ಬೆಂಗಳೂರು:ಕಾಂಗ್ರೆಸ್‌ನಿಂದ ಇದೇ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಗೊಂಡಿರುವ ಬಹುತೇಕ ಶಾಸಕರು ಬಿಜೆಪಿಯತ್ತ ಹೆಜ್ಜೆ ಇಟ್ಟಿದ್ದಾರೆ.
ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳುತ್ತಿದತೆ ಕರ್ನಾಟಕದಲ್ಲಿ ಆಪರೇಷನ್ ಕಮಲದ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಳಿಸಲು ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಕಾರ್ಯತಂತ್ರ ಸಿದ್ಧಗೊಂಡಿದೆ.
ಇದರ ಉಸ್ತುವಾರಿ ಅಲ್ಲಿನ ಮುಖ್ಯಮಂತ್ರಿಗಳೇ ವಹಿಸಿಕೊಂಡಿದ್ದು, ಜೊತೆಗೆ ಎನ್‌ಸಿಪಿಯ ಹಿರಿಯ ನಾಯಕ ಪ್ರಫುಲ್ ಪಟೇಲ್, ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ತರಲು ಯತ್ನಿಸುತ್ತಿದ್ದಾರೆ.
ಇಬ್ಬರು ಸಚಿವರ ಮೂಲಕ ಆಪರೇಷನ್ ಕಮಲ
ಸಿದ್ದರಾಮಯ್ಯ ಸಂಪುಟದಲ್ಲಿರುವ ಇಬ್ಬರು ಸಚಿವರ ಮೂಲಕ ಆಪರೇಷನ್ ಕಮಲಕ್ಕೆ ಶಾಸಕರನ್ನು ಸೆಳೆಯುವ ಕಾರ್ಯ ಅತ್ಯಂತ ಗೌಪ್ಯವಾಗಿ ನಡೆದಿದೆ.
ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರದ ಅಭಿವೃದ್ಧಿಯಾಗದೆ, ಆಡಳಿತ ಪಕ್ಷದ ಶಾಸಕರೇ ಜನರಿಂದ ಛೀಮಾರಿಗೆ ಒಳಗಾಗುತ್ತಿದ್ದಾರೆ.
ಅದರಲ್ಲೂ ಆಡಳಿತ ಪಕ್ಷದಲ್ಲಿ ಪ್ರಥಮ ಬಾರಿಗೆ ವಿಧಾನಸಭೆಗೆ ಆಯ್ಕೆಗೊಂಡವರಿಗೆ ಏನು ಮಾಡಬೇಕೆಂದು ತೋಚದಾಗಿದೆ.
ಬಹುತೇಕರಿಗೆ ಅಸಮಾಧಾನ
ಜನಬಲ, ಹಣಬಲದಿಂದ ಚುನಾವಣೆ ಗೆದ್ದ ನಂತರ ಕ್ಷೇತ್ರದ ಅಭಿವೃದ್ಧಿ ಕಾರ್ಯ ಆಗದಿರುವುದು ಬಹುತೇಕರಿಗೆ ಅಸಮಾಧಾನ ತಂದಿದೆ.
ಈ ಬಗ್ಗೆ ತಮ್ಮ ಪಕ್ಷದ ನಾಯಕರು ಹಾಗೂ ಸಚಿವರ ಬಳಿ ಹೇಳಿಕೊಂಡರೂ ಪ್ರಯೋಜನವಾಗುತ್ತಿಲ್ಲ.
ಇನ್ನು ಸಚಿವರು ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ದೊಡ್ಡ ದೊಡ್ಡ ಗುತ್ತಿಗೆಗಳನ್ನು ನೇರವಾಗಿ ನೀಡಿ ಸ್ಥಳೀಯ ಶಾಸಕರನ್ನು ಕಡೆಗಾಣಿಸುತ್ತಿದ್ದಾರೆ ಎಂಬ ಅಸಮಾಧಾನವೂ ಇದೆ.
ಅಧಿಕಾರ ಇಲ್ಲದಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಿದರೆ ಜನರ ಕಷ್ಟಕ್ಕೆ ಸ್ಪಂದಿಸಬಹುದು, ಆದರೆ ಕಳೆದ ಒಂದು ವರ್ಷದಿಂದ ಇದು ಸಾಧ್ಯವಾಗಿಲ್ಲ.
ಜನ ಮೂಲಸೌಕರ್ಯ ಕೇಳುತ್ತಾರೆ
ಎಷ್ಟೇ ಗ್ಯಾರಂಟಿ ಕೊಟ್ಟರೂ ಜನತೆ ಮೂಲಸೌಕರ್ಯವನ್ನೂ ಕೇಳುತ್ತಾರೆ, ಶಾಸಕರಾಗಿ ಒಂದು ರಸ್ತೆ ಮಾಡಲು ಆಗಲಿಲ್ಲ ಎಂದರೆ, ನಾವು ಅಧಿಕಾರಕ್ಕೆ ಬಂದು ಏನು ಸುಖ ಎಂಬ ವ್ಯಥೆ ಅವರಲ್ಲಿ ಕಾಡುತ್ತಿದೆ.
ಇಂತಹವರನ್ನೇ ಗುರಿಯಾಗಿಟ್ಟಕೊಂಡು ಬಿಜೆಪಿ ಆಪರೇಷನ್ ಕಮಲ ಆರಂಭಿಸಿದೆ, ಬಹುತೇಕ ಶಾಸಕರು ಮತ್ತು ಮುಖಂಡರು ಮಹಾರಾಷ್ಟ್ರ ಹಾಗೂ ಗೋವಾದ ನಾಯಕರ ಜೊತೆ ಗೌಪ್ಯ ಸಂಪರ್ಕದಲ್ಲಿದ್ದಾರೆ.
ಇದು ಒಂದು ಹಂತಕ್ಕೆ ತಲುಪುತ್ತಿದ್ದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.
ಇನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ನಿರಂತರವಾಗಿ ಬೆಂಗಳೂರಿಗೆ ಬಂದು ಮುಖಂಡರೊಂದಿಗೆ ಸಮಾಲೋಚಿಸಿ, ಹಿಂತಿರುಗುತ್ತಿದ್ದಾರೆ.
ಇದರ ಸುಳಿವು ಮುಖ್ಯಮಂತ್ರಿ ಅವರ ಗಮನಕ್ಕೂ ಬಂದಿದೆ, ಹೀಗಾಗಿಯೇ ಹಿರಿಯ ಶಾಸಕರಿಗೆ ಅಧಿಕಾರ ನೀಡಿದ್ದಾರೆ.
ಶಾಸಕರ ನಿಧಿ ಬಿಡುಗಡೆಯಾಗಿಲ್ಲ
ಮುಂಗಡಪತ್ರದಲ್ಲಿ ಶಾಸಕರ ನಿಧಿಗೆ ಹಣ ಮೀಸಲಿರಿಸಿದ್ದಾರೆ, ಆದರೆ ಅದು ಬಿಡುಗಡೆಯಾಗಿಲ್ಲ.
ಲೋಕಸಭಾ ಚುನಾವಣೆಯ ಬಿರುಸಿನಲ್ಲೂ ಈ ಆಪರೇಷನ್ ಕಾರ್ಯಾಚರಣೆ ನಡೆಯುತ್ತಿದೆ.
ಪ್ರಸಕ್ತ ವಿಧಾನಸಭೆಯಲ್ಲಿ 135 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಸಂಖ್ಯೆಯಲ್ಲಿ ಬಲಿಷ್ಠವಾಗಿದೆ, ಪ್ರತಿಪಕ್ಷ ಬಿಜೆಪಿ ಹಾಗೂ ಮಿತ್ರ ಪಕ್ಷ ಜೆಡಿಎಸ್‌ನ ಒಟ್ಟು ಶಾಸಕರ ಸಂಖ್ಯೆ 85.
ಎನ್‌ಡಿಎ ಕೂಟಕ್ಕೆ 30 ಸದಸ್ಯರ ಅಗತ್ಯ
ಎನ್‌ಡಿಎ ಕೂಟಕ್ಕೆ ವಿಧಾನಸಭೆಯಲ್ಲಿ 113 ಶಾಸಕರ ಬಲ ಗಳಿಸಲು 30 ಸದಸ್ಯರ ಅಗತ್ಯವಿದೆ.
ಈ ಹಿಂದೆ ಎರಡು ಬಾರಿ ಆಪರೇಷನ್ ಕಮಲ ಮಾಡಿದಾಗ ಕಾಂಗ್ರೆಸ್ ಹಾಗೂ ಜೆಡಿಎಸ್‌ನ 18 ರಿಂದ 20 ಶಾಸಕರ ರಾಜೀನಾಮೆ ಕೊಡಿಸಿ, ಬಿಜೆಪಿ ಅಧಿಕಾರಕ್ಕೆ ಬಂದಿತ್ತು.
ಆದರೆ ಇದೀಗ ಸಂಖ್ಯೆ ದೊಡ್ಡದಿದೆ, ಅಗತ್ಯದಷ್ಟು ಶಾಸಕರ ರಾಜೀನಾಮೆ ಕೊಡಿಸುತ್ತಾರೋ, ಇಲ್ಲವೇ ಮಹಾರಾಷ್ಟ್ರ ಮಾದರಿಯಲ್ಲಿ ಮೂರನೇ ಎರಡರಷ್ಟು ಶಾಸಕರನ್ನು ಸೆಳೆದು ಅಧಿಕಾರಕ್ಕೆ ಬರುತ್ತಾರೊ ಎಂಬ ಮಾತುಗಳು ಕೇಳಿಬರುತ್ತಿವೆ.
ಏನೇ ಅದರೂ ಆಪರೇಷನ್ ಕಮಲ ಅಂತೂ ಗೌಪ್ಯವಾಗಿ ಬಿರುಸಿನಿಂದ ನಡೆದಿದೆ.