ಬೆಂಗಳೂರು:ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಜೂನ್ 13ರಂದು ನಡೆಯಲಿರುವ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ, ಸಚಿವ ಎನ್.ಎಸ್.ಬೋಸರಾಜು, ಬಿಜೆಪಿಯಿಂದ ಅಶೋಕ್ ಹಾರ್ನಳ್ಳಿ, ರವಿಕುಮಾರ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಪರಿಷತ್ತಿನ ಹನ್ನೊಂದು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ 7, ಬಿಜೆಪಿಗೆ 3 ಮತ್ತು ಜೆಡಿಎಸ್‌ಗೆ 1 ಸ್ಥಾನ ಸಿಗುವುದು ನಿಶ್ಚಿತವಾಗಿದ್ದು, ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಟಿಕೆಟ್‌ಗಾಗಿ ಮೂರೂ ಪಕ್ಷಗಳಲ್ಲಿ ಬಿರುಸಿನ ಲಾಬಿ ಆರಂಭವಾಗಿದೆ.
ನೂರಕ್ಕೂ ಹೆಚ್ಚು ಆಕಾಂಕ್ಷಿ
ಆಡಳಿತಾರೂಢ ಕಾಂಗ್ರೆಸ್‌ನಲ್ಲಂತೂ ಏಳು ಸ್ಥಾನಗಳಿಗೆ ನೂರಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಪ್ರತಿಪಕ್ಷ ಬಿಜೆಪಿಗೆ ಮೂರು ಸ್ಥಾನ ದಕ್ಕಲಿದ್ದು, ಇದಕ್ಕಾಗಿ 10 ಮಂದಿ ಪ್ರಬಲ ಪೈಪೋಟಿ ನಡೆಸಿದ್ದಾರೆ.
ಇನ್ನು ಜೆಡಿಎಸ್‌ಗೆ ಒಂದು ಸ್ಥಾನ ದೊರೆಯಲಿದ್ದು ಅದಕ್ಕೆ ನಾಲ್ವರು ಭಾರೀ ಪ್ರಬಲರೇ ಪೈಪೋಟಿ ನಡೆಸಿದ್ದು, ಮೂರೂ ಪಕ್ಷಗಳು ಇನ್ನೂ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅಭ್ಯರ್ಥಿಗಳ ಆಯ್ಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಇಂದು ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆ ಬೋಜನಕೂಟದಲ್ಲಿ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.
ಬಹುತೇಕರಿಗೆ ಮತ್ತೆ ಟಿಕೆಟ್
ಪರಿಷತ್ ಸದಸ್ಯತ್ವದಿಂದ ನಿವೃತ್ತಿ ಹೊಂದುತ್ತಿರುವ ಬಹುತೇಕರಿಗೆ ಮತ್ತೆ ಟಿಕೆಟ್ ದೊರೆಯುವ ಸಾಧ್ಯತೆ ಇಲ್ಲ.
ಇನ್ನು ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಸಂಪುಟದ ಸದಸ್ಯರಾಗಿರುವ ಎನ್.ಎಸ್.ಬೋಸರಾಜು ಅವರ ಸದಸ್ಯತ್ವ ಅವಧಿ ಮುಕ್ತಾಯವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಅವರನ್ನು ಪುನಃ ವಿಧಾನಪರಿಷತ್ತಿನ ಕಣಕ್ಕಿಳಿಸುವುದು ಖಚಿತವಾಗಿದೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು ಅವರ ಸದಸ್ಯತ್ವದ ಅವಧಿ ಮುಕ್ತಾಯವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಮತ್ತೊಂದು ಅವಧಿಗೆ ಮುಂದುವರಿಯಲು ಅವರು ಬಯಸಿದ್ದಾರೆ.
ಸಿದ್ದರಾಮಯ್ಯ ತಮ್ಮ ಪುತ್ರನ ಬದಲು ಪಕ್ಷದ ಕಾರ್ಯಕರ್ತ ವಿಜಯಕುಮಾರ್ (ಮೈಸೂರು) ಅವರಿಗೆ ಒಕ್ಕಲಿಗ ಕೋಟಾದಿಂದ ನೀಡುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ಸಲಹೆ ಮಾಡಿದ್ದಾರೆ.
ಶಿವಕುಮಾರ್ ಪಟ್ಟು
ಆದರೆ, ಶಿವಕುಮಾರ್ ತಮ್ಮ ರಾಜಕೀಯ ದೂರದೃಷ್ಟಿಯಿಂದ ಡಾ.ಯತೀಂದ್ರ ಅವರನ್ನೇ ಪರಿಷತ್ತಿಗೆ ಅಭ್ಯರ್ಥಿ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಇದೇ ರೀತಿ ನಟರಾಜ್ ಗೌಡ, ಚಾಮರಾಜನಗರದ ನರೇಂದ್ರ, ಬಿ.ಎಲ್.ಶಂಕರ್ ಸೇರಿದಂತೆ ಹಲವು ಮಂದಿ ಕಾಂಗ್ರೆಸ್ ಟಿಕೆಟ್‌ಗಾಗಿ ಲಾಬಿ ನಡೆಸಿದ್ದು, ಈ ಮಧ್ಯೆ ಜಾತಿ, ಪ್ರದೇಶಾವಾರು ಪ್ರಾತಿನಿಧ್ಯ ನೀಡಲು ಕಾಂಗ್ರೆಸ್ ಕಸರತ್ತು ಆರಂಭಿಸಿದೆ.
ಕುರುಬ, ಒಕ್ಕಲಿಗ, ಲಿಂಗಾಯತ, ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತ ಮತ್ತು ಮಹಿಳೆಗೆ ಪ್ರಾತಿನಿಧ್ಯ ನೀಡಲು ನಿರ್ಧರಿಸಿರುವ ಕಾಂಗ್ರೆಸ್ ಟಿಕೆಟ್ ನೀಡುವ ಸಂಬಂಧ ಮೇ 27ರಂದು ಅಭ್ಯರ್ಥಿಗಳ ಆಯ್ಕೆ ನಡೆಸಲಿದೆ.
ಮೇ 29 ನಂತರ ಅಂತಿಮ ಪಟ್ಟಿ
ಈ ಚರ್ಚೆಯ ನಂತರ ವಿಧಾನಪರಿಷತ್ತಿನಲ್ಲಿ ಸ್ಪರ್ಧಿಸಲಿರುವ ಪಕ್ಷದ ಅಭ್ಯರ್ಥಿಗಳ ಪಟ್ಟಿ ತಯಾರಾಗಲಿದ್ದು ಮೇ 29 ರಂದು ದಿಲ್ಲಿಯಲ್ಲಿ ನಡೆಯಲಿರುವ ಚರ್ಚೆಯ ನಂತರ ಅಂತಿಮ ಪಟ್ಟಿ ಸಿದ್ಧವಾಗಲಿದೆ.
ಬಿಜೆಪಿಗೆ 3 ಸ್ಥಾನಗಳನ್ನು ಗೆಲ್ಲಲು ಅವಕಾಶವಿದ್ದು ಹಿರಿಯ ನ್ಯಾಯವಾದಿ ಅಶೋಕ್ ಹಾರ್ನಳ್ಳಿ, ಹಾಲಿ ಸದಸ್ಯರಾಗಿರುವ ರವಿಕುಮಾರ್ ಅವರಿಗೆ ಟಿಕೆಟ್ ಖಚಿತವಾಗಿದ್ದು, ಉಳಿದ ಒಂದು ಸ್ಥಾನ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಇಲ್ಲವೇ ಸಿ.ಟಿ.ರವಿ ಅವರಿಗೆ ದೊರೆಯಲಿದೆ.
ಜಾತ್ಯತೀತ ಜನತಾದಳಕ್ಕೆ ಒಂದು ಸ್ಥಾನ ಗೆಲ್ಲುವ ಅವಕಾಶವಿದ್ದು ಕುಪೇಂದ್ರರೆಡ್ಡಿ, ಬಿ.ಎಂ.ಫಾರೂಕ್ ಮತ್ತು ಜವರಾಯಿಗೌಡರ ಮಧ್ಯೆ ತೀವ್ರ ಪೈಪೋಟಿ ಇದ್ದು ಜವರಾಯಿಗೌಡರಿಗೆ ಈ ಸ್ಥಾನ ದೊರಕುವ ಸಾಧ್ಯತೆ ಇದೆ.
ವಿಧಾನಸಭೆಯ ಬಲಾಬಲದ ಆಧಾರದ ಮೇಲೆ ಪರಿಷತ್ತಿಗೆ ಆಯ್ಕೆಗೊಳ್ಳಲು ಒಬ್ಬರಿಗೆ 19 ಮತಗಳ ಅಗತ್ಯವಿದೆ. ಇದರ ಆಧಾರದ ಮೇಲೆ ಕಾಂಗ್ರೆಸ್‌ಗೆ ಏಳು, ಬಿಜೆಪಿಗೆ ಮೂರು ಹಾಗೂ ಜೆಡಿಎಸ್‌ಗೆ ಒಂದು ಸ್ಥಾನ ದಕ್ಕಲಿದ್ದು, ಮೂರೂ ಪಕ್ಷಗಳು ತಮ್ಮ ತಮ್ಮ ಶಕ್ತಿಗನುಗುಣವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದ್ದು, ನಿರೀಕ್ಷೆಯಂತೆ ನಡೆದರೆ, 11 ಮಂದಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.