ಬೆಂಗಳೂರು:ವಿಧಾನಸಭೆಯಿಂದ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ 7 ಸ್ಥಾನಕ್ಕೆ ನಮ್ಮಲ್ಲಿ 300 ಪ್ರಬಲ ಆಕಾಂಕ್ಷಿಗಳಿದ್ದಾರೆ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ತೆರವಾಗಲಿರುವ 11 ಸ್ಥಾನಗಳಲ್ಲಿ ವಿಧಾನಸಭೆಯಲ್ಲಿನ ಸಂಖ್ಯಾಬಲದ ಆಧಾರದ ಮೇಲೆ ನಮಗೆ 7 ಸ್ಥಾನ ಲಭ್ಯವಾಗಲಿವೆ, ಇದಕ್ಕೆ ಎಲ್ಲಾ ಸಮುದಾಯ ಮತ್ತು ವಲಯಗಳಿಂದ ಒತ್ತಡ ಇದೆ ಎಂದಿದ್ದಾರೆ.
ಎಲ್ಲಾ ವರ್ಗಕ್ಕೂ ನ್ಯಾಯ
ಅಭ್ಯರ್ಥಿಗಳ ಆಯ್ಕೆ ಸಂಬಂಧ ವರಿಷ್ಠರ ಅನುಮೋದನೆ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೂಡಿ ದೆಹಲಿಗೆ ತೆರಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ವರ್ಗಕ್ಕೂ ನ್ಯಾಯ ಕಲ್ಪಿಸಲು ಸಾಧ್ಯವಿಲ್ಲ.
ಒತ್ತಡ ಹೆಚ್ಚಿರುವುದರ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ವರಿಷ್ಠರಿಗೆ ಬಿಡುತ್ತೇವೆ, ಆದರೆ, ನಾನು ಮತ್ತು ಮುಖ್ಯಮಂತ್ರಿ ಅವರು, ಪಕ್ಷ ಸಂಘಟನೆಗೆ ದುಡಿದವರು ಹಾಗೂ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಿದ ಮತ್ತು ಪಕ್ಷ ಸಂಘಟನೆಗೆ ಸಹಕಾರಿ ಆಗುವಂತಹವರನ್ನು ಗುರುತಿಸಿ ಎಂದು ಮನವಿ ಮಾಡುತ್ತೇವೆ. ಅಷ್ಟೇ ಅಲ್ಲ, ಆಕಾಂಕ್ಷಿಗಳ ಪಟ್ಟಿಯನ್ನು ವರಿಷ್ಠರ ಗಮನಕ್ಕೆ ತರುವುದಾಗಿಯೂ ತಿಳಿಸಿದರು.
ವಿಧಾನ ಪರಿಷತ್ ಸ್ಥಾನ ಪಡೆಯಲು ಆಸಕ್ತಿ ತೋರುವುದು ತಪ್ಪಲ್ಲ, ಅವರೆಲ್ಲರೂ ಬ್ಲಾಕ್, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಪಕ್ಷಕ್ಕೆ ದುಡಿದಿದ್ದಾರೆ.
ಕರಾವಳಿ, ಕಿತ್ತೂರು, ಕಲ್ಯಾಣ ಕರ್ನಾಟಕ ಹಾಗೂ ಹಳೇ ಮೈಸೂರು ಭಾಗ ಸೇರಿದಂತೆ ಎಲ್ಲಾ ಕಡೆಯಿಂದ ಅವಕಾಶ ನೀಡಬೇಕು ಎಂಬ ಬೇಡಿಕೆ ಇದೆ.
ಆಯ್ಕೆ ಕಠಿಣ
ಇದರ ಜೊತೆಗೆ ಕೆಲವು ಸ್ಥಾನಗಳಲ್ಲಿ ಹಾಲಿ ಸದಸ್ಯರೂ ಇದ್ದಾರೆ, ಹೀಗಾಗಿ ಆಯ್ಕೆ ಕಠಿಣ ಪರಿಸ್ಥಿತಿ ತಂದಿದೆ.
ದೆಹಲಿಗೆ ತೆರಳುತ್ತಿದ್ದಂತೆ ಪಕ್ಷದ ಮುಖಂಡರುಗಳನ್ನು ಭೇಟಿ ಮಾಡಿ ಚರ್ಚಿಸುತ್ತೇವೆ, ಅಂತಿಮವಾಗಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಚರ್ಚೆ ನಡೆಸಿದ ನಂತರ ಪಟ್ಟಿ ಅಂತಿಮಗೊಳ್ಳಲಿದೆ.
ರಾಜ್ಯ ನಾಯಕರೊಂದಿಗೆ ಚರ್ಚಿಸಿದ ನಂತರ ವರಿಷ್ಠರು ನಾಳೆ 7 ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಶಿವಕುಮಾರ್ ತಿಳಿಸಿದರು.
ವಿಧಾನಸಭೆಯಿಂದ ಪರಿಷತ್ತಿನ 11 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಕಳೆದ ಸೋಮವಾರದಿಂದ ಆರಂಭವಾಗಿದೆ.
ನಾಮಪತ್ರ ಸಲ್ಲಿಕೆಗೆ ಜೂನ್ 3 ಕಡೆಯ ದಿನವಾಗಿದ್ದು, ಅಗತ್ಯ ಬಿದ್ದಲ್ಲಿ ಜೂನ್ 13 ರಂದು ಮತದಾನ ನಡೆಯಲಿದ್ದು, ಅಂದು ಸಂಜೆಯೇ ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.