ಬೆಂಗಳೂರು:ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಇದೇ ಶುಕ್ರವಾರ ರಾಷ್ಟ್ರಕ್ಕೆ ಹಿಂತಿರುಗಲಿದ್ದಾರೆ.
ಲೋಕಸಭಾ ಚುನಾವಣಾ ಮತದಾನ ಮುಗಿಸಿಕೊಂಡು ಒಂದು ತಿಂಗಳ ಹಿಂದೆ (ಏಪ್ರಿಲ್ 26) ವಿದೇಶಕ್ಕೆ ತೆರಳಿದ್ದ ಪ್ರಜ್ವಲ್ ಬಂಧನಕ್ಕಾಗಿ ಎಸ್‌ಐಟಿ ಹಾಗೂ ರಾಜ್ಯ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿತ್ತು.
ತಾತ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕುಟುಂಬ ವರ್ಗದವರ ಮನವಿ ಮತ್ತು ತಮ್ಮ ಹಿರಿಯ ವಕೀಲರ ಸಲಹೆಯಂತೆ ಮೇ 31ರಂದು ಮುಂಜಾನೆ ನಗರಕ್ಕೆ ಧಾವಿಸಲಿರುವ ಅವರು, ಅಂದೇ ಬೆಳಗ್ಗೆ 10 ಗಂಟೆಗೆ ಎಸ್‌ಐಟಿ ಮುಂದೆ ಹಾಜರಾಗಲಿದ್ದಾರೆ.
ವಿದೇಶದಿಂದ ವಿಡಿಯೊ ಬಿಡುಗಡೆ
ತಾವು ಈಗಿರುವ ಸ್ಥಳದಿಂದಲೇ ವಿಡಿಯೊ ಬಿಡುಗಡೆ ಮಾಡಿರುವ ಪ್ರಜ್ವಲ್, ಅದರಲ್ಲಿ ರಾಷ್ಟ್ರಕ್ಕೆ ಹಿಂತಿರುಗುತ್ತಿರುವುದನ್ನು ಖಚಿತ ಪಡಿಸಿ, ಎಸ್‌ಐಟಿ ತನಿಖೆಗೆ ಸಹಕರಿಸಿ, ತಮ್ಮ ವಿರುದ್ಧದ ಷಡ್ಯಂತ್ರವನ್ನು ಕಾನೂನು ಮೂಲಕ ಎದುರಿಸುವುದಾಗಿ ತಿಳಿಸಿದ್ದಾರೆ.
ವಿಡಿಯೊ ಆರಂಭದಲ್ಲಿ ಅವರು, ನನ್ನ ಕುಟುಂಬ ವರ್ಗಕ್ಕೆ, ತಾತ, ಕುಮಾರಣ್ಣ ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ನಾಡಿನ ಜನತೆಗೆ ನಾನು ವಿದೇಶದಿಂದಲೇ ಕ್ಷಮೆ ಯಾಚಿಸುತ್ತೇನೆ.
ನಾನು ವಿದೇಶದಲ್ಲಿ ಎಲ್ಲಿದ್ದೇನೆ ಎಂಬ ಮಾಹಿತಿ ನೀಡದಿದ್ದಕ್ಕೆ ಇಂದು ನಿಮ್ಮೆಲ್ಲರ ಕ್ಷಮೆ ಯಾಚಿಸಿ, ಮಾಹಿತಿ ನೀಡುತ್ತಿದ್ದೇನೆ.
ನಿಗದಿತ ಕಾರ್ಯಕ್ರಮದಂತೆ ವಿದೇಶಕ್ಕೆ
ನಾನು, ನನ್ನ ಕ್ಷೇತ್ರದ ಮತದಾನ ಮುಗಿಸಿಕೊಂಡು, ಮೊದಲೇ ನಿಗದಿಯಾದ ಕಾರ್ಯಕ್ರಮದಂತೆ ಏಪ್ರಿಲ್ 26ಕ್ಕೆ ವಿದೇಶಕ್ಕೆ ತೆರಳಿದೆ.
ನಾನು ವಿದೇಶಕ್ಕೆ ತೆರಳುವ ಸಂದರ್ಭದಲ್ಲಿ ನನ್ನ ವಿರುದ್ಧ ಯಾವುದೇ ಆರೋಪಗಳಾಗಲೀ, ಮೊಕದ್ದಮೆಗಳಾಗಲೀ ದಾಖಲಾಗಿರಲಿಲ್ಲ ಹಾಗೂ ಎಸ್‌ಐಟಿಯೂ ರಚನೆಯಾಗಿರಲಿಲ್ಲ.
ನನ್ನ ವಿರುದ್ಧ ಆರೋಪ ಪ್ರಸಾರ
ವಿದೇಶಕ್ಕೆ ತೆರಳಿದ ಮೂರು-ನಾಲ್ಕು ದಿನಗಳ ನಂತರ ಯೂಟ್ಯೂಬ್ ಹಾಗೂ ಸುದ್ದಿ ವಾಹಿನಿಗಳ ಮೂಲಕ ನನ್ನ ವಿರುದ್ಧ ಪ್ರಸಾರ ಆಗುತ್ತಿರುವ ಆರೋಪಗಳ ಬಗ್ಗೆ ತಿಳಿದುಕೊಂಡೆ.
ನಂತರ ನನಗೆ, ಇದರ ಮಾಹಿತಿ ತಿಳಿಯುವ ಜೊತೆಗೆ ಎಸ್‌ಐಟಿ ನೀಡಿದ ನೋಟಿಸ್‌ಗೆ ಎಕ್ಸ್ ಖಾತೆ ಹಾಗೂ ವಕೀಲರ ಮೂಲಕ ಉತ್ತರ ನೀಡಿ, ಒಂದು ವಾರ ಕಾಲಾವಕಾಶ ಕೋರಿದ್ದೆ.
ಈ ಸಂದೇಶ ಕಳುಹಿಸಿದ ಮರು ದಿನವೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಆ ಪಕ್ಷದ ಕೆಲವು ಮುಖಂಡರು ಸಾರ್ವಜನಿಕ ವೇದಿಕೆಗಳಲ್ಲಿ ನನ್ನ ವಿರುದ್ಧ ಅಪಪ್ರಚಾರ ನಡೆಸಿ, ರಾಜಕೀಯ ಪಿತೂರಿ ಮಾಡಿದರು.
ಏಕಾಂಗಿತನ ಮತ್ತು ಖಿನ್ನತೆ
ಇದರಿಂದ ನಾನು ಏಕಾಂಗಿತನಕ್ಕೆ ಮತ್ತು ಖಿನ್ನತೆಗೆ ಒಳಗಾದೆ, ಇದರಿಂದ ಚೇತರಿಸಿಕೊಂಡು ಹೊರಬರುವ ಮುನ್ನವೇ ಹಾಸನದಲ್ಲಿ ಕೆಲವು ದುಃಶ್ಯಕ್ತಿಗಳು ನನ್ನ ವಿರುದ್ಧ ರಾಜಕೀಯ ಪಿತೂರಿ ಮಾಡಿ, ಅಪಪ್ರಚಾರ ನಡೆಸಿದರು.
ನನ್ನನ್ನು ರಾಜಕೀಯವಾಗಿ ಕುಗ್ಗಿಸಲು ಈ ಶಕ್ತಿಗಳು ಒಂದಾಗಿ ನನ್ನ ವಿರುದ್ಧ ದೊಡ್ಡ ಷಡ್ಯಂತ್ರವನ್ನೇ ನಡೆಸಿದವು.
ಇದರಿಂದ ನಾನು ಏಕಾಂಗಿಯಾದೆ ಹಾಗೂ ನಾನು, ದೂರ ಉಳಿಯುವ ತೀರ್ಮಾನ ಕೈಗೊಂಡೆ, ನಂತರ ನಡೆದ ಬೆಳವಣಿಗೆಗಳಿಂದ ಈ ದುಷ್ಟ ಶಕ್ತಿಗಳ ವಿರುದ್ಧ ಕಾನೂನು ಹೋರಾಟ ಮಾಡುವ ನಿರ್ಧಾರ ಕೈಗೊಂಡು ರಾಷ್ಟ್ರಕ್ಕೆ ಹಿಂತಿರುಗುತ್ತಿದ್ದೇನೆ.
ಈ ಮೊದಲೇ ಕ್ಷಮೆ ಯಾಚಿಸಿದ್ದೇನೆ, ಮತ್ತೊಮ್ಮೆ ನಿಮ್ಮ ಮುಂದೆ ಕ್ಷಮೆ ಯಾಚಿಸುತ್ತಿದ್ದೇನೆ, ಇದೇ 31ರಂದು ರಾಷ್ಟ್ರಕ್ಕೆ ಹಿಂತಿರುಗಿ ತನಿಖಾ ಸಂಸ್ಥೆ ಮುಂದೆ ಹಾಜರಾಗುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ವಾಕ್ ಸಮರ
ಪ್ರಜ್ವಲ್ ಪ್ರಕರಣದ ನಂತರ ಆಡಳಿತಾರೂಢ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ದೊಡ್ಡ ವಾಕ್ ಸಮರವೇ ನಡೆಯಿತು.
ಈ ಹಂತದಲ್ಲಿ ಕುಮಾರಸ್ವಾಮಿ, ರಾಷ್ಟ್ರಕ್ಕೆ ಹಿಂತಿರುಗಿ ಎಸ್‌ಐಟಿ ಮುಂದೆ ಹಾಜರಾಗುವಂತೆ ಸಾರ್ವಜನಿಕವಾಗಿ ಮನವಿ ಮಾಡಿದರು.
ಕುಮಾರಸ್ವಾಮಿ ಅವರ ಮನವಿಗೂ ಪ್ರಜ್ವಲ್ ಸ್ಪಂದಿಸದಿದ್ದಾಗ, ತಾತ ದೇವೇಗೌಡರು ಖಾರವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಮೊಮ್ಮಗನ ವಿರುದ್ಧ ಕಿಡಿ ಕಾರಿ, ರಾಷ್ಟ್ರಕ್ಕೆ ಹಿಂತಿರುಗದಿದ್ದರೆ, ತಮ್ಮ ಕುಟುಂಬದಿಂದ ಹೊರಹಾಕುವುದಾಗಿ ಎಚ್ಚರಿಕೆ ನೀಡಿದ್ದರು.
ತಾತನ ಎಚ್ಚರಿಕೆ
ತಾತನ ಎಚ್ಚರಿಕೆ ಹಾಗೂ ಪ್ರಜ್ವಲ್ ವಕೀಲರು, ಭಾರತಕ್ಕೆ ಹಿಂತಿರುಗಿ ತನಿಖಾ ಸಂಸ್ಥೆ ಮುಂದೆ ಹಾಜರಾಗುವಂತೆ ಸಲಹೆ ಮಾಡಿದರು.
ಎಷ್ಟೇ ದಿನವಾದರೂ, ನೀವು ಕಾನೂನನ್ನು ಎದುರಿಸಲೇಬೇಕು, ತಡ ಮಾಡಿದರೆ, ವಿಷಯ ಮತ್ತಷ್ಟು ಗೊಂದಲಕ್ಕೆ ಒಳಗಾಗುತ್ತೆ, ಅಲ್ಲದೆ, ಕುಟುಂಬವೂ ನೆಮ್ಮದಿಯಿಂದಿರಲು ಸಾಧ್ಯವಿಲ್ಲ.
ಭಾರತಕ್ಕೆ ಹಿಂತಿರುಗಿ ತನಿಖಾ ಸಂಸ್ಥೆ ಮುಂದೆ ಹಾಜರಾಗಿ ಕಾನೂನಿನ ಹೋರಾಟ ನಡೆಸಿ ಎಂದು ವಕೀಲರು ನೀಡಿದ ಸಲಹೆಗೆ ಪ್ರಜ್ವಲ್ ತಮ್ಮ ನಿರ್ಧಾರ ಬದಲಿಸಿ ರಾಷ್ಟ್ರಕ್ಕೆ ಹಿಂತಿರುಗುತ್ತಿದ್ದಾರೆ.
ಹಿಂತಿರುಗುವುದಕ್ಕೂ ಮುನ್ನ ವಕೀಲರು ನೀಡಿದ ಸಲಹೆಯಂತೆ 2.57 ನಿಮಿಷಗಳ ಟಿಪ್ಪಣಿಯನ್ನು ವಿಡಿಯೊ ಮೂಲಕ ಓದಿ, ಸಂದೇಶ ರವಾನಿಸಿದ್ದಾರೆ.