ಬೆಂಗಳೂರು: ನರೇಂದ್ರ ಮೋದಿ ನಾಯಕತ್ವದಲ್ಲಿ ಕೇಂದ್ರದಲ್ಲಿ ಹೊಸ ಸರ್ಕಾರ ರಚನೆ ಕುರಿತಂತೆ ಇಂದು ಸಂಜೆ ಎನ್‌ಡಿಎ ನಾಯಕರ ಒಕ್ಕೂಟದ ಸಭೆ ಜರುಗಲಿದೆ.
ದೆಹಲಿಯಲ್ಲಿ ಸಭೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಕರೆದಿದ್ದು, ಮಿತ್ರ ಪಕ್ಷದ ನಾಯಕರಿಗೆ ಆಹ್ವಾನ ನೀಡಿದ್ದಾರೆ.
ಮಿತ್ರಕೂಟಕ್ಕೆ ಆಹ್ವಾನ
ಎನ್‌ಡಿಎ ಮೈತ್ರಿಕೂಟಕ್ಕೆ ಲೋಕಸಭಾ ಚುನಾವಣೆಯಲ್ಲಿ ಸರ್ಕಾರ ರಚಿಸಲು ಬಹುಮತ ಬರುತ್ತಿದ್ದಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಕಾರ್ಯಪ್ರವೃತ್ತರಾಗಿ ತಮ್ಮ ಮಿತ್ರ ಪಕ್ಷಗಳ ಮುಖಂಡರನ್ನು ನಿನ್ನೆ ಮಧ್ಯಾನ್ಹದಿಂದಲೇ ಸಂಪರ್ಕಿಸಿ ಇಂದು ದೆಹಲಿಗೆ ಬರುವಂತೆ ಆಹ್ವಾನ ನೀಡಿದರು.
ಇದರ ಬೆನ್ನಲ್ಲೇ ಜೆ.ಪಿ ನಡ್ಡ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ತಮ್ಮ ಸಹಭಾಗಿತ್ವದ ಪಕ್ಷಗಳ ಮುಖಂಡರನ್ನು ಸಂಪರ್ಕಿಸಿ ದೆಹಲಿಗೆ ಬರುವಂತೆ ಮನವಿ ಮಾಡಿದರು.
ಮೋದಿ ಸರ್ವಾನುಮತದ ಆಯ್ಕೆ
ನಡ್ಡ ಅಧ್ಯಕ್ಷತೆಯಲ್ಲಿ ಸಭೆ ಜರುಗಲಿದ್ದು, ಒಕ್ಕೂಟದ ನಾಯಕರನ್ನಾಗಿ ಮೋದಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ, ನಂತರ ಸರ್ಕಾರ ರಚನೆ ಕುರಿತಂತೆ ಬಿಜೆಪಿ ಮುಖಂಡರು ಕೂಟದ ಸದಸ್ಯರೊಂದಿಗೆ ಚರ್ಚೆ ನಡೆಸಲಿದ್ದಾರೆ.
ನಂತರ ಸರ್ಕಾರದ ಸ್ವರೂಪ ಹೇಗಿರಬೇಕು, ಮೊದಲ ಹಂತದಲ್ಲಿ ಮಂತ್ರಿಮಂಡಲ ರಚನೆ ಅಲ್ಲದೆ, ಇತರ ರಾಜಕೀಯ ಪರಿಸ್ಥಿತಿ ಬಗ್ಗೆ ಸಮಾಲೋಚನೆ ಮಾಡಲಿದ್ದಾರೆ.
ಸಭೆಯ ನಂತರ ರಾಷ್ಟ್ರಪತಿಗಳನ್ನು ಭೇಟಿ ಮಾಡುವ ದಿನಾಂಕ ನಿಗದಿ ಪಡಿಸಿ ಎನ್‌ಡಿಎ ಮೈತ್ರಿಕೂಟಕ್ಕೆ ಬಹುಮತ ಬಂದಿದ್ದು, ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆಯ ಅವಕಾಶ ಕೋರಲಿದ್ದಾರೆ.
ಕುಮಾರಸ್ವಾಮಿಗೆ ಆಹ್ವಾನ
ಕರ್ನಾಟಕದಲ್ಲಿ ಎನ್‌ಡಿಎ ಕೂಟದಲ್ಲಿರುವ ಜೆಡಿಎಸ್‌ನ ರಾಜ್ಯಾಧ್ಯಕ್ಷ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಗೊಂಡಿರುವ ಎಚ್.ಡಿ.ಕುಮಾರಸ್ವಾಮಿ ದೆಹಲಿ ನಾಯಕರ ಆಹ್ವಾನದ ಮೇರೆಗೆ ತೆರಳಿದ್ದಾರೆ.
ನಿನ್ನೆ ಅಮಿತ್ ಷಾ, ನಡ್ಡ ಹಾಗೂ ಸಂತೋಷ್ ಅವರು, ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ ತಕ್ಷಣವೇ ದೆಹಲಿಗೆ ಬರುವಂತೆ ಆಹ್ವಾನ ನೀಡಿದರು.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿಕೂಟ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಅದರಲ್ಲಿ ಜೆಡಿಎಸ್ ಎರಡು ಸ್ಥಾನ ಗಳಿಸಿದೆ.