ಬೆಂಗಳೂರು:ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ದೇಶಕ್ಕೆ ವಾಪಸು ಕರೆತರಲು, ಅವರಿಗೆ ನೀಡಿರುವ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಪಡಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ಎಸಗರುವ ಕೃತ್ಯ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದ ಗಮನ ಸೆಳದಿದ್ದು, ಆರೋಪಿಯು ಲೋಕಸಭಾ ಸದಸ್ಯನಾಗಿರುವುದಲ್ಲದೆ, ಪ್ರಸಕ್ತ ಸಾರ್ವತ್ರಿಕ ಚುನಾವಣೆಯಲ್ಲೂ ಸ್ಪರ್ಧಿಸಿದ್ದಾನೆ.
ವಿಚಾರಣೆಗೆ ಆರೋಪಿಯ ಅಗತ್ಯವಿದೆ
ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪ ತನಿಖೆಗೆ ಕರ್ನಾಟಕ ಸರ್ಕಾರ ವಿಶೇಷ ತನಿಖಾ ದಳ ರಚಿಸಿದೆ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಆರೋಪ ಸಂಬಂಧ ವಿಚಾರಣೆಗೆ ಆರೋಪಿಯ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧ ಲುಕೌಟ್ ನೋಟಿಸ್, ಬ್ಲೂಕಾರ್ನರ್ ನೋಟಿಸ್ ಅಲ್ಲದೆ, ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಯ ಎರಡು ನೋಟಿಸ್‌ಗಳಿಗೂ ಇದುವರೆಗೆ ಸ್ಪಂದಿಸಿಲ್ಲ.
ಏಪ್ರಿಲ್ ೨೭ರಿಂದ ತಲೆಮರೆಸಿಕೊಂಡು ರಾಜತಾಂತ್ರಿಕ ಪಾಸ್‌ಪೋರ್ಟ್ ಮೇಲೆ ವಿದೇಶದಲ್ಲಿರುವ ಪ್ರಜ್ವಲ್‌ನನ್ನು ಭಾರತಕ್ಕೆ ಕರೆತರುವ ಸಂಬಂಧ, ತಾವು ಈ ಹಿಂದೆ ಬರೆದ ಪತ್ರದಿಂದ ಇದುವರೆಗೂ ಯಾವುದೇ ಪ್ರಕ್ರಿಯೆ ಜರುಗಿಲ್ಲ ಎಂದಿದ್ದಾರೆ.
ಈಗಲಾದರೂ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಪ್ರಜ್ವಲ್ ರೇವಣ್ಣನನ್ನು ವಿಚಾರಣೆಗೆ ದೇಶಕ್ಕೆ ಕರೆತರುವಲ್ಲಿ ಕೇಂದ್ರ ಸರ್ಕಾರ ಆತನ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಬೇಕೆಂದು ಕೋರುವುದಾಗಿ ಮುಖ್ಯಮಂತ್ರಿ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.