ಕೆ.ಎನ್.ರಾಜಣ್ಣ - ಡಿ.ಕೆ.ಸುರೇಶ್ ನಡುವೆ ಪೈಪೋಟಿ
ಬೆಂಗಳೂರು: ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗಾದಿಗಾಗಿ ಸಹಕಾರ ಸಚಿವ ರಾಜಣ್ಣ ಹಾಗೂ ಸಂಸದ ಡಿ.ಕೆ.ಸುರೇಶ್ ನಡುವೆ ಪೈಪೋಟಿ ನಡೆದಿದೆ.
ಅಧ್ಯಕ್ಷ ಸ್ಥಾನದಿಂದ ಡಿ.ಕೆ.ಶಿವಕುಮಾರ್ ಕೆಳಗಿಳಿಯಲಿದ್ದು ತಮ್ಮಿಂದ ತೆರವಾಗುವ ಜಾಗಕ್ಕೆ ತಮ್ಮ ಸಹೋದರ ಡಿ.ಕೆ.ಸುರೇಶ್ ಅವರನ್ನು ತರಲು ದೆಹಲಿ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ.
ಇದನ್ನರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.
ಇದರ ಬೆನ್ನಲ್ಲೇ ಸಹಕಾರಿ ಸಚಿವ ರಾಜಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಹೊರಟಿದ್ದಾರೆ.
ರಾಜಣ್ಣ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪೂರ್ಣ ಬೆಂಬಲವಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರಿದ ಮುಖಂಡರೊಬ್ಬರು ಈ ಗಾದಿ ಪಡೆಯಲಿ ಎಂಬ ನಿಲುವು ತಳೆದಿದ್ದಾರೆ.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಶಿವಕುಮಾರ್, ಕೆಪಿಸಿಸಿ ಸ್ಥಾನವನ್ನು ತಮ್ಮ ಮುಷ್ಠಿಯಲ್ಲಿಟ್ಟುಕೊಳ್ಳಲು ತೆರೆಮರೆಯಲ್ಲೇ ಹೋರಾಟ ನಡೆಸಿದ್ದಾರೆ.
ಶಿವಕುಮಾರ್ ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ ಸಹೋದರನಿಗೆ ಅಧಿಕಾರ ಕೊಡಿಸಲೇಬೇಕೆಂದು ಸದಾಶಿವನಗರದ ಅವರ ಮನೆಯಲ್ಲೇ ಮುಖ್ಯಮಂತ್ರಿ ಮತ್ತು ಸಚಿವರಿಗೆ ಔತಣಕೂಟದ ಸಭೆಗೆ ಕರೆದಿದ್ದರು.
ಔತಣಕೂಟನ್ನು ಪಂಚತಾರಾ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ಶಿವಕುಮಾರ್ ನಂತರ ತಮ್ಮ ಸಹೋದರನ ಮನೆಗೆ ಸ್ಥಳಾಂತರಿಸಿ ಸುರೇಶ್ ಈ ಔತಣಕೂಟಕ್ಕೆ ಆಹ್ವಾನಿಸಿದಂತೆ ವ್ಯವಸ್ಥೆ ಮಾಡಿದರು.
ಆದರೆ, ಸುರೇಶ್ ವಿದೇಶ ಪ್ರವಾಸದಲ್ಲಿದ್ದ ಕಾರಣ ಉಪಮುಖ್ಯಮಂತ್ರಿ ಅವರು ಇದರ ಮುಂದಾಳತ್ವ ವಹಿಸಿದ್ದಲ್ಲದೆ, ಸಭೆಯಲ್ಲಿ ಇತರ ವಿಷಯಗಳ ಜೊತೆ ಕೆಪಿಸಿಸಿ ಅಧ್ಯಕ್ಷಗಾದಿ ಬಗ್ಗೆ ಅನೌಪಚಾರಿಕವಾಗಿ ಪ್ರಸ್ತಾಪಿಸಿ ತಮ್ಮ ಸಹೋದ್ಯೋಗಿಗಳ ವಿಶ್ವಾಸ ಪಡೆಯುವ ಪ್ರಯತ್ನ ನಡೆಸಿದರು.
ಶಿವಕುಮಾರ್ ಅವರ ತಂತ್ರ ಅರಿತ ಕೆಲವು ಸಚಿವರು ಔತಣಕೂಟದಿಂದ ದೂರ ಉಳಿದರು, ಇವರೆಲ್ಲಾ ಸಿದ್ದರಾಮಯ್ಯ ಅವರ ಪರಮಾಪ್ತರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೂತ್ರ ಪ್ರಕಟಿಸಿದರು.
ಸಿದ್ದರಾಮಯ್ಯ ಸಂಪುಟದಲ್ಲಿ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಒಬ್ಬರೇ ಇರಲಿದ್ದು, ಜೊತೆಗೆ ಮುಂಬರುವ ಲೋಕಸಭಾ ಚುನಾವಣೆವರೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ತಿಳಿಸಿದ್ದರು.
ಲೋಕಸಭಾ ಚುನಾವಣೆ ಪ್ರಕ್ರಿಯೆ ಮುಗಿಯುವ ಹಂತಕ್ಕೆ ಬರುತ್ತಿದ್ದಂತೆ ಶಿವಕುಮಾರ್ ಸ್ವಯಂ ಪ್ರೇರಿತರಾಗಿ, ಇನ್ನು ಎಷ್ಟು ದಿನ ಅಧ್ಯಕ್ಷ ಗಾದಿಯಲ್ಲಿ ಮುಂದುವರೆಯುತ್ತೇನೋ ಗೊತ್ತಿಲ್ಲ ಎಂದಿದ್ದರು.
ದೂರದೃಷ್ಟಿಯಿಂದ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಈ ಗಾದಿಯನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಹೊರಟಿದ್ದಾರೆ.
ದೆಹಲಿ ಸೂತ್ರದಂತೆ ಇನ್ನು ಒಂದೂವರೆ ವರ್ಷಕ್ಕೆ ಸಿದ್ದರಾಮಯ್ಯ ಅಧಿಕಾರದಿಂದ ಕೆಳಕ್ಕಿಳಿದು ಶಿವಕುಮಾರ್ ಅವರಿಗೆ ಹಸ್ತಾಂತರಿಸಬೇಕಾಗುತ್ತದೆ.
ಹಸ್ತಾಂತರ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರು ಮಹತ್ತರ ಪಾತ್ರ ವಹಿಸುತ್ತಾರೆ. ಈ ಕಾರಣಕ್ಕಾಗಿಯೇ ಈ ಹುದ್ದೆಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಶಿವಕುಮಾರ್, ಸಹೋದರನಿಗೆ ಪಟ್ಟ ಕಟ್ಟಲು ಹೊರಟಿದ್ದಾರೆ.
ಸಿದ್ದರಾಮಯ್ಯ ಕೂಡಾ ಒಂದೇ ಕುಟುಂಬಕ್ಕೆ ಅಥವಾ ಸಮುದಾಯಕ್ಕೆ ಆ ಸ್ಥಾನವನ್ನು ಮುಂದುವರಿಸಬಾರದೆಂದು, ನಾಯಕ ಸಮುದಾಯಕ್ಕೆ ಸೇರಿದ ರಾಜಣ್ಣ ಅವರಿಗೆ ಕೆಪಿಸಿಸಿ ಪಟ್ಟ ಕಟ್ಟಲು ಮುಂದಾಗಿದ್ದಾರೆ.
ಜೂನ್ 6ರ ನಂತರ ರಾಜಣ್ಣ ಬಹಿರಂಗವಾಗಿಯೇ ಶಿವಕುಮಾರ್ ಅವಧಿ ಮುಗಿದಿದ್ದು, ತಮಗೆ ಆ ಸ್ಥಾನವನ್ನು ನೀಡುವಂತೆ ವರಿಷ್ಠರನ್ನು ಕೇಳಲಿದ್ದಾರೆ.
ಅಷ್ಟೇ ಅಲ್ಲ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ವಾಸ್ತವವನ್ನು ಅವರ ಗಮನಕ್ಕೆ ತಂದು, ನಾನು ಮಂತ್ರಿ ಸ್ಥಾನ ತೊರೆಯುತ್ತೇನೆ. ಪಕ್ಷ ಸಂಘಟನೆ ಮಾಡಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಲಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.