ಬೆಂಗಳೂರು:ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ರಾಷ್ಟ್ರಕ್ಕೆ ಹಿಂತಿರುಗುತ್ತಿದ್ದಂತೆ ವಿಮಾನ ನಿಲ್ದಾಣದಲ್ಲೇ ಆತನನ್ನು ಬಂಧಿಸಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ.
ಪ್ರಜ್ವಲ್ ವಿರುದ್ಧ ವಾರೆಂಟ್ ಹೊರಟಿರುವುದರಿಂದ ಅವರಾಗಿಯೇ ಎಸ್‌ಐಟಿ ಮುಂದೆ ಶರಣಾಗಲು ಅವಕಾಶ ಕಲ್ಪಿಸುವುದಿಲ್ಲ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂದು ನೋಡುವುದಿಲ್ಲ.
ಎಷ್ಟೇ ದೊಡ್ಡವರಾಗಿದ್ದರೂ ಕಾನೂನು ಕ್ರಮ
ಯಾರ ಮೇಲೆ ಆರೋಪ ಇದ್ದು, ಪ್ರಾಥಮಿಕ ತನಿಖೆಯಲ್ಲಿ ಸಾಭೀತಾಗಿದ್ದರೆ ಅವರು ಎಷ್ಟೇ ದೊಡ್ಡವರಾಗಿದ್ದರೂ ಎಸ್‌ಐಟಿ ತನ್ನ ಕಾನೂನು ಕ್ರಮ ಕೈಗೊಳ್ಳುತ್ತದೆ.
ಈಗಾಗಲೇ 11 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ, ಆರೋಪದಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಕ್ರಮಕೈಗೊಳ್ಳುತ್ತಾರೆ ಎಂದರು.
ಡೆತ್‌ನೋಟ್ ಆರೋಪಗಳ ತನಿಖೆ
ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನೂ ದಾಖಲು ಮಾಡಿಕೊಳ್ಳಲಾಗಿದೆ, ಡೆತ್‌ನೋಟ್‌ನಲ್ಲಿನ ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ, ಪ್ರತಿಪಕ್ಷಗಳು ಎಲ್ಲಾ ಸಂದರ್ಭಗಳಲ್ಲೂ ರಾಜೀನಾಮೆ ಕೇಳುತ್ತಲೇ ಇರುತ್ತವೆ ಎಂದರು.
ಪರಿಷತ್ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಹಿರಿಯರ ಸಲಹೆ ಪಡೆಯಬೇಕೆಂದು ಹೇಳಿದ್ದೆವು, ಅಭ್ಯರ್ಥಿಗಳ ಆಯ್ಕೆ ಸಂಬಂಧ ಈಗಾಗಲೇ ನಾಯಕರು ಫ್ಲೈಟ್ ಹತ್ತಿರುವುದರಿಂದ ಈಗ ಅದು ಅಪ್ರಸ್ತುತ, ಮುಂದೆ ಇಂತಹ ಸಂದರ್ಭಗಳಲ್ಲಿ ಸಲಹೆ ಪಡೆಯಲಿ ಎಂದರು.