ಬೆಂಗಳೂರು:ಬಿತ್ತನೆ ಬೀಜದ ಬೆಲೆಯಲ್ಲಿನ ಏರಿಕೆಯನ್ನು ಹಿಂಪಡೆಯುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಆಗ್ರಹಿಸಿದ್ದಾರೆ.
ಸತತ ಬರದಿಂದ ಕಂಗೆಟ್ಟ ರೈತನಿಗೆ ಪೂರ್ವ ಮುಂಗಾರು ಮಳೆ ಆಶಾದಾಯಕವಾಗಿದ್ದರೂ ಬಿತ್ತನೆ ಬೀಜದ ಬೆಲೆಯಿಂದ ಕೃಷಿಕ ಕಂಗಾಲಾಗಿದ್ದಾನೆ.
ಶೇಕಡ 60ರಷ್ಟು ಹೆಚ್ಚಳ
ಎಲ್ಲಾ ಬಿತ್ತನೆ ಬೀಜಗಳ ಬೆಲೆ ಶೇಕಡ 60ರಷ್ಟು ಹೆಚ್ಚಳ ಮಾಡಿ ರೈತರ ಚರ್ಮ ಸುಲಿಯಲು ಸರ್ಕಾರ ಹೊರಟಿದೆ ಎಂದು ಕಿಡಿಕಾರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಜ್ಯದ ಜನತೆಗೆ ಪಂಚ ಗ್ಯಾರಂಟಿ ಕೊಟ್ಟು ಜನರನ್ನು ಉದ್ಧಾರ ಮಾಡಿದೆ ಎಂದು ಬೀಗುವ ಕಾಂಗ್ರೆಸ್ ಸರಕಾರ ಮಾಡಿರುವ ಘನಕಾರ್ಯ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಒಂದು ಕೈಯಲ್ಲಿ ಗ್ಯಾರಂಟಿ ಕೊಟ್ಟು, ಇನ್ನೊಂದು ಕೈಯಲ್ಲಿ ಸುಲಿಗೆ ಮಾಡುತ್ತಿರುವ ಸರ್ಕಾರದ ಘನಕಾರ್ಯವಿದು.
ಪಿಕ್ ಪಾಕೆಟ್ ಕೆಲಸ
ಕೊಟ್ಟ ಹಾಗೆ ಕೊಟ್ಟು, ಜನರಿಗೆ ಗೊತ್ತೇ ಆಗದಂತೆ ಜೇಬಿಗೆ ಕೈ ಹಾಕಿ ಪಿಕ್ ಪಾಕೆಟ್ ಮಾಡುತ್ತಿರುವ ಕಿಡಿಗೇಡಿ ಕೆಲಸ ಇದು.
ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಲಭ್ಯವಿದ್ದ ಬಿತ್ತನೆ ಬೀಜದ ಬೆಲೆ ಏರಿಕೆಯಾದ ಪರಿಣಾಮ, ಮುಕ್ತ ಮಾರುಕಟ್ಟೆಯಲ್ಲಿಯೂ ದರ ದುಪ್ಪಟ್ಟಾಗಿದೆ.
ಸರಕಾರ ತಕ್ಷಣ ಬಿತ್ತನೆ ಬೀಜದ ದರ ಇಳಿಕೆಗೆ ಕ್ರಮ ಕೈಗೊಳ್ಳಬೇಕು ಮತ್ತು ಮುಕ್ತ ಮಾರುಕಟ್ಟೆಯಲ್ಲಿ ದರ ಏರಿಕೆಗೆ ನಿಯಂತ್ರಣ ವಿಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.