ಬೆಂಗಳೂರು:ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಬಂಧಿಸದಂತೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಪ್ರಜ್ವಲ್ ವಕೀಲರು, ಎಸ್‌ಐಟಿ ಹೂಡಿರುವ ಮೂರು ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿದ್ದಾರೆ.
ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮೇ 31ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ತಿಳಿಸಿದ್ದಾರೆ.
ಪ್ರಜ್ವಲ್ ಹಿಂತಿರುಗುವ ಅನುಮಾನ
ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿರುವ ಪ್ರಜ್ವಲ್ ನಗರಕ್ಕೆ ಹಿಂತಿರುಗುವ ಬಗ್ಗೆ ಅನುಮಾನಗಳು ಎದುರಾಗಿವೆ.
ಆದರೆ, ಜರ್ಮನಿಯ ಮ್ಯೂನಿಕ್ ನಗರದಿಂದ ಬೆಂಗಳೂರಿಗೆ ಆಗಮಿಸಲು ವಿಮಾನ ಟೆಕೆಟ್ ಕಾಯ್ದಿರಿಸಿದ್ದಾರೆ.
ಈ ಹಿಂದೆಯೂ ಎರಡು ಬಾರಿ ಟಿಕೆಟ್ ಕಾಯ್ದಿರಿಸಿದ್ದ ಪ್ರಜ್ವಲ್, ನಂತರ ತಮ್ಮ ಮನಸ್ಸು ಬದಲಿಸಿ ಭಾರತಕ್ಕೆ ಹಿಂತಿರುಗಿರಲಿಲ್ಲ ಎಂಬುದನ್ನು ಸ್ಮರಿಸಬಹುದು.
ಮೂರು ಪ್ರಕರಣಗಳಿಗೆ ಜಾಮೀನು ಕೋರಿಕೆ
ಸಿಐಡಿ ಠಾಣೆ, ಹೊಳೆನರಸೀಪುರ ಠಾಣೆ, ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿರುವ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಇದರ ಮಧ್ಯೆಯೇ ಪ್ರಜ್ವಲ್ ಪರ ವಕೀಲರು, ಕೆಲಸದಾಕೆ ನೀಡಿದ ದೂರು 107/2024, ಅಲ್ಲದೆ, ಅಪಹರಣಕ್ಕೆ ಸಂಬಂಧಿಸಿದಂತೆ ಸಿಐಡಿ 20/2024 ಪ್ರಕರಣ, ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ 02/2024 ಪ್ರಕರಣಗಳಲ್ಲಿ ನಮ್ಮ ಕಕ್ಷಿದಾರರನ್ನು ಬಂಧಿಸದಂತೆ ಜಾಮೀನು ಕೋರಿ ಜನಪ್ರತಿನಿಧಿಗಳ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ನಿರೀಕ್ಷಣಾ ಜಾಮೀನು ಅರ್ಜಿಗಳ ವಿಚಾರಣೆಗೆ ಮುನ್ನ ಪ್ರತಿವಾದಿಗಳಿಗೆ ಸಮನ್ಸ್ ನೀಡಬೇಕಾಗುತ್ತದೆ.
ಈಗಾಗಲೇ ಪ್ರಜ್ವಲ್ ತಂದೆ ಎಚ್.ಡಿ.ರೇವಣ್ಣ ಅವರಿಗೆ ಎರಡು ಪ್ರಕರಣಗಳಲ್ಲಿ ಜಾಮೀನು ದೊರೆತಿದೆ.
ನ್ಯಾಯಾಲಯದ ಮುಂದೆ ಪ್ರಜ್ವಲ್ ವಾದ
ನಾನು ಪ್ರವಾಸ ಕೈಗೊಳ್ಳುವ ಮುನ್ನ ನನ್ನ ವಿರುದ್ಧ ಯಾವುದೇ ರೀತಿಯ ಪ್ರಕರಣಗಳು ದಾಖಲಾಗಿರಲಿಲ್ಲ.
ನಾನು ಈ ಹಿಂದೆ ನಿಗದಿಯಾದ ಕಾರ್ಯಕ್ರಮದಂತೆ ಪ್ರವಾಸ ಕೈಗೊಂಡೆ, ಮುರು ದಿನಗಳ ನಂತರ ನನ್ನ ಮೇಲಿನ ಆರೋಪಗಳ ತನಿಖೆಗೆ ಎಸ್‌ಐಟಿ ರಚನೆ ಆಯಿತು.
ನಂತರ ಎಸ್‌ಐಟಿ ನನಗೆ ನೀಡಿದ ನೋಟಿಸ್‌ಗೆ ಉತ್ತರ ನೀಡಿ ಕಾಲಾವಕಾಶ ಕೋರಿದ್ದೆ ಎಂಬುದೂ ಸೇರಿದಂತೆ ಪ್ರಜ್ವಲ್ ತಮ್ಮ ಮೇಲಿನ ಆರೋಪಗಳಲ್ಲಿ ಹುರುಳಿಲ್ಲ, ರಾಜಕೀಯ ಪ್ರೇರಿತವಾಗಿ ವಿರೋಧಿಗಳು ಇಂತಹ ದೂರು ನೀಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ವಿಡಿಯೊ ಸಂದೇಶ
ಪ್ರಜ್ವಲ್ ಇದೇ 31ಕ್ಕೆ ಹಿಂತಿರುಗಿ ಅಂದೇ ಎಸ್‌ಐಟಿ ಮುಂದೆ ಹಾಜರಾಗುವುದಾಗಿಯೂ ವಿಡಿಯೊ ಸಂದೇಶ ಕಳುಹಿಸಿದ್ದರು.
ವಿಡಿಯೊ ಸಂದೇಶ ಬಂದ ಎರಡು ದಿನಕ್ಕೆ ಅವರ ಪರ ವಕೀಲರು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಇದರ ಮಧ್ಯೆ, ಗೃಹ ಸಚಿವ ಡಾ.ಪರಮೇಶ್ವರ್ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜ್ವಲ್ ಹಿಂತಿರುಗುತ್ತಿದ್ದಂತೆ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ವಿಮಾನ ನಿಲ್ದಾಣಗಳಲ್ಲಿ ಅಲರ್ಟ್
ಪ್ರಜ್ವಲ್ ಹೇಳಿಕೆ ಹಿನ್ನೆಲೆಯಲ್ಲಿ ಎಸ್‌ಐಟಿ ರಾಷ್ಟ್ರದ ಎಲ್ಲಾ ವಿಮಾನ ನಿಲ್ದಾಣಗಳಿಗೆ ಸಂದೇಶ ರವಾನೆ ಮಾಡಿ, ಅವರನ್ನು ವಶಕ್ಕೆ ತೆಗೆದುಕೊಳ್ಳುವಂತೆ ಅಲರ್ಟ್ ಮಾಡಿದೆ.
ಇದರ ನಡುವೆಯೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್‌ಐಟಿ ಅಧಿಕಾರಿಗಳ ತಂಡಗಳು ಕಾಯುತ್ತಿವೆ.