನಾಲ್ಕು ನೂರು ಮಹಿಳೆಯರ ಮೇಲೆ ಮಾಸ್ ರೇಪ್ ಆಗಿರುವ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಎಲ್ಲಾ ಮಾಹಿತಿ ಇದೆ ಹಾಗೂ ಅತ್ಯಾಚಾರಕ್ಕೆ ತುತ್ತಾದ ಅಷ್ಟೂ ಮಹಿಳೆಯರ ಮಾಹಿತಿ ಅವರಲ್ಲಿ ಇದೆ ಎನ್ನುವುದು ಅವರದೇ ಹೇಳಿಕೆಯಿಂದ ಸ್ಪಷ್ಟವಾಗಿದೆ.
ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 1860ರ ಅಡಿ ಕೇಸ್ ದಾಖಲಿಸಬೇಕು ಎಂದು ಜೆಡಿಎಸ್ ಒತ್ತಾಯಿಸಿದೆ.
ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದ್ದು, ಈ ತಂಡ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿ ಕರೆಸಬೇಕು.
ನಾಲ್ಕು ನೂರು ಮಹಿಳೆಯರ ರೇಪ್ ಎಂಬುದಾಗಿ ಹೇಳಿದ್ದು ಸಮಾಜಕ್ಕೆ ಕೆಟ್ಟ ಸಂದೇಶ ಹೋಗುವಂತೆ ಮಾಡಿದ್ದಾರೆ, ಅವರ ವಿರುದ್ಧ ಕೂಡಲೇ ಸೆಕ್ಷನ್ 202, 1860ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.
ಪೆನ್‌ಡ್ರೈವ್ ಏಕಪಕ್ಷೀಯ ತನಿಖೆ
ಅಲ್ಲದೆ, ಪೆನ್‌ಡ್ರೈವ್ ಹಂಚಿಕೆ ಬಗ್ಗೆ ಜೆಡಿಎಸ್ ಆಯೋಗ ಮಾತನಾಡಿ, ಎಸ್‌ಐಟಿ ಏಕಪಕ್ಷೀಯ ತನಿಖೆ ನಡೆಸುತ್ತಿದೆ, ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಕಾರ್ಯಕರ್ತರಿಗೆ ವಿನಾಕಾರಣ ಕಿರುಕುಳ ನೀಡುತ್ತಿದೆ.
ಪೆನ್ ಡ್ರೈವ್ ಹಂಚಿದ ಆರೋಪಿಗಳ ಬಗ್ಗೆ ಮೌನ ವಹಿಸಿದೆ, ನ್ಯಾಯಾಲಯ ಜಾಮೀನು ನಿರಾಕರಿಸಿದ್ದರೂ ಈವರೆಗೂ ಅವರನ್ನು ಎಸ್‌ಐಟಿ ಬಂಧನ ಮಾಡಿಲ್ಲ ಎಂದು ಜೆಡಿಎಸ್ ತಿಳಿಸಿದೆ.