ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ, ಸಚಿವ ಎನ್.ಎಸ್.ಬೋಸರಾಜ್, ಬಿಲ್ಕೀಶ್ ಬಾನು, ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಜೆಡಿಎಸ್‌ನ ಟಿ.ಎನ್.ಜವರಾಯೀಗೌಡ ಸೇರಿದಂತೆ 11 ಮಂದಿ ವಿಧಾನ ಪರಿಷತ್ತಿಗೆ ಅವಿರೋಧ ಆಯ್ಕೆಯಾಗುವುದು ಖಚಿತ.
ವಿಧಾನಸಭೆಯಿಂದ ಪರಿಷತ್ತಿನ 11 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಇಂದು ಮೂರು ರಾಜಕೀಯ ಪಕ್ಷಗಳು ತಮ್ಮ ಸಂಖ್ಯಾಬಲದ ಮೇಲೆ ಗೆಲುವು ಸಾಧ್ಯವಿರುವಷ್ಟು ಅಭ್ಯರ್ಥಿಗಳನ್ನಷ್ಟೇ ಕಣಕ್ಕಿಳಿಸಿರುವುದರಿಂದ ನಾಮಪತ್ರ ಸಲ್ಲಿಸಿರುವ ಅಷ್ಟೂ ಮಂದಿಯೂ ಅವಿರೋಧ ಆಯ್ಕೆ ಆಗಲಿದ್ದಾರೆ.
ಕಾಂಗ್ರೆಸ್‌ಗೆ ಏಳು, ಬಿಜೆಪಿ ಮೂರು, ಜೆಡಿಎಸ್‌ಗೆ ಒಂದು ಸ್ಥಾನ
ಆಡಳಿತಾರೂಢ ಕಾಂಗ್ರೆಸ್‌ಗೆ ಸಂಖ್ಯಾಬಲದ ಮೇಲೆ ಏಳು ಸ್ಥಾನಗಳು ದಕ್ಕಲಿದ್ದು ಈ ಸ್ಥಾನಗಳಿಗೆ ಬೋಸರಾಜು, ಯತೀಂದ್ರ ಸಿದ್ದರಾಮಯ್ಯ, ಕೆ.ಗೋವಿಂದರಾಜು, ಐವಾನ್ ಡಿಸೋಜ, ಬಿಲ್ಕಿಶ್ ಬಾನು, ಜಗದೇವ್ ಗುತ್ತೇದಾರ್ ಹಾಗೂ ವಸಂತಕುಮಾರ್ ಪಕ್ಷದ ಅಭ್ಯರ್ಥಿಗಳಾಗಿ ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಪ್ರತಿಪಕ್ಷ ಬಿಜೆಪಿಗೆ ಮೂರು ಸ್ಥಾನ ದಕ್ಕಲಿದ್ದು ಆ ಸ್ಥಾನಗಳಿಗೆ ಸಿ.ಟಿ.ರವಿ, ಎನ್.ರವಿಕುಮಾರ್, ಎಂ.ಜಿ. ಮುಳೆ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು.
ಇನ್ನೊಂದು ಸ್ಥಾನ ಜೆಡಿಎಸ್‌ಗೆ ದಕ್ಕುತ್ತಿದ್ದು ಆ ಪಕ್ಷದ ಹಿರಿಯ ಮುಖಂಡ ಟಿ.ಎನ್. ಜವರಾಯೀಗೌಡ ನಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಪರಿಶೀಲನೆ ಜೂನ್ 4ರಂದು ನಡೆಯಲಿದ್ದು, ನಾಮಪತ್ರ ಹಿಂತೆಗೆದುಕೊಳ್ಳಲು ಜೂನ್ 6 ಕಡೆಯ ದಿನ, ಅಂದೇ ಚುನಾವಣಾಧಿಕಾರಿ ಅಧಿಕೃತವಾಗಿ ಜಯಗಳಿಸಿದವರ ಹೆಸರು ಘೋಷಿಸಲಿದ್ದಾರೆ.
ಯಾವುದೇ ರಾಜಕೀಯ ಪಕ್ಷಗಳು ತಮಗಿಲ್ಲದ ಮತ ಕಸಿಯಲು ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದಿರುವುದರಿಂದ ಅವಿರೋಧ ಆಯ್ಕೆಗೆ ರಹದಾರಿ ಮಾಡಿದೆ.
ಪ್ರಮುಖ ನಾಯಕರ ಉಪಸ್ಥಿತಿ
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಚಿವರುಗಳು ತಮ್ಮ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಖುದ್ದು ಹಾಜರಿದ್ದರು.
ಜವರಾಯೀಗೌಡ ನಾಮಪತ್ರ ಸಲ್ಲಿಸುವಾಗ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಸೇರಿದಂತೆ ಮುಖಂಡರುಗಳು ಉಪಸ್ಥಿತರಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ತಮ್ಮ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಹಾಜರಿದ್ದರು.